ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Wednesday, 2 November 2011

ತುಂತುರು ಇಲ್ಲಿ ಪುಸ್ತಕ ರಾಗ.. ಪುಸ್ತಕ ಪರಿಷೆಯ ಝಲಕ್ ...

ತುಂತುರು ಇಲ್ಲಿ ಪುಸ್ತಕ ರಾಗ..

ನಿನ್ನೆ ಬಾನುವಾರ ೩೦-೧೦-೨೦೧೧ ರಂದು ಪುಸ್ತಕ ಪರಿಷೆ ನಡೆಯಿತು, ನಾನು ಹಿಂದೆಲ್ಲ  ಈ ರೀತಿ ಕಾರ್ಯಕ್ರಮ ಹೋಗಿರುವುದು ಅಪರೂಪವೆ ಆದರೆ ಈ ಬಾರಿ ಪೂರ್ತಿ ಸಮಯ ಅಲ್ಲೆ ಇರುವ ಅವಕಾಶ ಒದಗಿ ಬಂತು. ಅದು ವಾಕ್ಪಥಿಕರ ಸಹವಾಸದಿಂದಾಗಿ (!). ಹೊರಡುವಾಗಲೆ ಮೋಡ ಮೋಡ, ನಿನ್ನೆ ಬಿದ್ದಿದ್ದ ಮಳೆಯ ಪ್ರಭಾವ ಪೂರ್ತಿ ಕಡಿಮೆಯಾಗಿರಲಿಲ್ಲ. ತುಂತುರು ಮಳೆ ತನ್ನ ತುಂಟಾಟ ಮುಂದುವರೆಸಿತ್ತು . ಹೇಗು ಇರಲಿ ಎಂದು ರೈನ್ ಕೋಟನ್ನು ಜೊತೆಯಲ್ಲಿ ಇಟ್ಟುಕೊಂಡೆ 'ಸೃಷ್ಟಿ' ತಲುಪಿದೆವು ನಾನು ಮತ್ತು ರಾಮಮೋಹನ . ಅಲ್ಲಿಯೆ ಗಾಡಿ ನಿಲ್ಲಿಸಿ ನಡೆಯುತ್ತ ಪರಿಷೆಯ ಸ್ಥಳ ವಾಲಿಬಾಲ್ ಮೈದಾನ ತಲುಪುವಾಗಲೆ ಮಳೆಯ ತುಂತುರು, ಮನದಲ್ಲಿ ಎಂತದೊ ಆತಂಕ ಈ ಮಳೆರಾಯ ಪುಸ್ತಕ ಪರಿಷೆ ನಡೆಯಲು ಬಿಡುವನೆ!!
..............................................................................-----------------------------------------------------...

ಅಲ್ಲಿ ತಲುಪುವಾಗಲೆ ಬಹಳಷ್ಟು ಸಂಪದಿಗರ ಮುಖ ನೋಡುತ್ತ ಮನದಲ್ಲಿ ಹರುಷ ತುಂಬಿತು. ಮಂಜು, ರಘು , ಹರೀಶ್ , ಜಯಂತ್ , ಪ್ರಭು , ಕಿರಣ್ ಮತ್ತೆ ಒಂದಿಬ್ಬರು ಅಲ್ಲದೆ ಸೃಷ್ಟಿ ಕಲಾಲಯದ ಕೆಲವು ಮಂದಿ, ಅಲ್ಲದೆ ಜಂಬೆಹಾಡಿನ ಗುಂಪು. ನಮ್ಮವರನ್ನೆಲ್ಲ ಕಾಣುತ್ತ ಹತ್ತಿರ ಹೋಗಲು, ಒಬ್ಬೊಬ್ಬರನ್ನೆ ವಂದಿಸುತ್ತ ಹೋಗುತ್ತಿರುವಂತೆ, ಮದ್ಯೆ 'ಬುದ್ದಿಜೀವಿ'ಯ ಗಡ್ಡ ಬಿಟ್ಟಿದ್ದ ಯುವಕರೊಬ್ಬರು ಕೈ ನೀಡಿದರು, ಯಾರು ಎಂದು ತಿಳಿಯದಿದ್ದರು, ನಾನು ನನ್ನ ಪರಿಚಯ ಹೇಳಿ ಕೈ ನೀಡಿದೆ, ಎಲ್ಲರನ್ನು ಮಾತನಾಡಿಸುತ್ತಿದ್ದಂತೆ, ನಗುತ್ತ ಆ ಯುವಕ ನುಡಿದರು, 'ನಾನು ಸತ್ಯ ಚರಣ್'  ಮುಖ ನೋಡುತ್ತಿರುವಂತೆ ಅಂದರು  'ಯಾಕೆ ಶಾಕ್ ಆಯಿತ?"
----------------------------------------------------------------------------------------------------------





ನಿಜವೆ ನಾನು ಸ್ವಲ್ಪ ಮಾತ್ರ ಶಾಕ್ ಆಗಿದ್ದೆ ಕಾರಣವಿತ್ತು, ಸಂಪದದ ಪ್ರೊಫೈಲ್ ನಲ್ಲಿ ಅವರ ಚಿತ್ರ ನೋಡಿ ನಾನು ಸ್ವಲ್ಪ ಕಪ್ಪನೆಯ ಗುಂಡು ಗುಂಡಾದ ವ್ಯಕ್ತಿಯೊಬ್ಬರನ್ನು ಕಲ್ಪಿಸಿಕೊಂಡಿದ್ದೆ, ಇಲ್ಲಿ ಸತ್ಯಚರಣ್ ಅದಕ್ಕೆ ವಿರುದ್ದವಿದ್ದರು, ಸ್ವಲ್ಪ ಗಡ್ಡಬಿಟ್ಟ ಕೆಂಪನೆಯ ಸುಂದರ ಯುವಕ ಅವರು. ಬಹುಷ: ಬರಹದ ಮೂಲಕ ಅವರ ರೂಪವನ್ನು ಗುರುತಿಸುವುದು ಕಷ್ಟವೇನೊ. ಶ್ರೀಹರ್ಷ ಸಾಲಿಮಠರು ಸಹ ನನ್ನ ನಿರೀಕ್ಷೆಗೆ ವಿರುದ್ದವಾಗಿದ್ದರು, ಅವರ ಬರಹ ಗಮನಿಸಿ ನಾನು ಸ್ವಲ್ಪ ಖಡಕ್ ಆದ ಎಂತದೊ ಸ್ವರೂಪ ನನ್ನ ಮನದಲ್ಲಿತ್ತು ಆದರೆ ಎದುರಿಗೆ ನೋಡುವಾಗ ತುಂಬಾ ಸೌಮ್ಯ ಮುಖಭಾವದವರು.
ವರ್ಣಚಿತ್ರ:  ಸತ್ಯಚರಣರ ಪ್ರೋಪೈಲ್ ಹಾಗು ಗೋಪಿನಾಥರಾಯರ ಚಿತ್ರಗಳಿಂದ ತೆಗೆದಿರುವುದು
--------------------------------------------------------------------------------------------------------
 ಅಷ್ಟರಲ್ಲಿ ರಘು ಮುಳಿಯರು ಬಂದರು.ಹಾಗೆ ಆಸುರವರ ಆಗಮನವಾದಂತೆ ಎಲ್ಲ ವಾಕ್ಪಥಿಕರು ಎದ್ದು ಸಂಭ್ರಮದಿಂದ ಸ್ವಾಗತಿಸಿದರು. ಕಾರ್ಯಕ್ರಮ ನಡೆದಿರುವಂತೆ ಶ್ಯಾಮಲ ಜನಾರ್ದನನ್ ರವರ ಆಗಮನವಾಯಿತು.
ಮಳೆಯ ಲಕ್ಷಣಗಳೆಲ್ಲ ಕರಗಿಹೋಗಿ, ಲಕ್ಷಣವಾಗಿ ಬಿಸಿಲು ತುಂಬಿತು. ನನಗೆ ಮನದಲ್ಲಿ ಸಂತಸ ಎನಿಸಿತು, ಅಂದು ಕೊಂಡೆ ಮಳೆರಾಯ ದ್ವೇಷಿಸಲು ಪುಸ್ತಕ ಪರಿಷೆಯೇನು ಕ್ರಿಕೇಟ್ ಆಟವೆ !! ಮೂರ್ಖರ ಆಟ ಹಾಗಾಗಿ ಮಳೆರಾಯನಿಗೆ ಆಗಲ್ಲ ಅಂದುಕೊಂಡೆ ನೋಡಿ! ಎಡಕಿವಿಯ ಮೇಲೆ ಏನೊ ಅಪ್ಪಳಿಸಿತು, ದೇಹವೆಲ್ಲ ಜೂಂ ಎಂದಿತು, ಕಿವಿ ಮುಖವೇಕೊ ಕೆಂಪೇರಿತು, ಏನಾಯಿತು ಅಂತ ಆರ್ಥವಾಗಿತ್ತು, ಪರಿಷೆಯ ಪಕ್ಕದ ಮೈದಾನದಲ್ಲಿ ಕ್ರಿಕೇಟ್ ಆಡುತ್ತಿದ್ದ ಹುಡುಗರಲ್ಲಿ ಯಾರೊ ಒಬ್ಬ ಸಿಕ್ಸರ್ ಎತ್ತಿದ್ದ , ಆ ಚೆಂಡು ನೇರವಾಗಿ ಬಂದು ನನ್ನ ಎಡಕಿವಿಯನ್ನು ಅಪ್ಪಳಿಸಿತು, ನನಗೆ ಕೋಪ ಬಂದಿತು, ತಕ್ಷಣ ಬಗ್ಗಿ ಚೆಂಡನು ಹಿಡಿದು ಕುಳಿತು ಬಿಟ್ಟೆ, ಚೆಂಡು ಹಿಂದಿರುಗಿಸಿದರೆ ಆವರ ಆಟ ನಿಲ್ಲಿಸುವುದಿಲ್ಲ ಮಾತ್ಯಾರಾದರು ಆ ಹೊಡೆತಕ್ಕೆ ಬಲಿಯಾದರೆ ಎಂದು. ಬಹುಷಃ ನಾನು ಕ್ರಿಕೇಟನ್ನು ಮೂರ್ಖರ ಆಟ ಅಂದಿದ್ದು ಕ್ರಿಕೇಟ್ ದೇವತೆಗೆ ಕೇಳಿಸಿತ್ತೇನೊ.
---------------------------------------------------------------





  ರಘು ಮುಳಿಯರೊಂದಿಗೆ ಒಂದು ಸುತ್ತು ಹೊರಗೆ ಹೋಗಿ ಹೀಗೆ ಒಳಗೆ ಬಂದೆ, ಮತ್ತೆ ಒಂದು ತುರ್ತು ಏರ್ಪಟ್ಟಿತ್ತು, ಏನು ಕಾರಣವೊ ಮಂಜುರವರು ಯಾವುದೊ ಕರೆಯ ಮೇರೆಗೆ ಮನೆಗೆ ಹೊರಟು ಹೋಗಿದ್ದರು, ಹಾಗಾಗಿ ವಾಕ್ಪಥ ಎಂಟರ ವಿಮರ್ಷಕನ ಪಾತ್ರ ನಾನು ವಹಿಸ ಬೇಕಾಯಿತು, ಸಿದ್ದವಿಲ್ಲದೆ ಮಾಡಿದ ಪಾತ್ರ ಹೇಗೆ ಬಂತೊ ತಿಳಿಯಲಿಲ್ಲ, ತಪ್ಪಾಗಿದ್ದಲ್ಲಿ 'ಹರೀಶ್ ಆತ್ರೇಯರು' ಮನ್ನಿಸಬೇಕು.

-------------------------------------------------------------------------------------------------------

  ಹೀಗೆ ಆಸುರವರ ಪಕ್ಕ ಕುಳಿತು ಕಾರ್ಯಕ್ರಮ ನೋಡುತ್ತ , ಎಡಗಡೆ ಒಳಗೆ ಬರುತ್ತಿರುವ ಜನರನ್ನು ಗಮನಿಸುತ್ತಿದ್ದೆ, ಸಂತೋಷ ಎನಿಸುತ್ತಿತ್ತು, ಬೆಳಗ್ಗೆ ಸುಮಾರು ೧೦ ಘಂಟೆಗೆ ಪ್ರಾರಂಬವಾದ ಜನರ ಒಳಹರಿವು,ಸ್ವಲ್ಪವು ಕಡಿಮೆಯಾಗದೆ, ಒಂದೆ ಸಮ ಬರುತ್ತಲೆ ಇದ್ದರು, ಅಲ್ಲಿ ಶಾರುಕ್ ಖಾನ್ ಇಲ್ಲ, ಯಾವುದೆ ಚಿತ್ರ ನಟಿಯರಾಗಲಿ, ರಾಜಕೀಯದವರಾಗಲಿ ಇಲ್ಲ ಆದರು ಜನ ಬರುತ್ತಿರುವುದು ಬರಿ 'ಪುಸ್ತಕ' ಗಳನ್ನು ನೋಡಲು, ನಿಜಕ್ಕು ಸಂತೋಷ ಕೊಡುವ ಸಂಗತಿ ಅಲ್ಲವೆ !!!, , ಛೇ! ಯಾರಾತ ನನಗೆ ಅವನನ್ನು ಆರು ಏಳು ಸಾರಿ ನೋಡಿದಂತೆ ಅನ್ನಿಸುತ್ತಿದೆ, ಹೀಗೆ ಒಳಗೆ ಬರುತ್ತ  ಮೊದಲ ಸಲ ನೋಡಿದಾಗ ಕೈಯಲ್ಲಿ ಕಡಿಮೆ ಎಂದರು ಆರು ಏಳು ಪುಸ್ತಕ ಹಿಡಿದು ಹೊರನಡೆದಿದ್ದ ಅನ್ನಿಸಿತು, ಒಬ್ಬರಿಗೆ ಒಂದೆ ಪುಸ್ತಕ ಅಂತ ನಿಯಮವಿದ್ದರು ಸಹ. ಆದರೆ ಅನುಮಾನ ಎನಿಸಿದ್ದು ಆತನನ್ನು ನೋಡುವಾಗ ಪುಸ್ತಕ ಓದುವನು , ಓದುವದಕ್ಕಾಗಿ ಪುಸ್ತಕ ತೆಗೆದು ಕೊಂಡು ಹೋಗುತ್ತಿದ್ದಾನೆ ಅನ್ನಿಸುತ್ತಿಲ್ಲವಲ್ಲ ಪಕ್ಕದಲ್ಲಿ ಆಸುರವರಿಗೆ ತಿಳಿಸಿದೆ.

------------------------------------------------------------------------------------------------------------

ಸ್ವಲ್ಪ ಗಮನಿಸಿದರೆ ಅವನು ಪುಸ್ತಕಗಳನ್ನು ಅವನು ತನ್ನ ಪ್ಯಾಂಟಿನ ಜೋಭಿನಲ್ಲಿ, ಶರ್ಟಿನ ಒಳಗೆ ಹೊಟ್ಟೆಯಲ್ಲಿ ಸೇರಿಸುತ್ತಿದ್ದ, ಅವನ ಪಕ್ಕ ನಿಂತು, ಆಸುರವರೆ 'ಒಬ್ಬರಿಗೆ ಒಂದೆ ಪುಸ್ತಕ' ಎಂದರು, ಅದಕ್ಕವನು 'ಒಂದೆ ನೋಡಿ ' ಎಂದು ಕೈ ತೋರಿಸಿದ, ಅವನ ಪ್ಯಾಂಟಿನ ಜೇಬನ್ನು ಬಡಿದು, ಇದೇನು ಎಂದರು. ಅವನು ಸ್ವಲ್ಪ ಕನ್ಫೂಸ ಆದ 'ಜೇಬಿನಿಂದ ಇನ್ನೊಂದು ಪುಸ್ತಕ ಹೊರತೆರೆದ 'ಹಸುಗಳನ್ನು ಸಾಕುವ ಬಗೆ'. ಸಾರ್ ಹಸುಗಳನ್ನು ಸಾಕುವ ವಿಷಯ ಅದಕ್ಕೆ ಇಟ್ಟಿದ್ದೆ ಎಂದ. ನಮಗೆ ನಗು. ಸರಿ ಹೇಗೆ ಆ ಕಡೆ ಸರಿದು ಹೊರಟು ಹೋದ. ಮತ್ತೆ ಅವನು ಬಂದಿದ್ದು ಕಾಣಲಿಲ್ಲ. ನನಗೆ ಆನಿಸಿದ್ದು 'ಗಾಂಧಿ ಭಜಾರಿನ ರಸ್ತೆ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕ' ಸಂಗ್ರಹಕಾರರಿಗೆ ಇಲ್ಲಿಂದ ಕೆಲವರಾದರು ಪುಸ್ತಕಗಳನ್ನು ಕೊಂಡೋಯ್ದು ತಲುಪಿಸುತ್ತಿದ್ದಾರ ಎಂದು.

-------------------------------------------------------------------------------------------------------

ವರ್ಣಚಿತ್ರ: ಜಯಂತರ ಪೇಸ್ಬುಕ್ ಪೇಜಿನಿಂದ ಕದ್ದಿರುವುದು

ಸರಿ ಹೇಗೊ ಅಂತು ಪರಿಷೆಯ ಕಡೆಯ ಹಂತಕ್ಕೆ ಬಂದು, ಎಲ್ಲ ಕಾರ್ಯಕ್ರಮಗಳೆಲ್ಲ ಮುಗಿದವು. ವಂದನಾರ್ಪಣೆಗಳೆಲ್ಲ ಮುಗಿದು ಎಲ್ಲರು ಹೊರಡುತ್ತೇವೆ ಅನ್ನುವಾಗ ಒಂದು ಕಾಫಿ ಜೊತೆ ಏಕೆ ದಿನವನ್ನು ಮುಗಿಸಬಾರದು ಅಂದವರು 'ರಘು ಎಸ್.ಪಿ.' ಸರಿ ಎಲ್ಲ ಕಪ್ಪೆಗಳನ್ನು ಒಟ್ಟುಗೂಡಿಸಿ, ಪುಳಿಯೋಗರೆ ಪಾಯಿಂಟ್ ತಲುಪಿದೆವು. ಕಾಫಿ ಎಂದವರು ಜೊತೆಗು ಪಕೋಡವನ್ನು ಹೇಳಿದರು, ಎಲ್ಲರು ನಗುತ್ತ, ಹರಟುತ್ತ ಮುಗಿಸಿದರು.
ಒಬ್ಬರಿಗೊಬ್ಬರು ವಿದಾಯ ಹೇಳುತ್ತ ಹೊರಡುವಾಗ, ಬೆಳಗಿನಿಂದ ವಿರಾಮಕೊಟ್ಟಿದ್ದ 'ಮಳೆರಾಯ' ತನ್ನ ಆರ್ಭಟ ಪ್ರಾರಂಬಿಸಿದ

ವರದಿ ಶ್ರೀ ಪಾರ್ಥ ಸಾರಥಿ

ಪುಸ್ತಕ ಪರಿಷೆಯ ಯಶಸ್ಸಿನಲ್ಲಿ ವಾಕ್ಪಥ/ವಾಕ್ಪಥಿಕರ ಪಾತ್ರ

ಸುಮಾರು ಒಂದೂವರೆ ತಿಂಗಳ ಹಿಂದೆ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ಏಳನೆಯ ಹೆಜ್ಜೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೃಷ್ಟಿ ವೆಂಚರ್ಸ್ ನ  ವ್ಯವಸ್ಥಾಪಕರಾದ ಶ್ರೀಯುತ ನಾಗರಾಜ್ ನಾವುಂದ ಅವರು ಅಕ್ಟೋಬರ್ ೩೦ ರಂದು ಹಮ್ಮಿಕೊಂಡಿರುವ "ಪುಸ್ತಕ ಪರಿಷೆ" ಯ ಬಗ್ಗೆ ತಿಳಿಸಿ ಅಂದಿನ ಸಂಪೂರ್ಣ ವೇದಿಕೆ ನಿರ್ವಹಣೆಯನ್ನು ವಾಕ್ಪಥ ತಂಡಕ್ಕೆ ವಹಿಸುತ್ತಿದ್ದೇನೆ ಎಂದು ಹೇಳಿದಾಗ ಎಲ್ಲ ವಾಕ್ಪಥಿಕರಿಗೂ ಸಂತೋಷದ ಜೊತೆಗೆ ಆಶ್ಚರ್ಯವೂ ಆಯಿತು.
ಕೇವಲ ಏಳು ಹೆಜ್ಜೆಗಳನ್ನು ಇಟ್ಟಿದ್ದ ವಾಕ್ಪಥಕ್ಕೆ ದೊರೆತ ಸುವರ್ಣಾವಕಾಶ ಈ ಪುಸ್ತಕ ಪರಿಷೆಯ ವೇದಿಕೆಯ ನಿರ್ವಹಣೆ.
ಒಂದು ಲಕ್ಷ ಪುಸ್ತಕ ಪ್ರದರ್ಶನ
ಒಬ್ಬೊಬ್ಬರಿಗೆ ಒಂದೊಂದು ಉಚಿತ ಪುಸ್ತಕ.
ಅನೇಕ ಗಣ್ಯ ಆಹ್ವಾನಿತರು.
ಬೆಳಗಿನಿಂದ ಸಂಜೆಯವರೆಗೂ ವೇದಿಕೆಯನ್ನು ಖಾಲಿ ಬಿಡಬಾರದು.
ಗಣ್ಯರ ಭಾಷಣಗಳು, ಮನರಂಜನೆಯ ಕಾರ್ಯಕ್ರಮಗಳು
ವಾಕ್ಪಥದ ಎಂಟನೆಯ ಗೋಷ್ಠಿ.
ಇವುಗಳಲ್ಲಿ ಮೊದಲೆರಡು ಬಿಟ್ಟರೆ ಉಳಿದೆಲ್ಲ ಜವಾಬ್ದಾರಿ ವಾಕ್ಪಥ ತಂಡದ ಮೇಲಿತ್ತು. ಬೆಳಗಿನಿಂದ ಸಂಜೆಯವರೆಗೂ ವೇದಿಕೆಯನ್ನು ಖಾಲಿ ಬಿಡದೆ ನೋಡಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಅದೂ ಅಲ್ಲದೆ ಒಂದು ಪುಸ್ತಕ ಮೇಳದಲ್ಲಿ ಬರುವ ಜನರು ಕೇವಲ ಪುಸ್ತಕ ಕೊಳ್ಳುವುದರಲ್ಲಿ ಆಸಕ್ತರಾಗಿರುತ್ತಾರೆ ಹೊರತು ವೇದಿಕೆಯ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ. ಹಾಗಾಗಿ ನೆರೆದಿರುವ ಪ್ರೇಕ್ಷಕರು ಪುಸ್ತಕ ಕೊಳ್ಳುವುದರ ಜೊತೆಗೆ ವೇದಿಕೆಯ ಕಡೆಗೂ ಗಮನ ಹರಿಸುವ ಹಾಗೆ ಕೆಲಸ ನಿರ್ವಹಿಸುವ ದೊಡ್ಡ ಸವಾಲು ವಾಕ್ಪಥ ತಂಡದ ಮುಂದಿತ್ತು.
ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ ವಾಕ್ಪಥ ತಂಡದ ಸದಸ್ಯರುಗಳಾದ ಶ್ರೀಯುತ ಪ್ರಭುನಂದನ ಮೂರ್ತಿ, ಶ್ರೀಯುತ ಬೆಲ್ಲಾಳ ಗೋಪಿನಾಥರಾಯರು, ಶ್ರೀಯುತ ಹೊಳೆನರಸಿಪುರ ಮಂಜುನಾಥರವರು, ಶ್ರೀಯುತ ರಘು ಎಸ.ಪಿ ಯವರು, ಶ್ರೀಯುತ ಹರೀಶ್ ಆತ್ರೇಯ ರವರು, ಶ್ರೀಯುತ ಪಾರ್ಥಸಾರಥಿಯವರು, ಹಾಗೂ ಶ್ರೀಯುತ ರಾಮ್ ಮೋಹನ್ ಅವರು ವಾರದಲ್ಲಿ ಸಿಗುತ್ತಿದ್ದ ಒಂದು ರಜಾ ದಿನವಾದ ಭಾನುವಾರದಲ್ಲಿ ಅರ್ಧ ದಿನ ಈ ಕೈಂಕರ್ಯದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸುವುದರಲ್ಲಿ ಮಗ್ನರಾದರು.
ಈ ಜವಾಬ್ದಾರಿ ಬಂದ ದಿನದಿಂದ ಸೃಷ್ಟಿಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು, ವಿಶೇಷ ಆಹ್ವಾನಿತರು, ಭಾಷಣಕಾರರು, ಮನರಂಜನೆ ಕಲಾವಿದರು ಇವರುಗಳ ವಿವರಗಳನ್ನು ಸಂಗ್ರಹಿಸಿ ಅದರ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ತಯಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಶ್ರೀಯುತ ಹರೀಶ್ ಆತ್ರೇಯ ಇವರ ಶ್ರಮ ಸಾಕಷ್ಟಿದೆ.
ಈ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬೆಳಗಿನಿಂದ ಸಂಜೆಯವರೆಗೂ ಯಾವ ಯಾವ ಕಾಲಾವಧಿಯಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಬೇಕು, ಉದ್ಘಾಟನೆ, ಗಣ್ಯರ ಭಾಷಣ, ಸಂಗೀತ ಕಾರ್ಯಕ್ರಮ,ವಾಕ್ಪಥ ಗೋಷ್ಠಿ, ವಿಶೇಷ ಆಹ್ವಾನಿತರ ಭಾಷಣ, ಚರ್ಚೆ/ಚಿಂತನೆ, ಜಂಬೆ(ವಿಶೇಷ ವಾದ್ಯ ಪರಿಕರ) ಕಾರ್ಯಕ್ರಮ, ಹಾಗೂ ಸಮಾರೋಪ ಇವಿಷ್ಟು ಕಾರ್ಯಕ್ರಮಗಳನ್ನು ಆಯಾ ಸಮಯಕ್ಕೆ ಹೊಂದಿಸುವಲ್ಲಿ ಎಲ್ಲ ವಾಕ್ಪಥಿಕರು ಪಾತ್ರ ವಹಿಸಿದ್ದಾರೆ.
ಅಂದಿನ ಕಾರ್ಯಕ್ರಮಕ್ಕೆ ಅವಶ್ಯವಿದ್ದ ಗುರುತಿನ ಚೀಟಿಗಳು, ವಾಕ್ಪಥದ ಆಶಯ ಹಾಗೂ ಉದ್ದೇಶಗಳನ್ನು ಒಳಗೊಂಡ ಫಲಕಗಳನ್ನು ವಿಶೇಷ ಕಾಳಜಿ ಮುತುವರ್ಜಿಯಿಂದ ಸುಂದರವಾಗಿ ತಯಾರು ಮಾಡುವುದರಲ್ಲಿ ಶ್ರೀಯುತ ರಘು ಎಸ. ಪಿ ಅವರು ವಿಶೇಷ ಪಾತ್ರ ವಹಿಸಿದ್ದಾರೆ.
ಅಂದಿನ ಕಾರ್ಯಕ್ರಮಕ್ಕೆ ವಿಶೇಷವಾಗಿ ಒಂದು ಮನರಂಜನೆಯ ಕಾರ್ಯಕ್ರಮ ಕೊಡುವ ನಿಟ್ಟಿನಲ್ಲಿ ರೂಪುಗೊಂಡಿದ್ದೆ "ಬಾಲ ವಾಕ್ಪಥ". ಪ್ರಸ್ತುತ ಹೇಗೆ ನಾವುಗಳು ಅಂದರೆ ಹಿರಿಯರು ವಾಕ್ಪಥವನ್ನು ನಡೆಸುತ್ತಿದ್ದೆವೋ ಅದೇ ರೀತಿಯಲ್ಲಿ ಮಕ್ಕಳಿಂದ ಒಂದು ವಾಕ್ಪಥ ಆಯೋಜಿಸುವ ಯೋಚನೆ ಬಂದದ್ದೆ ತಡ ಎಲ್ಲ ವಾಕ್ಪಥಿಕರು ಸಹಮತದಿಂದ ಒಪ್ಪಿಗೆ ಸೂಚಿಸಿದರು. ಇದಕ್ಕೆ ಅವಶ್ಯವಿದ್ದ ಪಥಿಕರನ್ನು ಒದಗಿಸುವಲ್ಲಿ ಸೃಷ್ಟಿಯ ವ್ಯವಸ್ಥಾಪಕರಲ್ಲಿ ಕೇಳಿದಾಗ ತಮ್ಮದೇ ಅನುಭವ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ನಮಗೆ ತೋರಿಸಿದರು. ನಮಗೆ ಉಳಿದಿದ್ದ ಎರಡೇ ವಾರದಲ್ಲಿ ಆ ಮಕ್ಕಳನ್ನು ತಯಾರು ಮಾಡುವುದರಲ್ಲಿ ಎಲ್ಲ ವಾಕ್ಪಥಿಕರ ಪಾತ್ರ ಅಮೋಘ (ಇದಕ್ಕೆ ಸಾಕ್ಷಿ ಕಾರ್ಯಕ್ರಮದಲ್ಲಿ ಅಧ್ಬುತ ಯಶಸ್ಸು ಕಂಡ ಬಾಲ ವಾಕ್ಪಥ)
ಇನ್ನುಳಿದಂತೆ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಲಹೆ, ಸೂಚನೆ ಬೆಂಬಲವನ್ನು ವ್ಯಕ್ತಪಡಿಸಿದ ಶ್ರೀಯುತ ಕಿರಣ್, ಶ್ರೀಯುತ ಅ.ಸು. ಹೆಗ್ಡೆ, ಶ್ರೀಯುತ ಸತ್ಯಚರಣ, ಶ್ರೀಯುತ ಶ್ರೀಹರ್ಷ ಸಾಲಿಮಟ್ ಪ್ರತಿಯೊಬ್ಬರಿಗೂ ವಾಕ್ಪಥ ತಂಡದ ಪರವಾಗಿ ಅನಂತಾನಂತ ಧನ್ಯವಾದಗಳು.
ಕೊನೆಯದಾಗಿ ಒಬ್ಬರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಬೇಕೆಂದರೆ ಅದು ಶ್ರೀಯುತ ಪ್ರಭುನಂದನ ಮೂರ್ತಿ ಅವರಿಗೆ. ಅಮೇರಿಕಾದಲ್ಲಿ ನೆಲೆಸಿ ಅಲ್ಲಿನ ಬೇ ಏರಿಯಾದಲ್ಲಿ "ವಾಕ್ಪಟು" ಎಂಬ ತಂಡವನ್ನು ಕಟ್ಟಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ "ವಾಕ್ಪಥ" ದ ಸೃಷ್ಟಿಗೆ ಕಾರಣರಾಗಿ ಕೇವಲ ಏಳು ಹೆಜ್ಜೆಗೆ ಇಂಥಹ ಒಂದು ಮಹಾದವಕಾಶದಲ್ಲಿ ನಾವುಗಳು ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಶ್ರೀಯುತ ಪ್ರಭುನಂದನ ಮೂರ್ತಿ ಅವರಿಗೆ ಸಲ್ಲುತ್ತದೆ

Friday, 28 October 2011

ಭಾಷಣ ಕಲೆ ಮತ್ತು ವಾಕ್ಪಥ ೨


ಭಾಷಣ ಕಲೆ ಮತ್ತು ವಾಕ್ಪಥ ......   ೨

ಸಭಾ ಕಂಪನವೇ...?


ಇನ್ನು ನೀವು ಹೆದರುವ ಕಾರಣವೇ ಇಲ್ಲ

ಕೆಲವೊಮ್ಮೆ ನಿಮ್ಮ ಈ ಕೊರತೆ ಇದಿರಿನವರು ಗುರುತಿಸದೇ ಇದ್ದರೂ ಇರಬಹುದು..
.
ನಿಮ್ಮ ವಿಷಯ ಅಷ್ಟು ಮಹತ್ವಾದ್ದಾಗಿರುವಾಗ....!!!!

ನೆನಪಿರಲಿ..!!

ಎಲ್ಲಾ ಪ್ರಭಾವಶಾಲೀ ಭಾಷಣಕಾರರೂ ಒಂದಲ್ಲಾ ಒಂದು ಸಾರಿ ( ಮೊದ ಮೊದಲು) ನಿಮ್ಮ ಈ ಅನುಭವವನ್ನು

ಅನುಭವಿಸಿಯೇ ಇರುತ್ತಾರೆ.

ಒಮ್ಮೆ ವಾಕ್ಪಥಕ್ಕೆ ಬನ್ನಿ,

ನಿಮ್ಮಲ್ಲಿನ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ನಿಮ್ಮನ್ನು ಭಾಷಣಕ್ಕೆ ಅಣಿಗೊಳಿಸುವ ಧ್ಯೇಯವನ್ನೇ ಹೊತ್ತ ಸಂಸ್ಥೆಯಿದು.

ನೆನಪಿರಲಿ ಇಲ್ಲಿ ಮಾತ್ರ ನಿಮ್ಮ ತಪ್ಪಿಗೆ ಶಿಕ್ಷೆ ಇಲ್ಲ....

ಧೈರ್ಯದ ಅಭ್ಯಾಸ

ಆತ್ಮ ವಿಶ್ವಾಸಹೊಂದಿದಂತೆ ನಟಿಸಿ.... ಸಧ್ಯದಲ್ಲೇ ನೀವು ಆತ್ಮ ವಿಶ್ವಾಸ ಹೊಂದುವಿರಿ.....

ವಾಕ್ಪಥದಲ್ಲಿ ನೀವು ಹೆಚ್ಚು ಹೆಚ್ಚು ಆತ್ಮ ವಿಶ್ವಾಸ ಹೊಂದುವಿರಿ.ಯಾಕೆಂದರೆ ಇಲ್ಲಿ ನಿಮಗೆ ಹೆಜ್ಜೆ ಹೆಜ್ಜೆಗೆ ಪ್ರೋತ್ಸಾಹ ಮತ್ತು

ಉತ್ತೇಜನ ಕೊಡುವವರಿದ್ದಾರೆ.

ಪರಿಶೀಲನಾತ್ಮಕ ಗುಂಪಿನೆದುರು ನಿಂತು ಮಾತನಾಡುತ್ತಿರುವಾಗ ಹಲವರಿಗೆ ಇರಿಸು ಮುರಿಸಾಗಬಹುದು, ಅಥವಾ ಒಂದು

ಜವಾಬ್ದಾರಿಯ, ಅಪೇಕ್ಷೆಯ,ಮತ್ತು ಸಂದಭದ ಭಾರದ ಅನುಭವ ವೇಧ್ಯವಾಗಬಹುದು. ಇದೇ ಭಾವ ಮುಂದುವರಿದರೆ ಸಭಾ

ಕಂಪನದ ಅನುಭವಕ್ಕೆ ತಿರುಗುವುದು.



ಮುಂದಿನ ಸಲಕ್ಕೆ.....

ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ


 ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ
 
ಸೃಷ್ಟಿ ಕಲಾಲಯ ಸಂಸ್ಥೆ ಕಳೆದ ೩ ವರ್ಷಗಳಿಂದ ಪುಸ್ತಕ ಪರಿಷೆ ನಡೆಸುತ್ತಿದ್ದು ಇದೀಗ ನಾಲ್ಕನೆಯ ಪರಿಷೆಗೆ ಸಜ್ಜಾಗುತ್ತಿದೆ.ಬಂದವರೆಲ್ಲರೂ ಒಂದು ಪುಸ್ತಕವನ್ನು ಉಚಿತವಾಗಿ ಕೊಂಡೊಯ್ಯಬಹುದು. ನಮ್ಮ ಪುಸ್ತಕಗಳನ್ನು ಇತರರು ಮತ್ತು ಅವರ ಪುಸ್ತಕಗಳನ್ನು ನಾವು ಓದುವ ಮೂಲಕ ಇಬ್ಬರೂ ಪುಸ್ತಕ ಸಂಬಂಧಿಗಳಾಗುವ ಅವಕಾಶ ಸಿಗಲಿದೆ.

 
ಈಸಾರಿ ತಮ್ಮ ಮಹತ್ತರ ಯೋಜನೆಯೊಂದರಲ್ಲಿ ವಾಕ್ಪಥವನ್ನು ಸಕ್ರಿಯವಾಗಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿ ಉಜ್ವಲ ಭವಿಷ್ಯವನ್ನೂ ಗುರುತರ ಜವಾಬ್ದಾರಿಯನ್ನೂ ಪಡೆದ ಇದೇ ಅಕ್ಟೋಬರ್ ಮೂವತ್ತರಂದು ಸೃಷ್ಟಿ ವೆಂಚರ್ಸ್ ನಡೆಸುತ್ತಿರುವ ಪುಸ್ತಕ ಪರಿಷೆಯಲ್ಲಿ ವಾಕ್ಪಥದ ಬ್ಯಾನರಿನಡಿಯಲ್ಲಿ ಇಡೀ "ಪುಸ್ತಕ ಪರಿಷೆ" ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ, ಅದೂ ಇದಕ್ಕೆಂದೇ ವಿಷೇಷವಾಗಿ ಆಯೋಜಿಸಲ್ಪಟ್ಟ ಮಂಚದಲ್ಲಿ ಅದೂ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನ ." ಇವೆಂಟ್ ಮೆನೇಜ್ಮೆಂಟ್!!!" ಇದಲ್ಲವೇ ವಾಕ್ಪಥದ ಮೇಲಿನ ಭರವಸೆ ಮತ್ತು ಪ್ರೀತಿ. .
 
ವಾಕ್ಪಥ - ೮ ನೇ ಹೆಜ್ಜೆ.
ವಾಕ್ಪಥದ ಎಂಟನೆಯ ಹೆಜ್ಜೆಯು,೩೦/೧೦/೨೦೧೧ ,ಭಾನುವಾರ ಬೆಳಿಗ್ಗೆ ೧೨.೦೦ ಕ್ಕೆಮೂಡಿ ಬರಲಿದೆ.
ಸ್ಥಳ:  ವಾಲಿಬಾಲ್ ಸರ್ಕಲ್, ಪೋಲೀಸ್ ಸ್ಟೇಶನ್ ಸಮೀಪ ,ಬಸವನಗುಡಿ, ಬೆ೦ಗಳೂರು.
ಕಾರ್ಯಕ್ರಮದ ವಿವರ:
ಗೋಷ್ಠಿಯ ನಿರ್ವಹಣೆ: ಬೆಳ್ಳಾಲ ಗೋಪೀನಾಥ ರಾವ್
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೨-೦೦ಕ್ಕೆ
ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಭಾಷಣಕಾರರ ಪರಿಚಯ ಇತ್ಯಾದಿಗಳನ್ನು ಬೆಳ್ಳಾಲ ಗೋಪೀನಾಥ ರಾವ್ ತಿಳಿಸುತ್ತಾರೆ.
 
ಈ ಸಾರಿಯ ವಿಶೇಷ ವೆಂದರೆ ಪ್ರತಿ ಭಾಷಣಕಾರರಿಗೆ 10 ನಿಮಿಷಗಳ ಸಮಯವಿರುತ್ತದೆ. 
 
 ಮೊದಲನೆಯ ಭಾಷಣ:  ಶ್ರೀ ಹರೀಶ್ ಆತ್ರೇಯ  ವಿಷಯ: ಓದಿನಿಂದ ವ್ಯಕ್ತಿ ಮತ್ತು ವ್ಯಕ್ತಿತ್ವದ ವಿಕಾಸ
ಎರಡನೆಯ ಭಾಷಣ: ಶ್ರೀ ಹರ್ಷ ಸಾಲಿಮಠ್    ವಿಷಯ: ಕನ್ನಡ ಓದುಗರ ಕೊರತೆಯನ್ನು ಎದುರಿಸುತ್ತಿದೆಯೇ?
 
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.
ಮೊದಲನೆಯ ಭಾಷಣದ ವಿಮರ್ಶೆ: ಶ್ರೀ ಹೊಳೆನರಸೀಪುರ ಮಂಜುನಾಥ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪ್ರಭು
 
ಈ ಗೋಷ್ಠಿಯ ಸಮಯಪಾಲಕರಾಗಿ ಶ್ರೀ ರಾಮ ಮೋಹನ್ ಕಾರ್ಯ ನಿರ್ವಹಿಸಲಿದ್ದಾರೆ.
ವ್ಯಾಕರಣ ಶುದ್ಧಿ ಕಾರ್ಯವನ್ನು ಶ್ರೀ  ಜಯಂತ್ ರಾಮಾಚಾರ್. ನಿರ್ವಹಿಸಲಿದ್ದಾರೆ.
ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.
ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಿಮ್ಮ ಬರುವಿಕೆಯನ್ನು ಎದುರು ನೋಡುವ -
ವಾಕ್ಪಥ ತ೦ಡ.
ದಯವಿಟ್ಟು ಗಮನಿಸಿ:  ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ. 
ಕಾಯುತ್ತಿದ್ದೇವೆ, ತಮ್ಮೆಲ್ಲರ ಬರವಿಗಾಗಿ ಪ್ರೀತಿಯಿಂದ...
ಬರುತ್ತೀರಲ್ಲವೇ

ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ



ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ
ಹೌದು ಎಂದಿನಂತೆ ವಾಕ್ಪಥಿಕರ ಏಳನೆಯ ಸುಂದರ ಗೋಷ್ಟಿ ಸೃಷ್ಟಿ ವೆಂಚರ್ಸ್ ನಲ್ಲಿ ಸಪ್ಟೆಂಬರ್ ನ ೨೫ ನೆಯ ತಾರೀಖು ತನ್ನ ನಿಶ್ಚಿತಾವಧಿಯಲ್ಲಿ ಗುಂಪಿನಲ್ಲಿ ವಿಶೇಷವಾಗಿ ನೆರೆದು ರಂಜಿಸಿತು.

ಅದರ ವೈವಿಧ್ಯಮಯ ವಿಷೇಷತೆಯನ್ನು ನೀವೂ ( ಇದನ್ನು ಓದುತ್ತಿರುವ, ಹಾಗೂ ಸವಿಯುತ್ತಿರುವ ನೀವೆಲ್ಲ ಪ್ರೇಕ್ಷಕರೂ ಅಲ್ಲಗಳೆಯಲಾರಿರಿ) ಅದಕ್ಕಾಗಿಯೇ ನನ್ನ ವಿಟೋ ಪವರ್ ಉಪಯೋಗಿಸಿ ಪ್ರಭು ಅವರಿಂದ ಇಂದಿನ ವಿಷಯ ವರದಿಯನ್ನು ಬರೆಯಲು ಅನುಮತಿ ಪಡೆದಿದ್ದೆ.
ಇಂದಿನ ಈ ಏಳನೆಯ ಹೆಜ್ಜೆಯ ವಿಶೇಷತೆಯನ್ನು ಬಣ್ಣಿಸಲು ಪದಗಳಿಲ್ಲ.ಕಳೆದ ವರ್ಷದ ಮಾರ್ಚಿ ಎಪ್ರಿಲ್ ನಲ್ಲಿ ಶೈಶವಾವಸ್ಥೆಯಲ್ಲಿ ಜನ್ಮ ತಾಳಿದ ಈ ನಮ್ಮ ನಿಮ್ಮೆಲ್ಲರ ವಾಕ್ಪಥದ ಕೂಸು ತನ್ನದೇ ವೈವಿಧ್ಯತೆಗಳಿಂದ ಇಷ್ಟು ಬಲಗೊಳ್ಳಬಹುದು ಎಂಬ ಊಹೆ ನನಗಂತೂ ಖಂಡಿತಾ ಇರಲಿಲ್ಲ.ಯಾವುದೇ ಕೂಟ ಅಥವಾ ಗುಂಪು ಜನ್ಮ ತಾಳಲು ನಿರ್ಧಿಷ್ಟ ಅವಧಿ ಅಥವಾ ಹೂಟಗಳಿಲ್ಲ. ಆದರೆ ಅದು ತನ್ನ ಹೆಜ್ಜೆಯನ್ನು ಗುರಿಯತ್ತ ಕೇಂದ್ರೀಕರಿಸಿ ಅದೇ ದಾರಿಯಲ್ಲಿ ಕ್ರಮಿಸಿ ನೆರೆಯಲು ಅಥವಾ ಬೆಳೆಯಲು ಮಾನಸಿಕ ದೄಢತೆ ಮತ್ತು ಹುಮ್ಮಸ್ಸು ಮತ್ತು ಅದೇ ದಾರಿಯಲ್ಲಿ ನಡೆಸಲು ಹೊಂದಾಣಿತ ಯೋಜಿತ ಮನಸ್ಸೂ , ಪ್ರೇರಣೆ ಕೊಡುವ, ವ್ಯವಸ್ಥಿತ ಸಂಚಾಲನೆ ಮಾಡುವ ವ್ಯಕ್ತಿ ಅಥವಾ ಗುಂಪಿನ ಇವೆಲ್ಲಕ್ಕಿಂತ ಹೆಚ್ಚು ಈ ಅಂದದ ವಾಕ್ಪಥವನ್ನು ಅಚ್ಚುಕಟ್ಟಾಗಿ ನಿಯಮಿತವಾಗಿ ನಡೆಸಲು ಜಾಗವೂ ಬೇಕು, ಪ್ರೋತ್ಸಾಹವೂ ಬೇಕು. ಇವೆಲ್ಲವನ್ನೂ ನಿಯಮಿತವಾಗಿ ಕಲ್ಪಿಸಿ ನಡೆಸಿ ಮುನ್ನುಗ್ಗುತ್ತಿರುವ ವಾಕ್ಪಥ ದ ತಂಡಕ್ಕೆ ಸೃಷ್ಟಿ ವೆಂಚರ್ಸ್ ಮತ್ತು ಸಂಪದಿಗರೆಲ್ಲರ ಸಹಕಾರ ಬಣ್ಣನೆಗೂ ಮೀರಿದ್ದು.
ಇರಲಿ ಇವತ್ತಿನ ವಿಶೇಷವೆಂದಿರಾ?
ಅದಕ್ಕೇ ಬರುತ್ತಿದ್ದೇನೆ , ಒಂದೆರಡಲ್ಲ ಮರಾಯರೇ, ಮೊದಲನೆಯದು ಸಂಪದಿಗ ಮಿತ್ರರಾದ ಶ್ರೀಯುತ ಸತ್ಯ ಚರಣ ಮತ್ತು ಹರ್ಷ ಸಾಲಿಮಠ್ ರವರು ಸಕ್ರಿಯವಾಗಿ ಭಾಗವಹಿಸಿದ್ದು. ಎರಡನೆಯ ವಿಶೇಷ ಶಾಸ್ತ್ರೀಯವಾಗಿ ಬರುತ್ತಿರುವ ಆಶು ಭಾಷಣ ಬಿಟ್ಟು ಕೊಟ್ಟು ವಾಕ್ಪಥಿಕರೆಲ್ಲರ ಪಾತ್ರದ ಹಾಗೂ ಮುಂದಿನ ವಾಕ್ಪಥದ ಪಥವನ್ನು ಯೋಜಿಸುವ ಗುರುತರ ಯೋಚನೆಯನ್ನು ಮಂಡಿಸಲು ಕಲ್ಪಿಸಿದ್ದು. ನೆರೆದವರು ಸ್ವಲ್ಪವಾದರೂ ಎಲ್ಲರ ಆಶಯ ಯೋಜನೆಯ ಯೋಚನೆ ಯನ್ನು ಬಣ್ಣಿಸುವ ಕಾರ್ಯದಲ್ಲಿನ ತಲ್ಲೀನತೆ ಹಾಗೂ ಉತ್ಸಾಹ ನಿಜವಾಗಿಯೂ ಮುಂದಿನ ದಿನಗಳಲ್ಲಿನ ವಾಕ್ಪಥದ ನಾವೀನ್ಯ ಹಾಗೂ ರೂಪು ರೇಷೆಗೆ ಸ್ಪಷ್ಟ ಆಕಾರವನ್ನೇ ನೀಡಿತ್ತು.ಎಲ್ಲದಕ್ಕೂ ಕುಂದಣವಿಟ್ಟಂತೆ ನಮ್ಮೆಲ್ಲಾ ಆಸೆ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸುತ್ತಿರುವ ನಾಗರಾಜ ನಾವುಂದರು ಈಸಾರಿ ತಮ್ಮ ಮಹತ್ತರ ಯೋಜನೆಯೊಂದರಲ್ಲಿ ವಾಕ್ಪಥವನ್ನು ಸಕ್ರಿಯವಾಗಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿ ಉಜ್ವಲ ಭವಿಷ್ಯವನ್ನೂ ಗುರುತರ ಜವಾಬ್ದಾರಿಯನ್ನೂ ಹೊರಿಸಿದರು. ಇದೇ ಅಕ್ಟೋಬರ್ ಮೂವತ್ತರಂದು ಸೃಷ್ಟಿ ವೆಂಚರ್ಸ್ ನಡೆಸುತ್ತಿರುವ ಪುಸ್ತಕ ಪರಿಷೆಯಲ್ಲಿ ವಾಕ್ಪಥದ ಬ್ಯಾನರಿನಡಿಯಲ್ಲಿ ಇಡೀ "ಪುಸ್ತಕ ಪರಿಷೆ" ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ, ಅದೂ ಇದಕ್ಕೆಂದೇ ವಿಷೇಷವಾಗಿ ಆಯೋಜಿಸಲ್ಪಟ್ಟ ಮಂಚದಲ್ಲಿ ಅದೂ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನ ." ಇವೆಂಟ್ ಮೆನೇಜ್ಮೆಂಟ್!!!" ಇದಲ್ಲವೇ ವಾಕ್ಪಥದ ಮೇಲಿನ ಭರವಸೆ ಮತ್ತು ಪ್ರೀತಿ. .
ಇವತ್ತಿನ ಭಾಷಣಗಳಲ್ಲಿ ಮೊದಲಿಗರಾದ ಸಂಪದದ ಹಾಸ್ಯ ಲೇಖಕರಾದ "ಗೋಪಾಲ್ಜೀಯವರು" ಇಂದಿನ ಮದುವೆ ಮತ್ತು ಅಂದಿನ ಮದುವೆಯ ಬಗ್ಗೆ ತಮ್ಮದೇ ಹಾಸ್ಯ ಶೈಲಿಯಲ್ಲಿ ನಿರರ್ಗಳವಾಗಿ ಮೂದಲಿಸಿದರು. ಅವರ ಮಾತು ನಾತಿ ಚರಾಮಿಯಿಂದ ಹೊರಟು ಇಂದಿನ ಕೂಡಿಬಾಳಿದರೆ....( ಲಿವಿಂಗ್ ಟುಗೆದರ್) ಎಂಬಲ್ಲಿಗೂ ಬಂದು.... ಅವರೇ ತಮ್ಮ ಮಾತಿನಲ್ಲೇ ಈಗಿನವರಿಗೆ "ಲಿವಿಂಗ್ ಟುಗೆದರ್" ಎಂಬ ಶಬ್ದದ ಅರ್ಥ ವೂ ಗೊತ್ತಿಲ್ಲದೇ ಲಿವಿಂಗ್ ಟುಗೆದರ್ ಮಾಡುತ್ತಿದ್ದಾರೆ ಎನ್ನುವಾಗ ನನಗೇ ಸಂಶಯ ಬಂತು. ಅಂದರೆ ಈ ವಿಷಯ ಇವರಿಗಂತೂ ಸರಿಯಾಗಿಯೇ ತಿಳಿದಿರಬಹುದು ಅಂತ.
ಎರಡನೆಯ ಭಾಷಣ ಹರೀಶ್ ಅತ್ರೇಯ ರಿಂದ ಇಂದಿನ ಯುಗದಲ್ಲಿ ಭಗತ್ ಸಿಂಗ್ ನ ನಿಲುಮೆಯನ್ನು ಪ್ರತಿ ಪಾದಿಸುತ್ತಾ, ಆದರ್ಶ ವಾದಿಯಾಗಲು ಅಂದಿನ ಅಂಗ್ರೇಜೀ ಸರಕಾರದ ಅಧಿಕಾರಸ್ಥರ ಅತೀ ಕ್ರೂರ ನಿಲುವು ದಾರುಣವಾದ ಸಾಮಾನ್ಯರ ಬದುಕು ಕಾರಣವಾಗಿತ್ತು ಮತ್ತು ಈಗಿನ ನಮ್ಮ ಕಂಟಕಕಾರಿ ನಿರ್ಲಿಪ್ತ ನಿಲುವು ಬದಲಾಗ ಬೇಕಿರುವ ಔಚಿತ್ಯವನ್ನೂ ತನ್ನದೇ ಆದ ಆಪ್ತ ವೈಚಾರಿಕತೆಯುಕ್ತ ಮಾತುಗಳಲ್ಲಿ ವಿವರಿಸಿದರು.
ಮೂರನೆಯ ಭಾಷಣ ನಮ್ಮ ನಿಮ್ಮೆಲ್ಲರ ಸಂಪದಿಗ ಸ್ನೇಹೀ ತರುಣ ಸುಂದರ ಉತ್ಸಾಹೀ ಹರ್ಷ ಸಾಲಿಮಠರವರದ್ದು . ಇವರು ತೆಗೆದು ಕೊಂಡ ವಿಷಯ ಇಂದಿನ ಭಾರತದಲ್ಲಿ ಗಾಂಧೀಜಿಯ ತತ್ವ. ಅವರ ಭಾಷಣ ನಿಜವಾಗಿಯೂ ಆಕರ್ಷಕವಾಗಿತ್ತು. ಕೃಷ್ಣ, ಚಾಣಕ್ಯ, ಬಸವಣ್ಣನವರ ದೃಷ್ಟಿ ಕೋನಗಳನ್ನು ಇಂದಿನ ಭಾರತದ ವಿದ್ಯಮಾನಗಳಿಗೆ ನಮ್ಮ ನಡೆನುಡಿಯನ್ನು ಸರಳೀಕರಿಸಿ ಕೊಂಡು ಅಳವಡಿಸಿಕೊಂಡಾಗ ಸರಳತೆಯತ್ತ ಪ್ರತಿಯೋರ್ವರೂ ಹೆಜ್ಜೆ ಹಾಕಬಹುದೆಂಬುದನ್ನು ವಿವರಿಸುತ್ತಾ ತನ್ನದೇ ದೃಷ್ಟಿಯಲ್ಲಿ ಪ್ರತಿಪಾದಿಸಿದರು.
ನಂತರದಲ್ಲಿ ಶ್ರೀಯುತ ನಾಗರಾಜ ನಾವುಂದದವರು ಮಾತನಾಡುತ್ತಾ ತಮ್ಮದೇ ಆದ ಪುಸ್ತಕ ಪರಿಷೆಯ ನಾಲ್ಕನೆಯ ಸಡಗರದಲ್ಲಿ ವಾಕ್ಪಥ ಹೇಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಸಂಭ್ರಮಿಸ ಬಹುದೆಂಬುದನ್ನು ವಿವರಿಸಿ ವಾಕ್ಪಥದ ಮೇಲಿನ ಅವರ ನಂಬಿಕೆಯನ್ನು ಧೃಢೀಕರಿಸಿದರು.
ಇವತ್ತಿನ ಹೆಜ್ಜೆಯಲ್ಲಿ ಅತ್ಯಂತ ಖುಷಿ ಕೊಟ್ಟಿದ್ದು ವಾಕ್ಪಥಿಕರೆಲ್ಲರ ಮನಸಾ ವಾಚಾ ಭಾಗವಹಿಸುವಿಕೆ ಮತ್ತು ಪ್ರತಿಯೊಬ್ಬರ ಮನದಲ್ಲಿ ವಾಕ್ಪಥದ ಬಗೆಗೆ ತನ್ನದೇ ದೃಷ್ಟಿ ಕೋನ ಹಾಗೂ ವಾಕ್ಪಥದ ಮುಂದಿನ ಹೆಜ್ಜೆಗಳ ಬೆಳವಣಿಗೆಯ ಬಗೆಗೆ ಹೊಂದಿರುವ ಮಮಕಾರ, ಕಾಳಜಿ ಅತ್ಮೀಯತಾ ಭಾವನೆಗಳ ಮುಕ್ತ ಧೋರಣೆ ಹೊಂದಿರುವುದೂ. ಈ ಬಗೆಗೆ ಮೊದಲಿನಿಂದಲೂ ಸಕ್ರಿಯವಾಗಿ ಭಾಗವಹಿಸುತ್ತಿರುವ ವಾಕ್ಪಥಿಕರಾಗಲೀ ಇಂದೇ ಸೇರಿ ಭಾಗವಹಿಸಿ ಈ ಗುಂಪಿನೊಂದಿಗೆ ಮೇಳವಿಸಿಕೊಂಡ ಸತ್ಯ ಚರಣರ ಆಪ್ತ ಗೆಳೆಯ ದಿಲೀಪ್ ಎಸ್ ಎಮ್ ಆಗಲೀ , ಮೊದಲನೆಯದಾಗಿ ಭಾಗವಹಿಸಿ ತನ್ನ ದಿಟ್ಟ ನೇರ ಆಕರ್ಷಣಕಾರೀ ಭಾಶಣದಿಂದ ಎಲ್ಲರನ್ನೂ ಆಕರ್ಷಿಸಿದ ಸಂಪದಿಗ ಸ್ನೇಹಿ ಹರ್ಷ ಸಾಲಿಮಠ್ ಆಗಲೀ ತನ್ನೆಲ್ಲಾ ಸ್ವಂತ ಕೆಲಸವನ್ನು ಬದಿಗೊತ್ತಿ ಇವತ್ತಿನ ಗೋಷ್ಟಿಯಲ್ಲಿ ಭಾಗವಹಿಸಿ ತನ್ನ ಅಮೂಲ್ಯ ಸಲಹೆ ಸಹಕಾರವನ್ನಿತ್ತ ಶ್ರೀಯುತ ಸತ್ಯ ಚರಣರಾಗಲೀ, ಭಗತ್ ಸಿಂಗ್ ರ ಜೀವನದ ಹೃದಯ ಸ್ಪರ್ಷೀ ಘಟನೆಗಳನ್ನು ತನ್ನದೇ ವಿಶಿಷ್ಟ ಸುಂದರ ಆಕರ್ಷಕ ಶೈಲಿಯಲ್ಲಿ ವಿವರಿಸುತ್ತಾ ಅದ್ಭುತ ಲೋಕದಲ್ಲಿ ಕೊಂಡೊಯ್ದ ನಮ್ಮ ನಿಮ್ಮೆಲ್ಲರ ಕಣ್ಮಣಿ ಆತ್ರೇಯರಾಗಲೀ , ಮೂಲಾಧಾರವಾಗಿದ್ದು ಪ್ರತಿ ಸಲ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಆಕರ್ಷಕ ಬ್ಯಾನರ್ ಸೃಷ್ಟಿಸಿದ ರಘು ಅವರಾಗಲೀ , ಇವತ್ತಿನ ಈ ವಿಶೇಷ ಗೋಷ್ಟಿಯನ್ನು ಉನ್ನತ ಸ್ಥಾನದಲ್ಲಿಡಲು ಶ್ರಮಿಸಿದ ಜಯಂತ್ ಆಗಲೀ , ಇವತ್ತಿನ ಗೋಷ್ಟಿಯ ಮುಕ್ತ ಯೋಚನೆಗಳಿಗೆ ಯೋಜಿಸಿದ ವಾಕ್ಪಥದ ಸೃಷ್ಟಿ ಕರ್ತ ಶ್ರೀಯುತ ಪ್ರಭು ಆಗಲೀ, ತನ್ನ ವಿಶಿಷ್ಟ ಸಮ್ಮೋಹನಾ ಕಂಠದಿಂದ ಸಭಿಕರನ್ನು ಆಕರ್ಷಿಸೋ ವಾಕ್ಪತದ ಅವಿಭಾಜ್ಯ ಅಂಗವಾದ ಹೊಳೆನರಸೀಪುರದ ಮಂಜುವಾಗಲೀ, ತನ್ನದೇ ವಿಶಿಷ್ಟ ಛಾಪು ಹೊಂದಿರುವ ಶ್ರೀಯುತ ರಾಮ ಮೋಹನ್ ರಾಗಲೀ, ಹಿರಿಯ ಸಹೃದಯಿ ಎಮ್ ಎನ್ ಎಸ್ ರಾವ್ ಅವರಾಗಲೀ ಎಲ್ಲರ ಉತ್ಸಾಹ ವರ್ಣನಾತೀತ. ಈ ಉತ್ಸಾಹ ಪ್ರೋತ್ಸಾಹ ಸಲಹೆ ಸಹಕಾರಗಳಿಂದ ಖಂಡಿತವಾಗಿಯೂ ವಾಕ್ಪಥದ ಮುಂದಿನ ಹೆಜ್ಜೆಗಳು ಗಮ್ಯದತ್ತ ದಾಪುಗಾಲು ಹಾಕುವುದರಲ್ಲಿ ಸಂಶಯವೇ ಇಲ್ಲ.

ಇದಕ್ಕೆಂದೇ ಮುಂದಿನ ಭಾನುವಾರ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ತಂಡವು ವಿಷೇಷ ಗೋಷ್ಟಿಯೊಂದನ್ನು ಹೊಮ್ಮಿಕೊಂಡಿದೆ. ವಾಕ್ಪಥ ದ ಹೊಣೆಗಾರಿಕೆಯನ್ನು ಶ್ರೀಯುತ ನಾಗರಾಜರ ನಂಬಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಯೋಜನೆಯನ್ನು ರೂಪಿಸಲು.
ಬರುತ್ತೀರಲ್ಲವೇ..?
ನಿಮ್ಮೆಲ್ಲರ ಅನಿಸಿಕೆಗಳಿಗೆ ಸಲಹೆಗಳಿಗೆ ಮುಕ್ತ ಸ್ವಾಗತ.
ಬರೆಯುತ್ತಿರಿ.
ಮುಂಬರುವ ದಿನಗಳಲ್ಲಿ ವಾಕ್ಪಥವು ಸರ್ವಾಂಗ ಸುಂದರವಾಗಿ ಇನ್ನೂ ಹೆಚ್ಚು ಗುರುತರ ಜವಾಬ್ದಾರಿಯನ್ನು ಹೊರಲು ಶಕ್ತವಾಗಲು ಸಂಪದಿಗರೆಲ್ಲರ ಸಲಹೆ ಸಹಕಾರ ಹಾಗೂ ಪ್ರೋತ್ಸಾಹವೂ ಅತ್ಯಗತ್ಯ.
ನೀಡುವಿರಲ್ಲವೇ....?
ಇಂತೀ ನಿಮ್ಮೆಲ್ಲರ ನೆಚ್ಚಿನ ವಾಕ್ಪಥ ತಂಡ


ದೃಶ್ಯಾವಳಿಗೆ ಇಲ್ಲಿ ಕುಟುಕಿ

೧.  ಜಯಂತರ ಆರಂಭಿಕ ವಿವರ                  http://youtu.be/Ks2D...
೨. ಗೋಪಾಲ್ಜೀ ಯವರ ಮದುವೆಯ ಮಾತುಕಥೆ  http://youtu.be/17Ve...
೩. ಹರೀಶ ಆತ್ರೇಯರ ಭಗತ್ ಸಿಂಘ್             http://youtu.be/9Fp4...
೪. ಹರ್ಷ ಸಾಲಿಮಠ್ ಅವರ ಆಕರ್ಷಕ ಶೈಲಿ     http://youtu.be/jB99...
೫. ರಘು ಅವರ ಮೊನಚು ವ್ಯಾಕರಣ ವಿಮರ್ಶೆ    http://youtu.be/cFue...
೫.  ಭಾಷಣಗಳ ವಿಮರ್ಶೆ: http://youtu.be/cFue...
೬.  ಅನಿಸಿಕೆಗಳು:          http://youtu.be/iDNZ... http://youtu.be/6yc9...