ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday, 21 October 2011

ನಮ್ಮ ವಾಕ್ಪಥದ ಉದ್ದೇಶ ಮತ್ತು ಆಶಯಗಳು

ವಾಕ್ಪಥ ತ೦ಡ ಹುಟ್ಟಿಕೊ೦ಡದ್ದೇ ಭಾಷಣಕಲೆಯನ್ನು ಪ್ರೋತ್ಸಾಹಿಸಲೆ೦ದು. ನಮ್ಮೊಳಗಿನ ಮಾತನಾಡುವ ಕಲೆಯನ್ನು ಸರಿದಾರಿಯಲ್ಲಿ ಸಾಗಿಸಲು ವಿಚಾರವನ್ನು ಕೇಳುಗನ ಹೃದಯದೊಳಗೆ ಇಳಿಸಲು ವಾಕ್ಪಥವೆ೦ಬ ಗರಡಿ ಮನೆ ಜನ್ಮತಾಳಿದ್ದು. ಇದರ ಉದ್ದೇಶ ಮತ್ತು ಆಶಯಗಳು ಹೀಗಿವೆ

ಉದ್ದೇಶ

೧) ಸಭಾಕ೦ಪನದ ನಿವಾರಣೆ
೨) ಉತ್ತೇಜನಾತ್ಮಕ ವಿಮರ್ಷೆ
೩) ಸಮಯ ಪರಿಪಾಲನೆ
೪) ನಿಗದಿತ ಸಮಯದಲ್ಲಿ ಪ್ರಭಾವಶಾಲಿಯಾದ ವಿಚಾರಮ೦ಡನೆ
೫) ಸಮಯ ಪ್ರಜ್ನೆ
೬) ಸಭಿಕರ ಗಮನವನ್ನು ಸೆರೆಹಿಡಿಯುವ ಕಲೆ
೭) ವಿಷಯ ಸ೦ಗ್ರಹ
೮) ನಾಯಕತ್ವ ಗುಣಗಳ ಬೆಳವಣಿಗೆ
೯) ಜವಾಬ್ದಾರಿಗಳ ನಿರ್ವಹಣೆ
೧೦) ಸ೦ಘಟನಾ ಚಾತುರ್ಯದ ಬೆಳವಣಿಗೆ
೧೧) ತ೦ಡದಲ್ಲಿ ಸಕ್ರಿಯವಾದ ಪಾತ್ರ ನಿರ್ವಹಣೆ
೧೨) ಶುದ್ಧ ಕನ್ನಡ ಬಳಕೆ

ಮು೦ದಿನ ದಿನಗಳಲ್ಲಿ ವಾಕ್ಪಥದ ಗುರಿ ಆಶಯಗಳು ಇ೦ತಿವೆ

ಆಶಯ

೧) ಕಿರಿಯರಲ್ಲಿ ಭಾಷಣ ಕಲೆಯ ಬೆಳವಣಿಗೆ
೨) ಗ್ರಾಮೀಣ ಮಟ್ಟದಲ್ಲಿ ವಾಕ್ಪಥವನ್ನು ಬೆಳೆಸುವುದು
೩) ಸಾಮಾಜಿಕ ಕಾರ್ಯಗಳಲ್ಲಿ ಸ೦ಪೂರ್ಣ ತೊಡಗಿಸಿಕೊಳ್ಳುವಿಕೆ
೪)ಪುಸ್ತಕ ಪ್ರಕಟಣೆ
೫) ವಿಚಾರ ಮ೦ಥನ ಕಾರ್ಯಕ್ರಮಗಳ ಆಯೋಜನೆ
೬) ಸ೦ಸ್ಕೃತಿಯ ಉಳಿಕೆ ಮತ್ತು ಪೋಷಣೆಗೆ ಕಾರ್ಯಕ್ರಮಗಳು
೭) ಸಾಹಿತ್ಯಾತ್ಮಕ ಕಾರ್ಯಕ್ರಮಗಳಲ್ಲಿ (ಕಥಾ ಕಮ್ಮಟ ಕಾವ್ಯವಾಚನ ಇತ್ಯಾದಿ) ತೊಡಗಿಸಿಕೊಳ್ಳುವಿಕೆ
೮) ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ಆಯೋಜನೆ
೯) ಕಿರಿಯರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು

ವಾಕ್ಪಥದ ಸಹಯೋಗದೊ೦ದಿಗೆ ಪುಸ್ತಕ ಪರಿಷೆ. ಇದೇ ಅಕ್ಟೋಬರ್ ೩೦ ರ೦ದು

ಪುಸ್ತಕ ಪರಿಷೆ
     ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು ನಾವು ಓದಿರುವುದಿಲ್ಲ ಮತ್ತು ಅವು ಕೆಲವೊಮ್ಮೆ ಮರೆಯಾಗಿಬಿಡುತ್ತವೆ ಕೂಡ. ಇವೆಲ್ಲವನ್ನೂ ಒ೦ದೆಡೆ ಸೇರಿಸುವ ಮತ್ತು ಹಳೆಯ ಪುಸ್ತಕಗಳನ್ನು ಕಲೆ ಹಾಕಿ ಓದುಗರಿಗೆ ಸಿಗುವ೦ತೆ ಮಾಡುವ ಕಾರ್ಯಕ್ರಮವನ್ನು ಸೃಷ್ಟಿ ಕಲಾಲಯ ಮೂರುವರ್ಷಗಳಿ೦ದ ಮಾಡುತ್ತಿದೆ.ವಿಶೇಷವೆ೦ದರೆ ಬ೦ದವರೆಲ್ಲರೂ ಒ೦ದು ಪುಸ್ತಕವನ್ನು ಉಚಿತವಾಗಿ ಕೊ೦ಡೊಯ್ಯಬಹುದು
     ನಮ್ಮ ಮನೆಗಳಲ್ಲಿ ನಾವು ಓದಿದ, ಓದಿ ಕಪಾಟಿನಲ್ಲಿಟ್ಟಿದ್ದ ಪುಸ್ತಕಗಳನ್ನು ಹೊರತೆಗೆದು ಆಸಕ್ತರು ಓದುವ೦ತೆ ಮಾಡಲು ಇದೊ೦ದು ಸದವಕಾಶವನ್ನು ಸೃಷ್ತಿ ನಮಗೆ ಮಾಡಿಕೊಡುತ್ತಿದೆ. ಈಗಾಗಲೇ ಒ೦ದು ಲಕ್ಷ ಪುಸ್ತಕಗಳು ಸ೦ಗ್ರಹವಾಗಿದೆ. ಇನ್ನೂ ಬರುತ್ತಿವೆ ಕೂಡ. ಪರಿಷೆಯಲ್ಲಿ ನಡೆಯುತ್ತಿರುವಾಗ "ಅರೆ! ಈ ಪುಸ್ತಕ ನಾನು ಏಳನೆ ಕ್ಲಾಸಿನಲ್ಲಿದ್ದಾಗ ಟೆಕ್ಸ್ಟ್ ಬುಕ್ಕಾಗಿತ್ತು". ಈ ಉದ್ಘಾರ ನಿಮ್ಮಿ೦ದ ಬರದಿದ್ದರೆ ಕೇಳಿ! ಖ೦ಡಿತ, ಹಳತು, ಹೊಸತು, ಎ೦ದೋ ಮನಸಿನ ಪಟಲದಿ೦ದ ಮರೆಯಾದ ಪುಸ್ತಕಗಳು,  ಸಿಗದೆ ಕಾಡುವ ಪುಸ್ತಕಗಳು, ಬಾಲ್ಯವನ್ನು ನೆನಪಿಸುವ ಪುಸ್ತಕಗಳು ಎಲ್ಲವೂ ಇಲ್ಲಿ ಲಭ್ಯ ಮತ್ತು ಇವೆಲ್ಲವೂ ನೀವೇ ಕೊಟ್ಟ೦ಥವು ಕೂಡ. ನಿಮ್ಮ ಪುಸ್ತಕಗಳನ್ನು ಇತರರು ಓದುವ ಮತ್ತು ಅವರ ಪುಸ್ತಕಗಳನ್ನು ನೀವು ಓದುವ ಮೂಲಕ ಇಬ್ಬರೂ ಪುಸ್ತಕಸ೦ಬ೦ಧಿಗಳಾಗಿ.
     ನಾಲ್ಕನೆಯ ಪುಸ್ತಕ ಪರಿಷೆಯನ್ನು ಸೃಷ್ಟಿಯವರು ದಿನಾ೦ಕ ೩೦ ಅಕ್ಟೋಬರ್ ರ೦ದು ಬಸವನ ಗುಡಿಯ ನೆಟ್ಟಕಲ್ಲಪ್ಪ ವೃತ್ತದ ವಾಲಿಬಾಲ್ ಗ್ರೌ೦ಡಿನಲ್ಲಿ ಬೆಳಗ್ಗೆ ೧೦ರಿ೦ದ ಸ೦ಜೆ ೫ರವರೆಗೆ ಹಮ್ಮಿಕೊ೦ಡಿದ್ದಾರೆ. ಬನ್ನಿ ಪುಸ್ತಕಸ೦ಸ್ಕೃತಿಯನ್ನು ಬೆಳೆಸೋಣ.
-----------------------------------
ಆತ್ಮೀಯರೇ ವಾಕ್ಪಥದ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ. ಭಾಷಣಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊ೦ಡ ಗು೦ಪು ನಮ್ಮ ವಾಕ್ಪಥ. ಕನ್ನಡದಲ್ಲಿ ನಿರರ್ಗಳವಾಗಿ ಮತ್ತು ಭಾಷಣದ ಹಾದಿ ತಪ್ಪದ೦ತೆ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಕೇಳುಗನಿಗೆ ತಲುಪುವ೦ತೆ ಮಾಡಲು ಒ೦ದು ಗರಡಿ ಮನೆ ಸೃಷ್ಟಿಯಾಯಿತು ಅದು ವಾಕ್ಪಥ. ಏಳು ಹೆಜ್ಜೆಗಳನ್ನು ಪೂರೈಸಿದ ವಾಕ್ಪಥದ ಮುಡಿಗೆ ಮೊದಲನೆಯ ಗರಿ ಪುಸ್ತಕ ಪರಿಷೆಯ ನಿರ್ವಹಣೆ. ಹೌದು ಆತ್ಮೀಯರೇ ಇಡೀ ಸಮಾರ೦ಭವನ್ನು ವಾಕ್ಪಥ ನಿರ್ವಹಿಸಲಿದೆ. ಇಲ್ಲಿ ತಯಾರಾದ ಪಟುಗಳು ತಮ್ಮ ನಿರೂಪಣೆಯ ಕುಶಲತೆಯನ್ನು ಮಾತಿನ ಜಾಣ್ಮೆಯನ್ನು ಕಾರ್ಯಕ್ರಮದ ವಿಭಿನ್ನ ಶೈಲಿಯ ನಿಭಾವಣೆಯನ್ನು ಮಾಡಲಿದ್ದಾರೆ. ಏಳು ಹೆಜ್ಜೆಗಲಲ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ ಪಟುಗಳು ಇಲ್ಲಿ ಕನ್ನಡ ಸಾಹಿತ್ಯ ಪುಸ್ತಕ ಪರಿಚಯ ಕವನ ಕಥೆ ಎಲ್ಲದರ ಬಗ್ಗೆ ಮಾತನಾಡಲಿದ್ದಾರೆ. ಒ೦ದೇ ದಿನ ಹಲವಾರು ವಿಷಯ ಮತ್ತು ಪ್ರಾಕಾರಗಳ ಬಗ್ಗೆ ಕೇಳುವ ಸದವಕಾಶ ನಿಮ್ಮದು. ಬನ್ನಿ ಪಾಲ್ಗೊಳ್ಳಿ. ಸೃಷ್ಟಿ ಮತ್ತು ವಾಕ್ಪಥದ ಸಹಯೋಗದೊ೦ದಿಗೆ ನಡೆಯುವ ಪುಸ್ತಕ ಪರಿಷೆ ಮತ್ತೊ೦ದು ಸಾಹಿತ್ಯ ಸಮ್ಮೇಳನವಾಗಲಿ.
ನಿಮ್ಮ ಬರವನ್ನು ಕಾಯುತ್ತಾ
ಸೃಷ್ಟಿ ಮತ್ತು ವಾಕ್ಪಥ ತ೦ಡ

Monday, 5 September 2011

ನಮ್ಮಲ್ಲಿನ ಅಂತರ್ಗತ ಶಕ್ತಿಗಳು

ನಮ್ಮಲ್ಲಿ ಎಲ್ಲರೂ ನಾಯಕರಲ್ಲ. ಆದರೆ ಎಲ್ಲರಲ್ಲಿಯೂ ನಾಯಕರಾಗುವ, ಎಲ್ಲದರಲ್ಲಿಯೂ ಗೆಲುವು ಸಾಧಿಸಬೇಕೆನ್ನುವ ಅಧಮ್ಯ ಆಸೆ ಆಕಾಂಕ್ಷೆಗಳಿರುತ್ತವೆ. ಹಾಗಾದರೆ ಕೆಲವರೇ ನಾಯಕರಾಗುವುದೇಕೆ?, ಅಥವಾ ನಾವು ಎಲ್ಲದರಲ್ಲಿಯೂ ಗೆಲುವು ಸಾಧಿಸಲಾರೆವು ಏಕೆ ?

ಗೆಳೆಯರೇ ಬನ್ನಿ. ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯಬಹುದಾದಂತಹ ಗುಣಗಳು ನಮ್ಮಲ್ಲಿ ಅಂತರ್ಗತವಾಗಿವೆ. ಅವುಗಳನ್ನು ನಾವು ನಮ್ಮ ಒತ್ತಡ, ಸಿಟ್ಟು ಸೆಡಕು, ಹಮ್ಮು ಬಿಗುಮಾನಗಳಿಂದಾಗಿ ಅಂತರ್ಯದಲ್ಲೇ ಅದುಮಿಟ್ಟುಕೊಂಡಿದ್ದೇವೆ. ಅವುಗಳನ್ನು ಹೊತೆಗೆದರೆ ಖಂಡಿತಾ ನಾವು ನಮ್ಮ ಪ್ರತಿ ಕಾರ್ಯದಲ್ಲಿಯೂ ಗೆಲುವು ಸಾಧಿಸ ಬಲ್ಲೆವು.
ಅವು ಯಾವುವು ಈಗ ನೋಡೋಣ.

ಹನ್ನೊಂದು ನಮ್ಮಲ್ಲಿನ ಅಂತರ್ಗತ ಶಕ್ತಿಗಳು ಹೀಗಿವೆ.


೧. ಕಾಮನ್ ಸೆನ್ಸ್: ತಾರ್ಕಿಕ ಆಲೋಚನೆ, ಒಂದು ಸಮಸ್ಯೆಯ ಪರಿಹಾರವನ್ನು ಗುರುತಿಸುವುದಕ್ಕಾಗಿ ಸಮಸ್ಯೆಯನ್ನು ಯಾವ ಕಡೆಯಿಂದ ಎದುರಿಸಬೇಕೆನ್ನುವುದೇ ಕಾಮನ್ ಸೆನ್ಸ್. ನಮ್ಮನ್ನು ಪ್ರಾಣಿಗಳಿಂದ ಭಿನ್ನವಾಗಿ ಮಾಡಿರುವುದೇನು? ನಮ್ಮ ಕೈ ಬೆರಳುಗಳು. ಕೈಗಳಿಂದಲೇ ಆಯುಧಗಳ ಸಹಾಯದಿಂದ ಕೂಡಾ ಬೇಟೆಯಾಡಬಹುದೆಂದು ಗ್ರಹಿಸಿದ ಕಾಮನ್ ಸೆನ್ಸ್ ನಿಂದ. ಅಲ್ಲಿಂದಲೇ ಮಾನವನ ಚಕ್ರಗಳಿಂದ ಮಂಗಳ ಲೋಕದವರೆಗಿನ ಯಾನವು ಆರಂಭವಾಗಿದ್ದು.

೨. ಪಾಜಿಟಿವ್ ಥಿಂಕಿಂಗ್: ವಾಸ್ತವವಾದ ರೂಢಿಗತ ಆಲೋಚನೆ. ನಿಮಗೆ ಒಂದು ಸಂದರ್ಶನಕ್ಕಾಗಿ ಮೆಜಿಸ್ಟಿಕ್ ನಿಂದ ಜಿಗಣಿಗೆ ಹೋಗಬೇಕಾಗಿದೆಯೆಂದುಕೊಳ್ಳಿ. ನಿಮ್ಮ ಆಲೋಚನೆಯೆಲ್ಲವೂ ಅಲ್ಲಿನ ಸಂದರ್ಶನಕ್ಕೆ ಕೇಳಬಹುದಾದ ಪ್ರಶ್ನೆಗಳಲ್ಲಿ ಅಥವಾ ಅಲ್ಲಿನ ಮುಂದಾಗಬಹುದಾದ ಫಲಿತಾಂಶದ ಆಲೋಚನೆಯಲ್ಲಿರುತ್ತೆಯೇ ವಿನಹಾ, ಅಲ್ಲಿಗೆ ತಲುಪುವಾಗ ಆಗಬಹುದಾದಂತಹ ಬೇರೆ ಆಕಸ್ಮಿಕಗಳ ಬಗೆಗೆ ಅಲ್ಲ. ವಾಸ್ತವವಾಗಿ ನಮ್ಮ ಸಂದರ್ಶನದ ಉತ್ತೀರ್ಣ ಅನುತ್ತೀರ್ಣತೆಗಳಷ್ಟೇ ನಡುವೆ ಸಂಭವಿಸಬಹುದಾದ ಆಕಸ್ಮಿಕಗಳ ಪಾಲೂ ಇರುತ್ತವೆಯಾದರೂ ಅದನ್ನು ನಾವು ಗಮನಿಸುವುದೇ ಇಲ್ಲ, ಅಂದರೆ ನಮಗೆ ನಮ್ಮ ಮೇಲಿನ ನಂಬಿಕೆಗಿಂತಲೂ ವಾಹನದ ಚಾಲಕನ ಮೇಲಿನ ನಂಬುಗೆಯೇ ಜಾಸ್ತಿಯಾಯಿತಲ್ಲ!!. ನಾವು ವಾಸ್ತವ ವಾಗಿ ರೂಢಿಗತ ಆಲೋಚನೆಯನ್ನೂ ಸೇರಿಸಿ ಆಲೋಚಿಸಿದರೆ ನಮಗೆ ಬರಬಹುದಾದ ಟೆನ್ಷನ್ ನಿಂದ ಮುಕ್ತಿ ಕಾಣಬಹುದು ನಮ್ಮ ಮೇಲಿನ ನಂಬುಗೆ ನಮಗೆ ಜಾಸ್ತಿಯಾಗಿ.

೩. ಏಕಾಗ್ರತೆ: ಮೆದುಳು ಒಂದು ಜನ ನಿಬಿಡ ಹೆದ್ದಾರಿಯಂತೆ , ಅದರಲ್ಲಿ ಸೈಕಲ್ ನಿಂದ ಹಿಡಿದು ಸಾಮಾನು ತುಂಬಿದ ಲಾರಿಯ ವರೆಗೆ ಹೋಲಿಸ ಬಲ್ಲಂತಹಾ ಆಲೋಚನೆಗಳು ದೊಡ್ದ ಶಬ್ದ ದೊಂದಿಗೆ ಅತ್ತಿತ್ತ ಪ್ರಯಾಣ ಮಾಡುತ್ತಿರುತ್ತವೆ. ಲೆಕ್ಕದ ತರಗತಿ ಮುಗಿದ ಕೂಡಲೇ ವಿಜ್ಞಾನ ವಿಷಯಕ್ಕೆ ಸನ್ನದ್ಧನಾಗಿರುವ ವಿಧ್ಯಾರ್ಥಿಯಂತೆ ನಮ್ಮ ಮನಸ್ಸಿನಲ್ಲೂ ಪ್ರತಿಯೊಂದೂ ವಿಷಯದ ಬಗೆಗೆ ಜೀವನದಲ್ಲಿ ಕಂಪಾರ್ಟಮೆಂಟಲೈಜೇಶನ್ ಮಾಡಿಟ್ಟುಕೊಳ್ಳಬೇಕು, ಇದನ್ನೇ ಕಲಿತುಕೊಳ್ಳಬೇಕಾಗಿರುವುದು.

೪. ಮಟ್ಟ ಸಾಮರ್ಥ್ಯ: ಗೊರ್ಬಚೇವ್, ವಿನೋದ್ ಕಾಂಬ್ಳಿ, ಧೀರೂಬಾಯ್ ಅಂಬಾನಿ, ಮೈಕೇಲ್ ಕಾಕ್ಸನ್, ಮತ್ತು ರಾಜೀವ್ ಗಾಂಧಿ, ಸೈಫ್ ಆಲಿಖಾನ್, ಅಜಯ ಜಡೇಜಾ ಇವರಿಬ್ಬರಲ್ಲಿ ವ್ಯತ್ಯಾಸ ಏನು ಗೊತ್ತಾ?
ಎರಡನೆಯವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ ಸ್ವ ಸಾಮರ್ಥ್ಯದಿಂದ ತಮ್ಮ ಮಟ್ಟ ಕಾಯ್ದುಕೊಂಡರೆ ಇನ್ನುಳಿದವರು ತನ್ನ ಸ್ವ ಸಾಮರ್ಥ್ಯದಿಂದಲೇ ಈಗಿನ ಮಟ್ಟಕೆ ಏರಿದವರು. ನಿರಂತರ ಪರಿಶ್ರಮದಿಂದಲೇ ಇವು ಸಾಧ್ಯ.ಅದಕ್ಕೇ ನಾವು ನಮ್ಮ ಮಟ್ಟ ಮತ್ತು ಸಾಮರ್ಥ್ಯವನ್ನು ಗೃಹಿಸಿಯೇ ನಮ್ಮ ಮುಂದಿನ ದಾರಿಯನ್ನೂ ಕಂಡುಕೊಂಡು ಕೃಮಿಸಬೇಕು.

೫. ಕನಸುಗಳು ಕನಸುಗಳೇ ಆದರೆ ಅವನ್ನು ನೆಸಸು ಮಾಡಬೇಕಾದರೆ ನಮ್ಮ ಗುರಿಯನ್ನು ಕಂಡು ಕೊಂಡು ಅದರತ್ತ ಸಾಗುವುದಕ್ಕೆ ನಮ್ಮ ಚಿಕ್ಕಂದಿನ ಓದಿದ ಕಥೆಗಳು ಕಥೆಗಳು ನಾವು ನೋಡುವ ಸಿನೇಮಾ ಮುಂತಾದವುಗಳು ನಮ್ಮಲ್ಲಿ ಪ್ರೇರಣೆಯಾಗಿಸಿಕೊಂಡು ಮುಂದುವರಿಯಬಹುದು.

೬. ನಾಯಕತ್ವದ ಲಕ್ಷಣಗಳು: ನಾನಿಲ್ಲಿ ಹೇಳುತ್ತಿರುವುದು ಗಾಂಧಿ ಸಾಯಿಬಾಬಾ ರಂತವರ ಎಲ್ಲರನ್ನೂ ಅನುಯಾಯಿ ಮಾಡಿಸಿಕೊಂಡಂತಹ ನಾಯಕತ್ವದ ಬಗೆಗಲ್ಲ. ಬದಲು ನಮ್ಮ ನಾಲ್ಕು ಜನ್ಬ ಸ್ನೇಹಿತರಲ್ಲಿಯೇ ಒಬ್ಬ ನಾಯಕನಿರುವನು, ನಮಗೆ ಇಷ್ಟವಿಲ್ಲದಿದ್ದರೂ ಅವನ ಇಷ್ಟದ ಸಿನೇಮಾಕ್ಕೆ ಅವನೊಂದಿಗೆ ಹೋಗುತ್ತೇವೆ, ಇನ್ನೊಮ್ಮೆ ನಿಮಗಿಷ್ಟವಾದ ಸಿನೇಮಾಕೆ ಅವನನ್ನು ಕೊಂಡು ಹೋಗುವ ಕ್ಷಮತ್ವ ನಿಮ್ಮಲ್ಲಿರಬೇಕು. ನಾಯಕನಾದವನಿಗೆ ಸಡಿಲ ಹಿಡಿತ ಎರಡೂ ಲಕ್ಷಣಗಳಿರಬೇಕು.

೭. ಪ್ರೇರಣೆ: ಪ್ರಮುಖ ವ್ಯಕ್ತಿಗಳ ಜೀವನಾ ವಿಧಾನದಿಂದ ನಾವು ಪ್ರೇರಣೆ ಹೊಂದ ಬೇಕು, ಅವರನ್ನೇ ದೇವರಂತೆ ಪೂಜಿಸುವುದಲ್ಲ. ಅವರಲ್ಲಿನ ಒಳ್ಳೆಯ ಅಂಶಗಳನ್ನೇ ತೆಗೆದುಕೊಂಡು ಅವರು ಮಾಡಿದ ತಪ್ಪನ್ನು ನಮಗೆ ಪಾಠವಾಗಿರಿಸಿಕೊಂಡು ನಮ್ಮ ಬದುಕಿನಲ್ಲಿ ಸೋಪಾನ ನಿರ್ಮಿಸಿಕೊಳಬೇಕು.

೮. ಅಂತರ್ಮುಖಲೋಚನೆ: ನಾವು ಯಾವ ಕ್ಷೇತ್ರದಲ್ಲಿ ಅಭಿವ್ರದ್ಧಿ ಸಾಧಿಸಬಲ್ಲೆವೋ ನಮ್ಮ ಲ್ಲಿಯ ಆಶಕ್ತಿಯನ್ನು ಸಾಧ್ಯವಾದಷ್ಟೂ ಬೇಗ ತಿಳಿದು ಕೊಳುವುದೇ ಅಂತರ್ಮುಖಾಲೋಚನೆ.

೯. ಭಾಷೆ, ಸಂಭಾಷಣೆ: ಮನುಷ್ಯರಿಗೆ ಪ್ರಾಣಿಗಳಿಗೆ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಭಾಷೆಯಾದರೆ ಮನುಷ್ಯರನ್ನೂ ಶ್ರೇಷ್ಠರನ್ನು ಬೇರ್ಪಡಿಸುವುದು ಸಂಭಾಷಣೆ ಭಾಷೆಯ ಮೇಲಿನ ಅಧಿಕಾರ.

೧೦. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು:

೧೧. ಶ್ರೇಷ್ಠತೆಯನ್ನು ಗುರುತಿಸುವುದು:
--------------------------------------------------------
ಬೆಳ್ಳಾಲ ಗೋಪೀನಾಥ ರಾವ್ ಅವರ ಭಾಷಣದ ಸಾರಾಂಶ

ವಾಕ್ಪಥ ಆರನೇ ಗೋಷ್ಠಿಯ ದ್ರುಶ್ಯಾವಳಿಗಳು


ರಘು ಎಸ ಪಿಯವರ ಭಾಷಣ





ಹೊಳೆ ನರಸಿಪುರ ಮ೦ಜುನಾಥರ ಭಾಷಣ


ಭಾಷಣದ ವಿಮರ್ಶೆಗಳು


ಆಶುಭಾಷಣ








ವಾಕ್ಪಥದ ಸಮಯಪರಿಪಾಲನೆಯ ವಿವರ ಪಾರ್ಥಸಾರಥಿಯವರಿ೦ದ

ಬೆಳ್ಳಾಲ ಗೋಪಿನಾಥ ರಾಯರಿ೦ದ ವಿಶೇಷ ಭಾಷಣ






 ಮುಕ್ತಾಯ

Sunday, 21 August 2011

ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ

ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್ನು ಪೂರೈಸಿ ಆರನೇ ಹೆಜ್ಜೆಗೆ ಕಾಲಿಟ್ಟಿತ್ತು. ಈ ಬಾರಿ ಗೋಷ್ಟಿಯ ನಿರ್ವಹಣೆ ಹೊತ್ತಿದ್ದವರು ವಾಕ್ಪಥದ ಸೃಷ್ಟಿಕರ್ತ ಶ್ರೀಯುತ ಪ್ರಭು ಮೂರ್ತಿಯವರು. ವಾಕ್ಪಥದ ಮುಖ್ಯ ನಿಯಮ ಸಮಯ ಪರಿಪಾಲನೆ. ಅದರಂತೆ ಸರಿಯಾಗಿ ೩.೧೫ ಕ್ಕೆ ಗೋಷ್ಠಿ ಪ್ರಾರಂಭವಾಯಿತು. ಈ ಬಾರಿಯ ಗೋಷ್ಟಿಯ ಭಾಷಣಕಾರರು ಶ್ರೀಯುತ ರಘು ಎಸ್.ಪಿ ಹಾಗೂ ಶ್ರೀಯುತ ಹೊಳೆನರಸಿಪುರ ಮಂಜುನಾಥ ಅಲಿಯಾಸ್ ದುಬೈ ಮಂಜಣ್ಣ ಅವರು. ವಿಶೇಷ ಭಾಷಣವನ್ನು ಶ್ರೀಯುತ ಬೆಳ್ಲಾಲ ಗೋಪಿನಾಥರಾಯರು ಮಂಡಿಸಲಿದ್ದರು. ಭಾಷಣಕಾರ ಪರಿಚಯವನ್ನು ಮಾಡಿಕೊಟ್ಟ ಪ್ರಭು ಮೂರ್ತಿಯವರು ರಘುರವರನ್ನು ತಮ್ಮ ಭಾಷಣ ಮಂಡಿಸಲು ವೇದಿಕೆಗೆ ಆಹ್ವಾನಿಸಿದರು.
ರಘುರವರು ಆಯ್ದುಕೊಂಡಿದ್ದ ಭಾಷಣದ ವಿಷಯ ರೈತ ಮತ್ತು ಕೈಗಾರಿಕೆ ಹಾಗೂ ರೈತ ಮತ್ತು ಕಾನೂನು 
ಇತ್ತೀಚಿನ ದಿನಗಳಲ್ಲಿ ಆಧುನೀಕರಣ, ಜಾಗತೀಕರಣ, ನಗರೀಕರಣದ ಗುಂಗಿನಲ್ಲಿ ಬಿದ್ದು ಜನರು ರೈತರನ್ನು ರೈತಾಪಿ ವರ್ಗದವರನ್ನು ಮರೆಯುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಕೈಗಾರಿಕೋದ್ಯಮದಿಂದ ರೈತನ ಭೂಮಿಗಳನ್ನು ಕಬಳಿಸಿ ಕೈಗಾರಿಕೆಗಳನ್ನು ನಿರ್ಮಿಸಿ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತಿದ್ದಾರೆ. ಅನ್ನ ನೀಡುವ ರೈತನನ್ನು ಕಡೆಗಣಿಸುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಒಂದು ಕೈಗಾರಿಕೆ ಸ್ಥಾಪನೆಯಿಂದ ೧೦೦ ಜನ ಉದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡಬಹುದು. ಆದರೆ ಎಷ್ಟು ವರ್ಷ ಉದ್ಯೋಗ ನೀಡುತ್ತಾರೆ. ಅದೇ ಒಂದು ಎಕರೆ ಜಮೀನಿನಲ್ಲಿ ಒಬ್ಬ ರೈತ ತನ್ನ ಜೀವಿತಾವಧಿಯವರೆಗೂ ಅನ್ನ ನೀಡಬಲ್ಲ. ಅಂಥಹ ರೈತನ ಜಮೀನನ್ನು ನಮ್ಮ ಬಂಡವಾಳಶಾಹಿಗಳು ಕೈಗಾರಿಕೆಯ ಹೆಸರಿನಲ್ಲಿ ಕಬಳಿಸಿ ಆ ಕೈಗಾರಿಕೆಯಿಂದ ಬಿಡುವ ತ್ಯಾಜ್ಯದಿಂದ ನೀರನ್ನು ಕಲುಶಿತಗೊಳಿಸಿ ಭೂಮಿಯ ಫಲವತ್ತತೆಯನ್ನು ಕುಂಟಿಥಗೊಳಿಸಿ ಆ ಪ್ರದೇಶದಲ್ಲಿ ಒಂದು ಕಾಂಗ್ರೆಸ್ ಗಿಡ ಸಹ ಬೆಳೆಯದಂತೆ ಮಾಡುತ್ತಿದ್ದಾರೆ. ಇದು ಹೀಗೆ ಸಾಗಿದರೆ ಈ ದೇಶದ ಬೆನ್ನೆಲುಬಾಗಿರುವ ರೈತನ ಪರಿಸ್ಥಿತಿ ಏನು. ಇದು ಮೊದಲನೆಯ ಹಂತ
ಎರಡನೆಯ ಹಂತದಲ್ಲಿ ರೈತ ಮತ್ತು ಕಾನೂನಿನ ವಿಷಯಕ್ಕೆ ಬಂದರೆ ನಮ್ಮ ಮಣ್ಣಿನ ಮಕ್ಕಳು ಕಲ್ಲಿನ ಮಕ್ಕಳೆಂಬ ರಾಜಕೀಯ ವ್ಯಕ್ತಿಗಳು ನಾವು ನಮ್ಮ ಅಧಿಕಾರಾವಧಿಯಲ್ಲಿ ರೈತನಿಗೆ ಶೇಕಡಾ ಎರಡು ಪ್ರತಿಶತ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಅಲ್ಲಿ ನಡೆಯುತ್ತಿರುವುದೇನು ಯಾವುದೇ ಗ್ರಾಮೀಣ ಬ್ಯಾಂಕಿಗೆ ನೀವು ಹೋದರೆ ಅಲ್ಲಿ ಎರಡು ಪ್ರತಿಶತ ದರದಲ್ಲಿ ಸಾಲ ಪಡೆದ ರೈತ ಅದೇ ಬ್ಯಾಂಕಿನಲ್ಲಿ ೮ ಪ್ರತಿಶತ ಬಡ್ಡಿ ದರಕ್ಕೆ ಥೆವಣಿ ಹೂಡುತ್ತಿದ್ದಾನೆ. ಸ್ವಾಮಿ ನಮ್ಮ ರೈತನಿಗೆ ನಿಮ್ಮ ಸಾಲ ಬೇಡ ಸ್ವಾಮಿ. ನಮ್ಮ ರೈತ ಸ್ವಾವಲಂಬಿ ಆತನಿಗೆ ದುಡ್ಡಿನ ಅವಶ್ಯಕತೆ ಬಂದರೆ ತಾನು ಬೆಳೆದ ಬೆಳೆ ಮಾರಿ ಹಣ ಸಂಪಾದಿಸುತ್ತಿದ್ದಾನೆ. ಆತನಿಗೆ ಅವಶ್ಯಕತೆ ಇರುವುದು ಉತ್ತಮ ಗೊಬ್ಬರ, ಸಬ್ಸಿಡಿ ದರದಲ್ಲಿ ಬೀಜಗಳು ಹಾಗೂ ತಾನು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಇಷ್ಟು ಕೊಡಿ ಸಾಕು. ಆದರೆ ನೀವು ಮಾಡುತ್ತಿರುವುದು ಏನು ಆತನಿಗೆ ಸಾಲ ನೀಡಿ ಆತನನ್ನು ಸೋಮಾರಿಯಾಗಿ ಮಾಡಿ ದಾಸ್ಯಕ್ಕೆ ಗುರಿ ಮಾಡುತ್ತಿದ್ದೀರ.
ಇವಿಷ್ಟು ರಘು ಅವರ ಭಾಷಣದ ಸಾರಾಂಶ. ರಘು ಅವರು ತಮಗಿ ನಿಗದಿ ಪಡಿಸಿದ ಹತ್ತು ನಿಮಿಷಕ್ಕಿಂತ ಸ್ವಲ್ಪವೆ ಜಾಸ್ತಿ ಸಮಯ ತೆಗೆದುಕೊಂಡು ತಮ್ಮ ಭಾಷಣವನ್ನು ಪ್ರಭಾವಶಾಲಿಯಾಗಿ ಮಂಡಿಸಿದರು. ಇನ್ನು ಇವರ ಭಾಷಣ ವಿಮರ್ಶಕರಾಗಿ ಶ್ರೀಯುತ ಹರೀಶ್ ಆತ್ರೇಯ ಅವರು ತಮ್ಮ ಅನಿಸಿಕೆಯನ್ನು ತಿಳಿಸಿದರು. ರಘು ಅವರ ಭಾಷಣದಲ್ಲಿ ಒಂದೇ ಒಂದು ಋಣಾತ್ಮಕ ಅಂಶವೆಂದರೆ ಅಲ್ಲಲ್ಲಿ ಆಂಗ್ಲ ಪದಗಳನ್ನು ಬಳಸಿದ್ದು ಇಷ್ಟು ಬಿಟ್ಟರೆ ಅವರ ಭಾಷಣ ಸೊಗಸಾಗಿತ್ತು ಎಂದು ಹೇಳಿ ತಮ್ಮ ವಿಮರ್ಶೆಯನ್ನು ತಿಳಿಸಿದರು.
ಎರಡನೇ ಭಾಷಣಕಾರರಾಗಿ ಶ್ರೀಯುತ ಮಂಜುನಾಥ ಅವರು ಆಯ್ದುಕೊಂಡ ವಿಷಯ ಇಂದಿನ ಭಾರತದಲ್ಲಿ ಭ್ರಷ್ಟಾಚಾರ ಹಾಗೂ ನೈತಿಕತೆ
ಭ್ರಷ್ಟಾಚಾರ ಇಂದು ನೆನ್ನೆಯದಲ್ಲ ಪುರಾಣ ಕಾಲದಿಂದಲೂ ನಡೆದುಕೊಂಡೇ ಬಂದಿದೆ ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಭ್ರಷ್ಟಾಚಾರ ಕಾಣಬಹುದು. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ರಥದ ಚಕ್ರ ಮಣ್ಣಿನಲ್ಲಿ ಹೂತು ಹೋಗಿದ್ದಾಗ ಕರ್ಣನು ರಥವನ್ನು ಮೇಲೆತ್ತುವ ಸಮಯದಲ್ಲಿ ಅರ್ಜುನನಿಗೆ ಬಾಣ ಹೂಡಲು ಸೂಚಿಸಿದ ಕಪಟನಾಟಕ ಸೂತ್ರಧಾರಿ ಕೃಷ್ಣ ಮಾಡಿದ್ದು ಅದನ್ನೇ ಅಲ್ಲವೇ. ಹಾಗೆ ಭ್ರಷ್ಟಾಚಾರ ಅಂದಿನಿಂದಲೂ ಇದೆ. ನಮಗೆಲ್ಲ ತಿಳಿದಿರುವಂತೆ ಮನೆಯೇ ಮೊದಲ ಪಾಠಶಾಲೆ ಹಾಗೆ ಭ್ರಷ್ಟಾಚಾರಕ್ಕೂ ಮನೆಯೇ ಮೊದಲ ಪಾಠಶಾಲೆ ಹೇಗೆಂದರೆ ಮನೆಯಲ್ಲಿ ಮಕ್ಕಳಿಗೆ ಏನಾದರೂ ಕೆಲಸ ಹೇಳುವ ಸಮಯ ಬಂದರೆ ಉದಾಹರಣೆಗೆ ಅಂಗಡಿಯಿಂದ ಸಕ್ಕರೆಯೋ ಅಥವಾ ಇನ್ನೇನಾದರೂ ವಸ್ತುಗಳನ್ನು ತೆಗೆದುಕೊಂಡು ಬರಲು ಮಕ್ಕಳಿಗೆ ಸಿಹಿ ತಿಂಡಿಯ ಆಸೆ ತೋರಿಸುವುದು ಅಥವಾ ಚಿಲ್ಲರೆ ಹಣದ ಆಸೆ ತೋರಿಸುವುದು. ಇದರಿಂದ ಚಿಕ್ಕಂದಿನಿಂದಲೇ ಮಕ್ಕಳ ಮೇಲೆ ಬೀರುವ ಪ್ರಭಾವ ಎಂತಹುದು ಎಂದು ಎಂದಾದರೂ ಯೋಚಿಸಿದ್ದೇವ? ಬಹುಷಃ ತಾವೆಲ್ಲರೂ ಕಡಿದಾಳ್ ಮಂಜಪ್ಪ ನವರ ಹೆಸರನ್ನು ಕೇಳಿರುತ್ತೀರ. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಅವರು ವಿಧಾನಸಭೆಗೆ ಸೈಕಲ್ ನಲ್ಲಿ ಬರುತ್ತಿದ್ದವರು. ಎಷ್ಟು ಜನ ಅಂಥಹ ನಿಷ್ಟಾವಂತರು ಇದ್ದಾರೆ. ಇದ್ದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ಮತದಾನದ ಬಗ್ಗೆ ಜನಕ್ಕೆ ಇರುವ ಅಸಡ್ಡೆಯೇ ಮುಖ್ಯ ಕಾರಣ. ಪ್ರತಿಸಲ ಚುನಾವಣಾ ನಡೆದಾಗ ೩೦, ೪೦ ೫೦ ಪ್ರತಿಶತ ಮಾತ್ರ ಮತದಾನವಾಗುತ್ತಿದೆ. ಇನ್ನುಳಿದ ಮತಗಳ ಭ್ರಷ್ಟರ ಪಾಲಾಗುತ್ತಿದೆ. ವಿದ್ಯಾವಂತರು ಮತಕಟ್ಟೆಯಿಂದ ದೂರ ಉಳಿದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಹೆಚ್ಚು ಮತದಾನವಾಗಬೇಕು ಇದ್ದದರಲ್ಲಿ ಅತೀ ಕಡಿಮೆ ಭ್ರಷ್ಟರನ್ನು ಆರಿಸೋಣ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಣ್ಣಾ ಹಜಾರೆ ಎಬ್ಬಿಸಿರುವ ಬಿರುಗಾಳಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎದ್ದಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. ಪ್ರತಿಯೊಬ್ಬರೂ ತಾವು ಅಣ್ಣನ ಬೆಂಬಲಿಗರು ಎಂದಷ್ಟೇ ಹೇಳಿಕೊಂಡರೆ ಸಾಲದು. ಮೊದಲು ತಮ್ಮನ್ನು ತಾವು ಪರಿಶೀಲಿಸಿಕೊಳ್ಳಬೇಕು. ತಮ್ಮಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಶುರುವಾಗಬೇಕು.
ಇವಿಷ್ಟು ಹೊಳೆನರಸಿಪುರ ಮಂಜುನಾಥ ಅವರ ಭಾಷಣದ ಸಾರಾಂಶ. ಇವರ ಭಾಷಣದ ವಿಮರ್ಶೆಯನ್ನು ಜಯಂತ್ ರಾಮಾಚಾರ್ ಅವರು ನಿರ್ವಹಿಸಿದರು. ಮಂಜಣ್ಣ ಅವರ ಕಂಚಿನ ಕಂಠ, ಭಾಷೆಯ ಮೇಲೆ ಅವರಿಗಿರುವ ಹಿಡಿತ, ನಿರರ್ಗಳವಾಗಿ ಸರಾಗವಾಗಿ ಪ್ರಭಾವಿಯಾಗಿ ಭಾಷಣ ಮಂಡಿಸುವ ಶೈಲಿ ಅವರ ಧನಾತ್ಮಕ ಅಂಶಗಳಾದರೆ ಅಲ್ಲಲ್ಲಿ ಆಂಗ್ಲ ಪದಗಳನ್ನು ಬಳಸಿದ್ದು ಅವರ ಋಣಾತ್ಮಕ ಅಂಶವೆಂದು ತಿಳಿಸಿ ತಮ್ಮ ವಿಮರ್ಶೆಯನ್ನು ಮಂಡಿಸಿದರು.
ಈ ಎರಡು ಭಾಷಣಗಳ ನಂತರ ಆಶುಭಾಷಣವನ್ನು ನಿರ್ವಹಿಸಿದವರು ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು. ಅವರು ಕೊಟ್ಟ ವಿಷಯ ಇಂದಿನ ಚಲನಚಿತ್ರ ಮಾಧ್ಯಮ ಜನರಿಗೆ ನೀಡುತ್ತಿರುವ ಸಂದೇಶ ಏನು?
ಆಶುಭಾಷಣವನ್ನು ಮಂಡಿಸಿದವರು ಶ್ರೀಯುತ ಮಧ್ವೇಶ್, ಹಾಗೂ ಹೊಸ ಪಥಿಕರಾದ ಶ್ರೀಯುತ ಶ್ರೀನಾಥ್, ಶ್ರೀಯುತ ರುದ್ರೇಶ್ ಹಾಗೂ ಶ್ರೀಯುತ ಹರೀಶ್ ಆತ್ರೇಯ ಅವರು.
ಹಿಂದಿನ ಚಿತ್ರಗಳು ಸಂಸಾರ ಸಮೇತವಾಗಿ ನೋಡುವಂಥಹ ಚಿತ್ರಗಳಾಗಿದ್ದು ಉತ್ತಮ ಸಂದೇಶ, ಉತ್ತಮ ಸಾಹಿತ್ಯ, ಉತ್ತಮ ನಿರ್ದೇಶನವನ್ನು ಹೊಂದಿದ್ದು ಬಹಳ ಕಾಲದವರೆಗೂ ಮೆಲುಕು ಹಾಕುವಂತಾದಾಗಿದ್ದು ಇಂದಿನ ಚಿತ್ರಗಳು ಕೊಡುತ್ತಿರುವ ಸಂದೇಶ ಚಿಕ್ಕ ಮಕ್ಕಳಿಂದ ಹಿಡಿದೂ ದೊಡ್ದವರವರೆಗೂ ಕೆಟ್ಟ ಸಂದೇಶವನ್ನು ಕೊಡುತ್ತಿರುವುದು. ಇನ್ನು ಇಂದಿನ ಸಾಹಿತ್ಯ ಅಂತೂ ಬೇಡವೇ ಬೇಡ ಒಂದು ಕಾಲದಲ್ಲಿ "ಅಮ್ಮ ಸೀತಮ್ಮ ತಂದೆ ಶ್ರೀರಾಮ" ಎಂಬ ಸಾಹಿತ್ಯ ಇದ್ದರೆ ಇಂದು " ಅಪ್ಪ ಲೂಸಾ, ಅಮ್ಮ ಲೂಸಾ"ಎಂಬಂಥಹ ಸಾಹಿತ್ಯ ಬರುತ್ತಿರುವುದು ನಿಜವಾಗಿಯೂ ದುರದೃಷ್ಟಕರ.
ಇನ್ನು ಸಮಯಪರಿಪಾಲಕರಾಗಿ ಶ್ರೀಯುತ ರಾಮ್ ಮೋಹನ್ ಅವರು ಯಾರ್ಯಾರು ಎಷ್ಟೆಷ್ಟು ಸಮಯವನ್ನು ತೆಗೆದುಕೊಂಡರು ಎಂದು ವಿವರಿಸಿದರೆ ಶ್ರೀಯುತ ಪಾರ್ಥಸಾರಥಿಯವರು ವ್ಯಾಕರಣ ಶುದ್ಧಿಯನ್ನು "ಮೊಸರಿನಲ್ಲಿ ಕಲ್ಲು ಹುಡುಕುವುದೆಂದು" ಹಾಸ್ಯವಾಗಿ ವರ್ಣಿಸಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಈ ಬಾರಿಯ ವಾಕ್ಪಥ ಗೋಷ್ಟಿಗೆ ಸಂಪದಿಗರಾದ ಶ್ರೀಯುತ ಶ್ರೀನಾಥ್ ಭಲ್ಲೆ ಆಗಮಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದು ಸಂತೋಷವಾಗಿತ್ತು.
ಇಲ್ಲಿಗೆ ಅಧಿಕೃತವಾಗಿ ವಾಕ್ಪಥ ಆರನೇ ಗೋಷ್ಟಿಯ ಮುಕ್ತಾಯವಾಗಿ ನಂತರ ಮುಂದಿನ ಗೋಷ್ಟಿಯ ರೂಪುರೇಷೆಗಳನ್ನು ನಿರ್ಧರಿಸಲಾಯಿತು. ಮುಂದಿನ ಗೋಷ್ಟಿಯ ನಿರ್ವಾಹಕರಾಗಿ ಜಯಂತ್ ರಾಮಾಚಾರ್ ಅವರಿಗೆ ವಾಕ್ಪಥದ ಫಲಕವನ್ನು ಹಸ್ತಾಂತರಿಸಲಾಯಿತು.
ಮುಂದಿನ ಗೋಷ್ಟಿಯ ದಿನಾಂಕ ಹಾಗೂ ಕಾರ್ಯಕ್ರಮಗಳ ಪಟ್ಟಿಯನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು.

Wednesday, 10 August 2011

ವಾಕ್ಪಥ - ಆರನೆಯ ಹೆಜ್ಜೆ

ಮಾತನಾಡುವುದು ಎಲ್ಲರಿಗೂ ಪ್ರಿಯವಾದದ್ದು. ಆದರೆ ನಾಲ್ಕು ಜನರೆದುರು ಮಾತನಾಡುವುದಿದೆಯಲ್ಲ ಅದು ನಿಜಕ್ಕೂ ಸುಲಭಸಾಧ್ಯದ ಮಾತಲ್ಲ. ಒಳಗೊಳಗೇ ಕಡೆದು ಹೆಪ್ಪುಗಟ್ಟಿದ ಮಾತುಗಳನ್ನ ಪರಿಣಾಮಕಾರಿಯಾಗಿ ಹೊರಹಾಕುವುದು ಬರಹಗಳಲ್ಲಿ ಸುಲಭ ಸಾಧ್ಯ. ಮತ್ತೊ೦ದು ಬಗೆಯೆ೦ದರೆ ಬಾಯಿ೦ದ ಕಿವಿಗೆ ತಲುಪಿಸುವುದು ಇದು ಸಾಧ್ಯ ಮತ್ತು ಸರಳವಲ್ಲ. ನಾಲ್ಕಾರು ಕಣ್ಣುಗಳು ನಮ್ಮನ್ನು ದಿಟ್ಟಿಸುತ್ತಿರುತ್ತವೆ ಹಲವಾರು ಕಿವಿಗಳು ನಮ್ಮ ಮಾತನ್ನು ಕೇಳಲು ಸಿದ್ಧವಾಗಿರುತ್ತದೆ. ಇ೦ಥ ಸ೦ದರ್ಭದಲ್ಲಿ ಮಾತನಾಡುವುದು ಅದೂ ಹೇಳಬೇಕಾದುದನ್ನು ನೇರವಾಗಿ ಚೊಕ್ಕವಾಗಿ ಎದುರಿಗಿರುವವನ ಮನದಾಳಕ್ಕಿಳಿಯುವ೦ತೆ ಹೇಳುವುದು ಸುಲಭವಲ್ಲ. ವೇದಿಕೆಯಲ್ಲಿ ನಿ೦ತಾಗ ನಡುಕ ಹುಟ್ಟಿ ಮಾತು ತೊದಲಿ ಬೆವರು ಬಸಿಯತೊಡಗುತ್ತದೆ. ಎಷ್ಟೇ ಸಿದ್ದರಾಗಿ ಕನ್ನಡಿಯಮು೦ದೆ ನಿ೦ತು ನೂರು ಬಾರಿ ಪಾಠ ಒಪ್ಪಿಸಿದ್ದರೂ ಸಭಾಕ೦ಪನ ಬಿಡದು. ಇ೦ಥ ಮಾತನಾಡುವಿಕೆಯನ್ನು ಭಾಷಣವೆ೦ದು ಕರೆದು ಅದನ್ನು ಕಲೆಯೆ೦ದೇ ಕರೆಯಲಾಗಿದೆ. ಈ ಕಲೆಯನ್ನು ಬೆಳೆಸುವ ಸಲುವಾಗಿ ಹುಟ್ಟಿದ ಗು೦ಪು ’ವಾಕ್ಪಥ’. ಮೊದಲಿಗೆ ಟೋಸ್ಟ್ ಮಾಸ್ಟರ್ ಎ೦ಬ ಹೆಸರಿನಲ್ಲಿ ಸಾಗರದಾಚೆ ಆರ೦ಭವಾದ ಈ ದಾರಿ ಈಗ ಕನ್ನಡದಲ್ಲೂ ನಡೆಯುತ್ತಿರುವುದು ಹಳೆಯ ವಿಚಾರ . ಈಗಾಗಲೇ ಐದು ಹೆಜ್ಜೆಗಳನ್ನ ಪೂರೈಸಿದ ಈ ಪಥ ಇನ್ನು ಹೊಸ ರೀತಿಯಲ್ಲಿ ನಿಮ್ಮ ಮು೦ದೆ ಬರಲಿದೆ.
ನಮ್ಮಲ್ಲಿ ಅನೇಕ ವಿಷಯಗಣಿಗಳಿದ್ದಾರೆ ಆದರೆ ಅವರೆಲ್ಲಾ ಆಪ್ತರೊ೦ದಿಗೆ ಮಾತ್ರ ಸರಾಗವಾಗಿ ಮಾತನಾಡಬಲ್ಲರು. ವೇದಿಕೆ ಏರಿ ಮಾತನಾಡಲು ಸಣ್ನದೊ೦ದು ಹಿ೦ಜರಿಕೆಯಿ೦ದಲೋ ಇಲ್ಲ ಆತ್ಮವಿಶ್ವಾಸ ಇಲ್ಲದ ಭಯದಿ೦ದಲೋ ಹಿ೦ದೆ ಸರಿಯುತ್ತಿದ್ದಾರೆ. ಅವರಿಗಾಗಿ ಮತ್ತು ನಮಗಾಗಿ (ನಾವೂ ಬೆಳೆಯಬೇಕಲ್ಲ.) ಈ ತ೦ಡ ವಾಕ್ಪಥವನ್ನು ರೂಪಿಸಿಕೊ೦ಡು ಸಣ್ಣ ಪ್ರಮಾಣದ ವೇದಿಕೆಯನ್ನು ಸೃಷ್ತಿಸಿಕೊ೦ಡು ಮಾತುಗಾರರಿಗೆ ಗರಡಿಮನೆಯನ್ನು ನಿರ್ಮಿಸಿದೆ. ಇದರ ಸದುಪಯೋಗ ಪಡೆದುಕೊಳ್ಲಲು ವಿಷಯಾಗ್ರಣಿ ಮತ್ತು ವಿಷಯದಗಣಿಗಳು ಮು೦ದೆ ಬರಬೇಕು ಅವರ ಮಸ್ತಕದೊಳಗಿನ ವಿಷಯಗಳ ಆಕಾಶವನ್ನು ನಮ್ಮೆದುರಿಗೆ ಹರವಬೇಕು ಹಾಗಾದಗಲೇ ಜ್ಞಾನವಿಸ್ತಾರ ಮತ್ತು ವಿಷಯಗಳ ಹ೦ಚಿಕೊಳ್ಳುವಿಕೆ ಸಾಧ್ಯ. ಪಿಸು ಮಾತು ಒ೦ದು ಹೇಳಿಕೆಯಾಗುವ ನಿಟ್ಟಿನಲ್ಲಿ ನಾವು ಹೆಜ್ಜೆ ಇರಿಸೋಣ ಎಲ್ಲ ಮಾತುಗಳಿಗೆ ಕಿವಿಯಾಗೋಣ , ಆಸ್ವಾದಿಸೋಣ ಅದನ್ನು ವಿಮರ್ಷಿಸೋಣ ತಪ್ಪಿದ್ದರೆ ತಿದ್ದಿಕೊಳ್ಳೋಣ.
ವಾಕ್ಪಥದ ನಿಯಮಗಳು ಸರಳ..
೧) ಸಾಧ್ಯವಾದಷ್ಟು ಶುದ್ಧ ಕನ್ನಡದಲ್ಲಿ ಮಾತನಾಡಬೇಕು
೨) ಭಾಷಣಗಳಿಗೆ ನಿಗದಿತ ಸಮಯವಿರುತ್ತದೆ ಆ ಸಮಯದೊಳಗೆ ಭಾಷಣದ ವಸ್ತುವನ್ನುಪರಿಣಾಮಕಾರಿಯಾಗಿ ಕೇಳುಗನ ಕಿವಿಗೆ ತಲುಪಿಸ ಬೇಕು.
ಉತ್ತಮ ಕೇಳುಗ ವಿಮರ್ಶೆಕಾರನೂ ಹೌದು
ಪ್ರತಿ ತಿ೦ಗಳು ನಡೆಯುವ ಈ ಸಭೆಯನ್ನು ಒಬ್ಬೊಬ್ಬರು ಒ೦ದೊ೦ದು ಬಾರಿ ನಿರ್ವಹಿಸಬೇಕಾಗುತ್ತದೆ. ಆ ಕಾರಣದಿ೦ದ ಅವರಲ್ಲಿ ನಾಯಕತ್ವ ಗುಣಗಳ ಬೆಳವಣಿಗೆ, ಯೋಜನಾ ದೃಷ್ಟಿಕೋನದ ಪ್ರಬುದ್ಧತೆ. ವಾಕ್ಚಾತುರ್ಯ, ಕಾರ್ಯ ಚತುರತೆಗಳು ಬೆಳೆಯುತ್ತವೆ
ನೆನಪಿಡಿ ನಿರ್ವಹಣೆಗೂ ಅ೦ಕಗಳಿರುತ್ತವೆ.. :)
ಹೀಗೆ ಸರ್ವವಿಧದಿ೦ದಲೂ ಸಮೃದ್ಧವಾಗಿರು ಕಾರ್ಯದಲ್ಲಿ ನೀವೂ ಪಾಲ್ಗೊಳ್ಳಿ ನಿಮ್ಮನ್ನು ತೊಡಗಿಸಿಕೊಳ್ಳಿ .
ನಿಮಗಾಗಿ ಕಾಯುತ್ತಾ ವಾಕ್ಪಥ ತ೦ಡ

ಈ ಬಾರಿಯ ಭಾಷಣಗಳು
ಶ್ರೀ ಹೊಳೆ ನರಸೀಪುರ ಮ೦ಜುನಾಥ "ಇ೦ದಿನ ಜೀವನದಲ್ಲಿ ಭ್ರಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಪಾತ್ರ"."
ಶ್ರೀ ರಘು ಎಸ್ ಪಿ "ಕೈಗಾರಿಕೆ ಮತ್ತು ರೈತ ಹಾಗು ಕೈಗಾರಿಕೆ ಮತ್ತು ಕಾನೂನು"
ಶ್ರೀ ಹರೀಶ್ ಆತ್ರೇಯ "ಪ್ರಸಕ್ತ ಭಾರತದಲ್ಲಿ ಭಗತ್ ಸಿ೦ಗ್ ನ ಪ್ರಸ್ತುತತೆ"

ದಿನಾ೦ಕ ೨೧ ರ ಭಾನುವಾರದ೦ದು, ಸ೦ಜೆ ೩ ಕ್ಕೆ ಆರ೦ಭವಾಗಿ ೫ ಗ೦ಟೆಗೆ ಕೊನೆಯಾಗುತ್ತದೆ
 ೯೮೪೪೧೦೦೦೨೧ ಹರೀಶ್ ಆತ್ರೇಯ,

೯೮೪೪೭೦೧೭೦೫ ಬೆಳ್ಳಾಲ ಗೋಪೀನಾಥ ರಾಯರು

೯೬೨೦೯೩೬೫೭೬ ಹೊಳೆನರಸೀಪುರ ಮ೦ಜುನಾಥ



ಸ್ಥಳ ; ಸೃಷ್ಟಿ ವೆ೦ಚರ್ಸ್ ನ ಎರಡನೆ ಮಹಡಿಯಲ್ಲಿ