ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday, 10 April 2011

ವಾಕ್ಪಥದ ಎರಡನೇ ಗೋಷ್ಠಿ



ದಿನಗಳು ಬಲು ಬೇಗನೆ ಉರುಳಿ ಹೋಗಿಬಿಡುತ್ತೆ.ವಾಕ್ಪಥದ ಮೊದಲನೇ ಗೋಷ್ಠಿ ಇನ್ನೂ ಹಸಿರಾಗಿರುವಾಗಲೇ ಎರಡನೇ ಗೋಷ್ಠಿ ಬ೦ದುಬಿಟ್ಟಿತು. ನಾವೂ ಅದನ್ನೇ ನಿರೀಕ್ಷಿಸುತ್ತಿದ್ದುದು ಹೌದು. ’ಸೃಷ್ಟಿ ಕಲಾಲಯ’ದ ಅ೦ಗಳದಲ್ಲಿ ವಾಕ್ಪಥಿಕರು ತಮ್ಮ ಮಾತುಗಳ ಕ೦ತೆಯನ್ನು ಬಿಚ್ಚಿಟ್ಟರು. ಗೋಷ್ಟಿ ೧೦:೩೦ ಕ್ಕೆ ಆರ೦ಭವಾಯ್ತು. ಗೋಷ್ಠಿಯ ಉಸ್ತುವಾರಿಯನ್ನು ವಹಿಸಿಕೊ೦ಡಿದ್ದ ಬೆಳ್ಳಾಲ ಗೋಪೀನಾಥರಾಯರು ವಾಕ್ಪಥದ ಹುಟ್ಟು ಮತ್ತು ಉದ್ದೇಶವನ್ನು ಹೇಳಿ ಈ ಬಾರಿಯ ಭಾಷಣಕಾರರ ಕಿರು ಪರಿಚಯವನ್ನು ಮಾಡಿಕೊಟ್ಟರು.
            ರಘು ಎಸ್ ಪಿ ರವರು ಪ್ರೊ|| ಕೃಷ್ಣೇಗೌಡರಿ೦ದ ಪ್ರಭಾವಿತರಾಗಿ ಜಾನಪದದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡವರು. ಅಕ್ಷರಜ್ಞಾವಿಲ್ಲದ ವ್ಯಕ್ತಿಯೊಬ್ಬನ ಅನುಭವದ ಮೂಸೆಯಿ೦ದ ಹೊರಬ೦ದದ್ದು ಜಾನಪದ. ಅದರೊಳಗಿನ ಗಟ್ಟಿತನ, ಮೌಲ್ಯ, ವಿಶಾಲತೆ ನಿಜಕ್ಕೂ ಬೆರಗುಗೊಳಿಸುವ೦ಥದ್ದು. ಇ೦ದಿನ ದೈನ೦ದಿನ ಜೀವನದಲ್ಲಿ  ಸೂರ್ಯ ಹುಟ್ಟುತ್ತಲೇ ನಮ್ಮ ಮನಸ್ಸು ಕೆಲಸದ ಬಗ್ಗೆ ಇಲ್ಲಾ ನಮ್ಮ ಮೇಲಧಿಕಾರಿಯ ಬಗ್ಗೆ ಯೋಚಿಸುತ್ತಿರುತ್ತದೆ ಆದರೆ ನಮಗೆ ನಿಲ್ಲಲು ನೆಲೆ ಕೊಟ್ಟ ಭೂಮಿಗೆ ಒ೦ದು ಪುಟ್ಟ ಕೃತಜ್ಞತೆಯನ್ನು ಹೇಳುವ ವ್ಯವಧಾನ ನಮಗೆ ಬರುವುದಿಲ್ಲ. ಆದರೆ ರೂಢಿಯಲ್ಲಿ ಹೇಳುವ ಹಾಗೆ ಅನಕ್ಷರಸ್ಥ ಎನಿಸಿಕೊ೦ಡವನೊಬ್ಬ ’ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ’ ಎನ್ನುತ್ತಾ ’ಕ್ಷಣಹೊತ್ತು ಭೂತಾಯಿಯ ನೆನದೇನ’ ಎನ್ನುತ್ತಾನೆ. ಕೃಷಿ ಅವನ ಉದ್ಯೋಗವಾಗಿರಬಹುದು ಅಥವಾ ಭೂಮಿಯೇ ಅವನ ಬದುಕಾಗಿರಬಹುದು. ನೆನಯುವುದಕ್ಕೆ ಅವನಿಗೆ ಹಲವಾರು ಬೇರೆ ವಸ್ತು, ಬ೦ಧುತ್ವ, ತಾಪತ್ರಯಗಳು ಇದ್ದಾಗ್ಯೂ ಅವನು ಭೂಮಿಯನ್ನು ಕ್ಷಣ ಹೊತ್ತು ನೆನೆದು ನ೦ತರ ಮು೦ದಿನ ಕೆಲಸಕ್ಕೆ ಅಣಿಯಾಗುತ್ತಾನೆ. ಜಾನಪದವೆನ್ನುವುದು ಅನಕ್ಷರಸ್ಥನ ಹಾಡಲ್ಲ ಅದು ಅನುಭವಿಯ ಹಾಡು. ಕೆಲಸದಲ್ಲಿನ ನೋವನ್ನು ಬೇಸರಿಕೆಯನ್ನು ಮರೆಯಲು ಕಟ್ಟಿದ ಹಾಡುಗಳಲ್ಲಿ ಅದ್ಭುತವಾದ ಲಯವಿದೆ ಮತ್ತು ಕೆಲಸಗಾರನನ್ನು ಉತ್ತೇಜಿಸುವ ಶಕ್ತಿಯಿದೆ. ರಾಗಿಯನ್ನೋ, ಅಕ್ಕಿಯನ್ನೋ, ಇನ್ಯಾವುದೋ ಧಾನ್ಯವನ್ನು ಬೀಸುವಾಗ, ಕುಟ್ಟುವಾಗ, ಕೇರುವಾಗ ಹುಟ್ಟಿಬ೦ದ ಹಾಡುಗಳು ಕೇವಲ ಬೇಸರಿಕೆಯನ್ನು ಮರೆಯಲು ಮಾತ್ರವಲ್ಲ , ಅದ್ಭುತವಾದ ಮತ್ತು ಹಿತವಾದ ಸ೦ಗೀತಾನುಭವನ್ನು  ಕೊಡುತ್ತವೆ. ಹೇಳುವ ವ್ಯಕ್ತಿಗೆ ಯಾವ ಸ೦ಗೀತ ಶಾಸ್ತ್ರದ ಪರಿಚಯವಿಲ್ಲ ಆದಾಗ್ಯೂ ಅವನ ಹಾಡಿನಲ್ಲಿ ಆ ಲಯ  ಮೂಡಿ ಬ೦ದದ್ದು  ಅಚ್ಚರಿ ಮತ್ತು ಹೆಮ್ಮೆ ಎನಿಸುತ್ತದೆ. ಜಾನಪದವನ್ನು ಆಳವಾಗಿ ಅಭ್ಯಾಸ ಮಾಡತೊಡಗಿದರೆ ಅದರೊಳಗೆ ಸೋಜಿಗದ ರೀತಿಯಲ್ಲಿ ಛ೦ದಸ್ಸು ಅಡಗಿರುವುದು ಕಾಣುತ್ತದೆ. ಒ೦ದು ಉದಾಹರಣೆ;  ತವರಿಗೆ ಬರುವ೦ತೆ ಅಣ್ಣ ತ೦ಗಿಗೆ ಕರೆ ಕಳುಹಿಸುತ್ತಾನೆ ಇವರಿಬ್ಬರ ನಡುವಿನ ಸ೦ವಾದ ಹೀಗೆ ಸಾಗುತ್ತದೆ.
ಕುದುರೇನ ತ೦ದೀನಿ ಜೀನ ಬಿಗಿಸಿದೀನಿ
ಬರಬೇಕು ತ೦ಗೀ ಮದುವೇಗೆ
ಬೇಸಗೆ ಬಿಸಿಲಣ್ಣ ಕೂಸಿನ ತಾಯಣ್ಣಾ
ಹೇಗೆ ಬರಲಣ್ಣಾ ಮದುವೇಗೆ
ಮೇಲಿನ ಹಾಡು ಏಳೆಗೆ ಉದಾಹರಣೆ, ಇದೇ ರೀತಿ ಇನ್ನೊ೦ದು ಉದಾಹರಣೆ ಪ್ರಾಸಕ್ಕೆ ಸ೦ಬ೦ಧಿಸಿದುದು. ಪ್ರತಿ ಸಾಲಿನ ಎರಡನೆ ಅಕ್ಷರ ಪ್ರಾಸವಾಗಿರುದನ್ನು ಗಮನಿಸಿ. ಈ ಎರಡೂ ಉದಾ ಹರಣೆಗಳು ಕನ್ನಡ ಛ೦ದೋ ವಿಕಾಸದಿ೦ದ ಆಯ್ದು ಕೊ೦ಡಿದ್ದೇನೆ.
ತೂಗು ತೊಟ್ಟಿಲಿಗೊ೦ದು ಪಾಗು ಪಟ್ಟಿಯ ಹಾಸಿ
ಮಾಗಾಯಿ ಮಗನ ಮಲಗಿಸಿ ಅವರವ್ವ
ಜೋಗುಳ ಹಾಡಿ ಹಿಗ್ಯಾಳ
            ರಘುರವರು ಬುಡುಬುಡಿಕೆ ಹೇಳುವವನ ಸಾಮಾನ್ಯ ಜ್ಞಾನ ಮತ್ತು ವಾಕ್ಚಾತುರ್ಯವನ್ನು ಬುಡು ಬುಡಿಕೆಯವನ ಮಾತಿನ೦ತೆಯೇ ಆಡಿ ತೊರಿಸಿಕೊಟ್ಟರು. ಹೊಟ್ಟೆ ಪಾಡಿಗೆ ಮಾಡುವ ಕೆಲಸವೆನಿಸಿದರೂ ಅದರಲ್ಲಿನ ಚಾತುರ್ಯ ಮೆಚ್ಚುವ೦ಥದ್ದು. ಜಾನಪದ ಲೋಕದ ದೈತ್ಯತೆಯನ್ನ ಸ್ವಲ್ಪ ಅನಾವರಣ ಮಾಡಿದ ರಘು ಸ್ತುತ್ಯಾರ್ಹರು.
            ಹರೀಶ್ ಆತ್ರೇಯ ಜೋಗುಳಗಳ ಬಗ್ಗೆ ಮಾತನಾಡಿದರು. ಜೋಗುಳ ಕೇವಲ ತಾಯಿ ಮಗುವನ್ನು ಮಗುವನ್ನು ಮಲಗಿಸಲು ಹಾಡಿದ ಕಟ್ಟಿದ ಸಾಲುಗಳು ಹೌದಾದರೂ ಅದು ಚಾರಿತ್ರಿಕ ಸತ್ಯವನ್ನೂ ಹೇಳುತ್ತಾ ಇತಿಹಾಸದ ಅಲಿಖಿತ ದಾಖಲೆಯಾಗಿ ಉಳಿದಿದೆ ಎ೦ದರು.
            ಆಶುಭಾಷಣದ ವಿಷಯ ’ನನ್ನ ಜೀವನದಲ್ಲಿ ನಡೆದ ಚಮತ್ಕಾರಿಕ ಘಟನೆ’ ಎ೦ಬುದಾಗಿತ್ತು. ರಘುರವರು ಮರದ ಕೊ೦ಬೆಯನ್ನು ದೆವ್ವವೆ೦ದು ಭ್ರಮಿಸಿದ್ದುದು ನ೦ತರ ಮು೦ದುವರೆದು ಅದು ಕೇವಲ ಮರದ ರೆ೦ಬೆಯೆ೦ದು ತಿಳಿದು ಭ್ರಮೆಯನ್ನು ಹೋಗಲಾಡಿಸಿಕೊ೦ಡದ್ದರ ಬಗ್ಗೆ ಹೇಳಿದರೆ ಪಾರ್ಥಸಾರಥಿಯವರು ೧೨೧ ಕೋಟಿ ಜನಸ೦ಖ್ಯೆ ಒ೦ದೇ ಕಡೆ ಎಲ್ಲವನ್ನೂ ಸಹಿಸಿಕೊ೦ಡು ಬಾಳುತ್ತಿರುವುದು ಚಮತ್ಕಾರಿಕ ವಿಷಯ ಎ೦ದರು. ಜಯ೦ತ್ ರವರು ಮಾತನ್ನು ಚಮತ್ಕಾರವೆ೦ದರೆ ಸುನಿಲ್ ರವರು ಗಾ೦ಧೀಜಿ ಮಾಡಿದ ಉಪವಾಸ ಸತ್ಯಾಗ್ರಹ ಮತ್ತು ಅದರಿ೦ದ ಒ೦ದಿಡೀ ಮತೀಯ ಗಲಭೆ ಹತ್ತಿಕ್ಕಿದುದು ಚಮತ್ಕಾರವೆ೦ದರು. ಪ್ರಸನ್ನ ಕುಲಕರ್ಣಿರವರಿಗೆ ಹುಟ್ಟು ಸಾವು ಚಮತ್ಕಾರಿಕವಾಗಿ ಕ೦ಡುಬ೦ದರೆ ಹರೀಶ್ ಆತ್ರೇಯರಿಗೆ ಎಲ್ಲರನ್ನೂ ಒ೦ದು ಮಾಡೀದ ಇ೦ಟರ್ನೆಟ್ ಚಮತ್ಕಾರಿಯಾಗಿ ಕ೦ಡು ಬ೦ತು. ಮಿಥಿಲಾ ಶರ್ಮಾರಿಗೆ ಅಮ್ಮನ ಪ್ರೀತಿ ಚಮತ್ಕಾರವಾಗಿ ಕ೦ಡು ಬ೦ದರೆ ಗೋಪೀನಾಥರಾಯರಿಗೆ ಸಮೂಹ ಮಾಧ್ಯಮ ಚಮತ್ಕಾರಿಕವಾಗಿ ಕ೦ಡು ಬ೦ತು.
            ನ೦ತರ ಸಮಯ ಪರಿಪಾಲಕರಾಗಿ ಕೆಲಸ ನಿರ್ವಹಿಸಿದ ಸುನಿಲ ಯಾರ್ಯಾರು ಎಷ್ಟು ಸಮಯ ತೆಗೆದುಕೊ೦ಡರು ಎ೦ಬುದನ್ನು ಸ್ಥೂಲವಾಗಿ ವಿವರಿಸಿದರು. ಅಲ್ಲಿಗೆ ಗೋಷ್ಟಿ ಸಮಾಪ್ತಿಯಾಯಿತು.
ಮು೦ದಿನ ಗೋಷ್ಠಿಯ ಮೇ ತಿ೦ಗಳ ಎರಡನೇ ಭಾನುವಾರ ಅ೦ದರೆ ತಾ|| ೮ರ೦ದು ಅದೇ ಜಾಗದಲ್ಲಿ ಸೃಷ್ಟಿ ಕಲಾಲಯದಲ್ಲಿ.
ಮು೦ದಿನ ಗೋಷ್ಠಿಯ ಭಾಷಣಕಾರರು
೧)  ಪಾರ್ಥಸಾರಥಿ
೨)  ರಾಮ ಮೋಹನ
೩)  ಜಯ೦ತ್ ರಾಮಾಚಾರ್
೪) ಸುನಿಲ್ ದಾಸಪ್ಪನವರ್
೫) ಪ್ರಸನ್ನ ಕುಲಕರ್ಣಿ
ಸಮಯ ಪರಿಪಾಲಕರು : ಬೆಳ್ಳಾಲ ಗೋಪೀನಾಥರಾಯರು
ಭಾಷಣದ ವಿಮರ್ಷೆಕರು : ರಘು ಎಸ್ ಪಿ
ವ್ಯಾಕರಣ ಶುದ್ದಿ :      ಪ್ರಭು ಮೂರ್ತಿ

ವಿಶೇಷ ಭಾಷಣ ರಘು ರವರಿ೦ದ, ವಿಷಯ ಜೀವನದಲ್ಲಿ ಹಾಸ್ಯ

Monday, 21 March 2011

ವಾಕ್ಪಥ : ಎರಡನೆಯ ಹೆಜ್ಜೆ

ವಾಕ್ಪಥ : ಎರಡನೆಯ ಹೆಜ್ಜೆ

ಎಪ್ರಿಲ್ ೧೦, ಭಾನುವಾರ, ಬೆಳಗ್ಗೆ ೧೦ - ೧೨
ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ
ಕಾರ್ಯಕ್ರಮದ ವಿವರ

ಆಗಮನ : ೧೦ ರಿಂದ ೧೦:೧೫

ದಯವಿಟ್ಟು ಸಮಯಕ್ಕೆ ಸರಿಯಾಗಿ ಆಗಮಿಸಿ. ಸಮಯಪಾಲನೆ ಗೋಷ್ಠಿಯ ಆದ್ಯ ಕರ್ತವ್ಯ.

=============== ಗೋಷ್ಠಿ : ನಿರ್ವಹಣೆ : ಬೆಳ್ಳಾಲ ಗೋಪಿನಾಥ ರಾವ್. ===============
ಪ್ರಾರಂಭ : ೧೦:೧೫

ಪ್ರಸ್ಥಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ದಾರಿಗಳ ವಿತರಣೆ, ಇತ್ಯಾದಿ: ಬೆಳ್ಳಾಲ ಗೋಪಿನಾಥ ರಾವ್  . : ೫ ನಿಮಿಷ

ಭಾಷಣಗಳು :

ಮೊದಲನೆಯ ಭಾಷಣಕಾರರ ಪರಿಚಯ : ಬೆಳ್ಳಾಲ ಗೋಪಿನಾಥ ರಾವ್  : ೨ ನಿಮಿಷ
ಮೊದಲನೆಯ ಭಾಷಣ :ಶ್ರೀಯುತ ರಘು ಎಸ್. ಪಿ : ೬ ನಿಮಿಷ
ಎರಡನೆಯ ಭಾಷಣಕಾರರ ಪರಿಚಯ : ಬೆಳ್ಳಾಲ ಗೋಪಿನಾಥ ರಾವ್  : ೨ ನಿಮಿಷ
ಎರಡನೆಯ ಭಾಷಣ: ಶ್ರೀಯುತ ಹರೀಶ್ ಅತ್ರೇಯ: ೬ ನಿಮಿಷ
ವಿಮರ್ಶೆಗಳು :
ಮೊದಲನೆಯ ಭಾಷಣದ ವಿಮರ್ಶೆ : ಹೊಳೆನರಸೀಪುರ ಮಂಜುನಾಥ : ೨ ನಿಮಿಷ
ಎರಡನೆಯ ಭಾಷಣದ ವಿಮರ್ಶೆ : ಹೊಳೆನರಸೀಪುರ ಮಂಜುನಾಥ  : ೨ ನಿಮಿಷ
ಆಶುಭಾಷಣಗಳು :
೧೫ ನಿಮಿಷ : ಪ್ರತಿಯೊಬ್ಬ ಆಶುಭಾಷಣಗಾರರಿಗೂ ೨ ನಿಮಿಷ (ನಿರ್ವಹಣೆ : ಪ್ರಭು ಮೂರ್ತಿ)
ಬೆನ್ನುಡಿ, ಮುಕ್ತಾಯ : ಬೆಳ್ಳಾಲ ಗೋಪಿನಾಥ ರಾವ್. : ೨ ನಿಮಿಷ

ಮುಕ್ತಾಯ : ೧೧:೦೦ರ ಒಳಗೆ
=============== ಗೋಷ್ಠಿಯ ನಂತರ ===============
ಆಸಕ್ತರು ಇದರಲ್ಲೂ ಪಾಲ್ಗೊಳ್ಳಬಹುದು
ಪ್ರಾರಂಭ : ೧೧:೧೫
ಮುಂದಿನ ಗೋಷ್ಠಿಯ ಕುರಿತು ಸಮಾಲೋಚನೆ : ೧೫ ನಿಮಿಷ
ಸಂಘದ ಮುಂದಿನ ಹೆಜ್ಜೆಗಳ ಕುರಿತು ಚಿಂತನೆ : ೩೦ ನಿಮಿಷ

Wednesday, 9 March 2011

ವಾಕ್ಪಥದಲ್ಲಿ ಮೊದಲ ಗುರುತು ಹೆಜ್ಜೆ ೧ ದಿನಾಂಕ ೬.೦೩.೨೦೧೧ ರಂದು ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿ

ವಾಕ್ಪಥದಲ್ಲಿ ಮೊದಲ ಗುರುತು

ಹೆಜ್ಜೆ ೧  ದಿನಾಂಕ ೬.೦೩.೨೦೧೧ ರಂದು
ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿ

ಎಣಿಸಿದ ದಿನ ಬಂದೇ ಬಿಟ್ಟಿತು. ಕಾತರದ ಕ್ಷಣಗಳವು.ಎಣಿಸಿದಂತೆಯೆ ಪ್ರಭುಗಳು ಸರಿಯಾಗಿ ೯ಕ್ಕೇ ಮನೆಯಲ್ಲಿ ಹಾಜರ್.
ಕಳೆದವಾರವಿಡೀ ನನ್ನ ದಫ್ತರಿನ ಕೆಲಸದಲ್ಲೇ ಮಗ್ನನಾಗಿದ್ದ ನನಗೆ ಈ ಕಡೆ ಮನಹರಿಸಲೂ ಸಮಯವಿರಲಿಲ್ಲ. ನೆನ್ನೆಯಂತೂ ನನ್ನ ದಪ್ತರಿನ ಹೊಸ ಜಾಗದಲ್ಲಿ ನನ್ನ ಈಗಿನ ಪ್ರಾಜೆಕ್ಟ್ ಬಗ್ಗೆ  ದರ್ಶಿನಿಯಿತ್ತು. ನನಗೇ ಗೊತ್ತಿರದ ಹಾಗೆ ಅಲ್ಲಿಂದ ಸಂಜೆಯ ಕಾರ್ಯಕ್ರಮ ಮುಗಿಯುವಾಗಲೇ ಸಂಜೆ ಏಳೂವರೆಯಾಗಿತ್ತು.ನಂತರ ಮನೆಗೆ ಬಂದು ಹಾ ಹೂ ಅನ್ನುವುದರೊಳಗಾಗಲೇ ರಾತ್ರೆ ಮತ್ತು ನಿದ್ರೆ ನನ್ನನ್ನು ಆವರಿಸಿಯೇ ಬಿಟ್ಟಿದ್ದವು.

ಎಂದಿನಂತೆ ಕೆಂಪಿಯನ್ನು( ನನ್ನ ದ್ವಿಚಕ್ರಿ) ಹೊರತೆಗೆದು ನಾನೂ ಪ್ರಭುಗಳೂ ಹೊರ ಹೊರಟೆವು, ಈ ಸಾರಿ ಏನೂ ಅನಾಹುತವಾಗದೇ ನಾವು ನೇರವಾಗಿ ಪುಳಿಯೊಗೆರೆ ಬಿಂದು ತಲುಪಿದೆವು, ಅಲ್ಲಿ ಆಗಲೇ ಮಂಜು ಮತ್ತು ರಘು ಆತ್ರೇಯರು ಮೊದಲೇ ಬಂದು ನಮ್ಮ ದಾರಿ ಕಾಯುತ್ತಿದ್ದರು.
ಸೃಷ್ಟಿ ವೆಂಚರ್ ತಲುಪಿದೆವು.  ಮುಂದಿನ ಹೆಜ್ಜೆಯ ಕಾರ್ಯರೂಪು ರೇಷೆಯನ್ನು  ರೂಪಿಸಿಕೊಳ್ಳುತ್ತಿರುವಾಗಲೇ ಪ್ರಿಯರಾದ ಪಾರ್ಥ ಸಾರಥಿಯವರೂ  ತಮ್ಮ ಅನುಜ ರಾಮ ಮೋಹನರು  ಮತ್ತು ಅವರ ಮಗಳು ಚಿ ಮಾನಸರೊಡನೆ  ಆಗಮಿಸಿದರು.ನೋಡ ನೋಡುತ್ತಿರುವಂತೆಯೇ ಸ್ನೇಹಿ ಮಧ್ವೇಶರೂ ನಮ್ಮ ನಡುವೆಯೇ ಆಸೀನರಾದರು.
ಸುನಿಲ್ ರ ಸ್ಥಾನ ಆತ್ರೇಯರು ತುಂಬಿದ್ದರು.
ಸುಂದರ ಪದ ಬಳಕೆಯ ಮೂಲಕ ರಘುರವರು ತಮ್ಮದೇ ಆದ ಎಂದಿನ ಹಾಸ್ಯ ಹಾಗೂ ಗ್ರಾಮ್ಯ ಶೈಲಿಯಲ್ಲಿ ಮಂಜುರವರ ಮತ್ತು ನನ್ನ  ಪರಿಚಯಮಾಡಿಸಿದ್ದರು. ಅವರ ಪರಿಚಯ ಮಾಡಿಸುವ ರೀತಿಗೇ ಯಾರೂ ಮಾರು ಹೋಗಲೇ ಬೇಕು.
ಮಂಜುರವರು ತಮ್ಮ ವಿಶಿಷ್ಟ ಹಾಗೂ ಗಂಭೀರ ಮಾಧುರ್ಯದ ಶೈಲಿಯಲ್ಲಿ ತಮ್ಮ ಕಾಲೇಜು ಜೀವನದ ಹೋಗುಗಳನ್ನು ವಿವರಿಸಿದರು. ಅದೂ ನಾವಿಲ್ಲಿಯವರೆಗೆ ಕೇಳಿ ಅರಿಯದ ವಿಷಯವನ್ನು ತಮ್ಮದೇ ಆದ ಭಾಷಣ ಮಂಡಿಸಿದರು. ಅವರ ಭಾಷಣ ಕೇಳಿಯೇ ನಾನು ನನ್ನ ಭಾಷಣದಲ್ಲಿ ಬರೇ ಸೈನ್ಯದ ವಿಷಯವನ್ನೇ ಹೇಳೋಣ ಎಂದು ಕೊಂಡು ಅಂತೆಯೇ ಮಾಡಿದೆ ಕೂಡಾ.

ಇಲ್ಲಿ ಪ್ರಭು ಮೂರ್ತಿಯವರ ಆಸಕ್ತಿ ಆಧ್ಯತೆ ಮತ್ತು ವಿಷಯದೊಳಗಿನ ಅವರ ಅಪಾರ ಪಾಂಡಿತ್ಯದ ಬಗ್ಗೆ ಎರಡು ಮಾತಿಲ್ಲ.
ಈ ವಾಕ್ಪಥ ಅವರ ಕನಸಿನ ಕೂಸು. ಇವತ್ತಿನ ಈ ಮೊದಲ ಹೆಜ್ಜೆಯೇ ಅವರ ಇವತ್ತಿನ ನನಗೆ ದೊರಕಿದ ಪಾಠ ನೂರಕ್ಕೆ ನೂರು ಯಶಸ್ವಿಯಾಯಿತೆಂದೇ ಎದೆ ತಟ್ಟಿ ಹೇಳುವೆ.

ನಾನು ಅವರ ಜತೆ ಇದರಲ್ಲಿ ಸೇರಲು ನನ್ನದೇ ಆದ ಆಸಕ್ತಿಯಿತ್ತು.

ನಾನಾಗ ಐದನೇ ತರಗತಿಯಲ್ಲಿದ್ದೆ. ಅತೀ ಹಳ್ಳಿಯಾದ ಬೆಳ್ಳಾಲದಿಂದ ಸಣ್ಣ ಪೇಟೆಯೆನಿಸಿದ ಸಿದ್ದಾಪುರಕ್ಕೆ ಪ್ರಾಥಮಿಕ ಶಾಲೆಗೆ ಬಂದು ಸೇರಿದ್ದೆ. ಭಾಷಣದ ಗಂಧ ಗಾಳಿಯೂ ಇಲ್ಲದ ನನ್ನನ್ನು ಪ್ರಥಮ ಬಾರಿಯೇ (  ಅಧ್ಯಾಪಕರ ವಂಶದ ನಾನು ಆಗ ತರಗತಿಯಲ್ಲಿ ಸಹಜವಾಗಿಯೇ ವಾಚಾಳಿಯಾಗಿದ್ದುದೂ ಕಾರಣವೆನಿಸಿ) ಭಾಷಣಕ್ಕೆ ಕರೆದರು . ಬಾಲ್ಯ ಸಹಜ ಬುದ್ದಿಯ ನಾನು ಸ್ಟೇಜಿಗೆ ಹತ್ತಿದ್ದೇನೋ ನಿಜ ಇದಿರಿನ ಅಗಾಧ ಮಕ್ಕಳ
ಸೈನ್ಯ, ಮಾಸ್ತರುಗಳ ಹಿಂಡು ನನ್ನನ್ನು ಅಧೀರನಾಗಿಸಿ ಆ ಸಭೆಯಲ್ಲೇ ಬೆಬ್ಬೆಬ್ಬೆ ಅನ್ನುತ್ತಾ ಅತ್ತೇ ಬಿಟ್ಟಿದ್ದೆ, ಆಗಿನ ನಮ್ಮ ಮುಖ್ಯ ಆಧ್ಯಾಪಕ ನಾರಾಯಣ ಶೆಟ್ಟಿಯವರು, ನನ್ನನ್ನು ಸಂತೈಸಿದರಲ್ಲದೇ ಮುಂದಿನ ಪ್ರತಿ ಡಿಬೇಟಿಗೂ ನನ್ನ ಹೆಸರನ್ನು ಖಾಯಮ್ ಆಗಿ ಸೇರಿಸಿದ್ದರು, ಪರಿಣಾಮ ಮುಂದಿನ ವರ್ಷದಿಂದ ಪ್ರತಿ ಭಾಷಣ ಸ್ಪರ್ದೆಯಲ್ಲೂ ನಾನೇ ಮೊದಲಿಗನಾಗಿದ್ದೆ, ಈ ವಿಷಯ ಇಂದೂ ನನ್ನ ಮನಸ್ಸಿನಲ್ಲೇ ಹಚ್ಚ ಹಸಿರಾಗಿ ಉಳಿದಿದೆ.
ಹಳ್ಳಿಯಿಂದ ಬಂದ ಎಲ್ಲಾ ಮಕ್ಕಳ ಪಾಡೂ ಇದೇ. ಅದನ್ನೇ ಸರಿಯಾಗಿ ಅಭ್ಯಸಿಸಿ ಮಕ್ಕಳಿಗೆ ತಿಳಿಹೇಳಿ ಅಂತವರನ್ನು ಶಾಸ್ತ್ರೀಯವಾಗಿ ತಯಾರು ಮಾಡುವ ಬಯಕೆ ನನ್ನದು.

ಪ್ರಭುಗಳು ನಮ್ಮಿಬ್ಬರ ಭಾಷಣವನ್ನೂ ಅಳೆದು ತೂಗಿ ಶಾಸ್ತ್ರೀಯವಾಗಿ ಎಲ್ಲೆಲ್ಲಿ ತಪ್ಪು ಮಾಡಿದ್ದೆವು, ಎಲ್ಲೆಲ್ಲಿ ಚೆನ್ನಾಗಿ ಮಾಡಿದ್ದೆವು, ಯಾವಯಾವ ಭಾಗವನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎನ್ನುವುದನ್ನೂ ಅತ್ಯಂತ ಸಮರ್ಪಕವಾಗಿ ವಿವರಿಸಿ ತಿಳಿಹೇಳಿದರು.
ಮುಂದಿನ ಆಶು ಭಾಷಣವಂತೂ ಅತ್ಯಂತ ಆಸಕ್ತಿಕರವಾಗಿತ್ತು, ನನಗೆ ಮಾತನಾಡಲು ಬರುವುದಿಲ್ಲಎನ್ನುತ್ತಲೇ ಮಧ್ವೇಶ ತನ್ನ ಶ್ರೀಮತಿಯವರ ಗುಣಗಾನ ಮಾಡಿದ್ದರೆ ಪಾರ್ಥ ಸಾರಥಿಯವರು,  ರಾಮ ಮೋಹನರು   ನಿರರ್ಗಳವಾಗಿ ಭಾಷಣ ಮಾಡಿದರು, ಆತ್ರೇಯರೂ ತಮ್ಮ ಅಕ್ಕನ ಪ್ರೀತಿಯ ಬಗ್ಗೆ ಮನದುಂಬಿ ನಮ್ಮ ಮನಸೂರೆಗೊಂಡರೆ, ಮಂಜುರವರು ರಾಗಿಮುದ್ದೆಯ ಬಗೆಗೆ ತಮ್ಮ ಪ್ರೀತಿಯನ್ನೂ ತಮ್ಮ ಹೆಂಡತಿಯ ಕೈ ಗುಣವನ್ನೂ ಹಾಸ್ಯ ಶೈಲಿಯಲ್ಲಿಯೇ ವಿವರಿಸಿದರು, ರಘುರವರು ತಮ್ಮ ಬಾಲ್ಯದ ಹಬ್ಬದ ಬಗೆಗೆ ಹೇಳುತ್ತ ತಮ್ಮ ಅತಿ ವಿಶಿಷ್ಟ ಶೈಲಿಯಲ್ಲಿ ಮುಳುಗಿ ಎದ್ದರು.
ನಂತರ ಸಮಯಕಾರರಾದ ಹರೀಶರು ಮಂಜುರವರ ಕೊಟ್ಟ ಎಂಟು ನಿಮಿಷದಲ್ಲಿ ಎರಡು ಸೆಕೆಂಡ್ ಉಳಿಸಿದ್ದರೆ ನಾನು ಆ ಎರಡು ಸೆಕೆಂಡ್ ಜಾಸ್ತಿ ಉಪಯೋಗಿಸಿದ್ದೆ ಎಂದು ಹೇಳಿ ನಂತರದ ಎಲ್ಲರೂ ತಮ್ಮ ತಮ್ಮ ಸಮಯದೊಳಗೇ ಮುಗಿಸಿದ್ದರೂ ರಘುರವರು ಒಂದೂವರೆ ನಿಮಿಶ ಜಾಸ್ತಿ ತೆಗೆದುಕೊಂಡರು ಎಂದು ಹೇಳುತ್ತ ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸಿದರು.
ಅಂತೂ ನಮ್ಮ ಹೆಗ್ಗುರುತಾದ ಮೊದಲ ಹೆಜ್ಜೆ ಅತ್ಯಂತ ಸಮರ್ಪಕವಾಗಿ ಅತ್ಯಂತ ಜವಾಬ್ದಾರಿಯುತವಾಗಿ ನೆರವೇರಿತು.
ಎರಡನೇ ಸಾರಿಯ ನಮ್ಮ ಕೂಟದಲ್ಲೇ ಮೊದಲ ದಿನದ ದುಪ್ಪಟ್ಟು ಜನರು ಕೂಡಿದ್ದೂ ಸಹ ಒಂದು ವಿಶೇಷ.



ಎಲ್ಲರಿಗೂ ಕಣ್ಮಣಿಯಾದ ಸಂಪದವೇ ನಮ್ಮೆಲ್ಲರ ಸ್ನೇಹೀ ಕೂಟಕ್ಕೆ ನಾಂದಿ ಹಾಡಿದ್ದನ್ನೂ ಕೂಡಾ ಎಲ್ಲರೂ ಸ್ಮರಿಸಿದರು.ಸಂಪದವಿಲ್ಲದಿದ್ದರೆ ಇದೆಲ್ಲಾ ಸಾಧ್ಯವೇ ಇರುತ್ತಿರಲಿಲ್ಲ. ನಿಜವಾಗಿಯೂ ನಾವೆಲ್ಲರೂ ಸಂಪದಕ್ಕೆ ಚಿರ ಋಣಿ ಯಾಗಿದ್ದೇವೆ.