ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday, 21 August 2011

ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ

ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್ನು ಪೂರೈಸಿ ಆರನೇ ಹೆಜ್ಜೆಗೆ ಕಾಲಿಟ್ಟಿತ್ತು. ಈ ಬಾರಿ ಗೋಷ್ಟಿಯ ನಿರ್ವಹಣೆ ಹೊತ್ತಿದ್ದವರು ವಾಕ್ಪಥದ ಸೃಷ್ಟಿಕರ್ತ ಶ್ರೀಯುತ ಪ್ರಭು ಮೂರ್ತಿಯವರು. ವಾಕ್ಪಥದ ಮುಖ್ಯ ನಿಯಮ ಸಮಯ ಪರಿಪಾಲನೆ. ಅದರಂತೆ ಸರಿಯಾಗಿ ೩.೧೫ ಕ್ಕೆ ಗೋಷ್ಠಿ ಪ್ರಾರಂಭವಾಯಿತು. ಈ ಬಾರಿಯ ಗೋಷ್ಟಿಯ ಭಾಷಣಕಾರರು ಶ್ರೀಯುತ ರಘು ಎಸ್.ಪಿ ಹಾಗೂ ಶ್ರೀಯುತ ಹೊಳೆನರಸಿಪುರ ಮಂಜುನಾಥ ಅಲಿಯಾಸ್ ದುಬೈ ಮಂಜಣ್ಣ ಅವರು. ವಿಶೇಷ ಭಾಷಣವನ್ನು ಶ್ರೀಯುತ ಬೆಳ್ಲಾಲ ಗೋಪಿನಾಥರಾಯರು ಮಂಡಿಸಲಿದ್ದರು. ಭಾಷಣಕಾರ ಪರಿಚಯವನ್ನು ಮಾಡಿಕೊಟ್ಟ ಪ್ರಭು ಮೂರ್ತಿಯವರು ರಘುರವರನ್ನು ತಮ್ಮ ಭಾಷಣ ಮಂಡಿಸಲು ವೇದಿಕೆಗೆ ಆಹ್ವಾನಿಸಿದರು.
ರಘುರವರು ಆಯ್ದುಕೊಂಡಿದ್ದ ಭಾಷಣದ ವಿಷಯ ರೈತ ಮತ್ತು ಕೈಗಾರಿಕೆ ಹಾಗೂ ರೈತ ಮತ್ತು ಕಾನೂನು 
ಇತ್ತೀಚಿನ ದಿನಗಳಲ್ಲಿ ಆಧುನೀಕರಣ, ಜಾಗತೀಕರಣ, ನಗರೀಕರಣದ ಗುಂಗಿನಲ್ಲಿ ಬಿದ್ದು ಜನರು ರೈತರನ್ನು ರೈತಾಪಿ ವರ್ಗದವರನ್ನು ಮರೆಯುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಕೈಗಾರಿಕೋದ್ಯಮದಿಂದ ರೈತನ ಭೂಮಿಗಳನ್ನು ಕಬಳಿಸಿ ಕೈಗಾರಿಕೆಗಳನ್ನು ನಿರ್ಮಿಸಿ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತಿದ್ದಾರೆ. ಅನ್ನ ನೀಡುವ ರೈತನನ್ನು ಕಡೆಗಣಿಸುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಒಂದು ಕೈಗಾರಿಕೆ ಸ್ಥಾಪನೆಯಿಂದ ೧೦೦ ಜನ ಉದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡಬಹುದು. ಆದರೆ ಎಷ್ಟು ವರ್ಷ ಉದ್ಯೋಗ ನೀಡುತ್ತಾರೆ. ಅದೇ ಒಂದು ಎಕರೆ ಜಮೀನಿನಲ್ಲಿ ಒಬ್ಬ ರೈತ ತನ್ನ ಜೀವಿತಾವಧಿಯವರೆಗೂ ಅನ್ನ ನೀಡಬಲ್ಲ. ಅಂಥಹ ರೈತನ ಜಮೀನನ್ನು ನಮ್ಮ ಬಂಡವಾಳಶಾಹಿಗಳು ಕೈಗಾರಿಕೆಯ ಹೆಸರಿನಲ್ಲಿ ಕಬಳಿಸಿ ಆ ಕೈಗಾರಿಕೆಯಿಂದ ಬಿಡುವ ತ್ಯಾಜ್ಯದಿಂದ ನೀರನ್ನು ಕಲುಶಿತಗೊಳಿಸಿ ಭೂಮಿಯ ಫಲವತ್ತತೆಯನ್ನು ಕುಂಟಿಥಗೊಳಿಸಿ ಆ ಪ್ರದೇಶದಲ್ಲಿ ಒಂದು ಕಾಂಗ್ರೆಸ್ ಗಿಡ ಸಹ ಬೆಳೆಯದಂತೆ ಮಾಡುತ್ತಿದ್ದಾರೆ. ಇದು ಹೀಗೆ ಸಾಗಿದರೆ ಈ ದೇಶದ ಬೆನ್ನೆಲುಬಾಗಿರುವ ರೈತನ ಪರಿಸ್ಥಿತಿ ಏನು. ಇದು ಮೊದಲನೆಯ ಹಂತ
ಎರಡನೆಯ ಹಂತದಲ್ಲಿ ರೈತ ಮತ್ತು ಕಾನೂನಿನ ವಿಷಯಕ್ಕೆ ಬಂದರೆ ನಮ್ಮ ಮಣ್ಣಿನ ಮಕ್ಕಳು ಕಲ್ಲಿನ ಮಕ್ಕಳೆಂಬ ರಾಜಕೀಯ ವ್ಯಕ್ತಿಗಳು ನಾವು ನಮ್ಮ ಅಧಿಕಾರಾವಧಿಯಲ್ಲಿ ರೈತನಿಗೆ ಶೇಕಡಾ ಎರಡು ಪ್ರತಿಶತ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಅಲ್ಲಿ ನಡೆಯುತ್ತಿರುವುದೇನು ಯಾವುದೇ ಗ್ರಾಮೀಣ ಬ್ಯಾಂಕಿಗೆ ನೀವು ಹೋದರೆ ಅಲ್ಲಿ ಎರಡು ಪ್ರತಿಶತ ದರದಲ್ಲಿ ಸಾಲ ಪಡೆದ ರೈತ ಅದೇ ಬ್ಯಾಂಕಿನಲ್ಲಿ ೮ ಪ್ರತಿಶತ ಬಡ್ಡಿ ದರಕ್ಕೆ ಥೆವಣಿ ಹೂಡುತ್ತಿದ್ದಾನೆ. ಸ್ವಾಮಿ ನಮ್ಮ ರೈತನಿಗೆ ನಿಮ್ಮ ಸಾಲ ಬೇಡ ಸ್ವಾಮಿ. ನಮ್ಮ ರೈತ ಸ್ವಾವಲಂಬಿ ಆತನಿಗೆ ದುಡ್ಡಿನ ಅವಶ್ಯಕತೆ ಬಂದರೆ ತಾನು ಬೆಳೆದ ಬೆಳೆ ಮಾರಿ ಹಣ ಸಂಪಾದಿಸುತ್ತಿದ್ದಾನೆ. ಆತನಿಗೆ ಅವಶ್ಯಕತೆ ಇರುವುದು ಉತ್ತಮ ಗೊಬ್ಬರ, ಸಬ್ಸಿಡಿ ದರದಲ್ಲಿ ಬೀಜಗಳು ಹಾಗೂ ತಾನು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಇಷ್ಟು ಕೊಡಿ ಸಾಕು. ಆದರೆ ನೀವು ಮಾಡುತ್ತಿರುವುದು ಏನು ಆತನಿಗೆ ಸಾಲ ನೀಡಿ ಆತನನ್ನು ಸೋಮಾರಿಯಾಗಿ ಮಾಡಿ ದಾಸ್ಯಕ್ಕೆ ಗುರಿ ಮಾಡುತ್ತಿದ್ದೀರ.
ಇವಿಷ್ಟು ರಘು ಅವರ ಭಾಷಣದ ಸಾರಾಂಶ. ರಘು ಅವರು ತಮಗಿ ನಿಗದಿ ಪಡಿಸಿದ ಹತ್ತು ನಿಮಿಷಕ್ಕಿಂತ ಸ್ವಲ್ಪವೆ ಜಾಸ್ತಿ ಸಮಯ ತೆಗೆದುಕೊಂಡು ತಮ್ಮ ಭಾಷಣವನ್ನು ಪ್ರಭಾವಶಾಲಿಯಾಗಿ ಮಂಡಿಸಿದರು. ಇನ್ನು ಇವರ ಭಾಷಣ ವಿಮರ್ಶಕರಾಗಿ ಶ್ರೀಯುತ ಹರೀಶ್ ಆತ್ರೇಯ ಅವರು ತಮ್ಮ ಅನಿಸಿಕೆಯನ್ನು ತಿಳಿಸಿದರು. ರಘು ಅವರ ಭಾಷಣದಲ್ಲಿ ಒಂದೇ ಒಂದು ಋಣಾತ್ಮಕ ಅಂಶವೆಂದರೆ ಅಲ್ಲಲ್ಲಿ ಆಂಗ್ಲ ಪದಗಳನ್ನು ಬಳಸಿದ್ದು ಇಷ್ಟು ಬಿಟ್ಟರೆ ಅವರ ಭಾಷಣ ಸೊಗಸಾಗಿತ್ತು ಎಂದು ಹೇಳಿ ತಮ್ಮ ವಿಮರ್ಶೆಯನ್ನು ತಿಳಿಸಿದರು.
ಎರಡನೇ ಭಾಷಣಕಾರರಾಗಿ ಶ್ರೀಯುತ ಮಂಜುನಾಥ ಅವರು ಆಯ್ದುಕೊಂಡ ವಿಷಯ ಇಂದಿನ ಭಾರತದಲ್ಲಿ ಭ್ರಷ್ಟಾಚಾರ ಹಾಗೂ ನೈತಿಕತೆ
ಭ್ರಷ್ಟಾಚಾರ ಇಂದು ನೆನ್ನೆಯದಲ್ಲ ಪುರಾಣ ಕಾಲದಿಂದಲೂ ನಡೆದುಕೊಂಡೇ ಬಂದಿದೆ ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಭ್ರಷ್ಟಾಚಾರ ಕಾಣಬಹುದು. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ರಥದ ಚಕ್ರ ಮಣ್ಣಿನಲ್ಲಿ ಹೂತು ಹೋಗಿದ್ದಾಗ ಕರ್ಣನು ರಥವನ್ನು ಮೇಲೆತ್ತುವ ಸಮಯದಲ್ಲಿ ಅರ್ಜುನನಿಗೆ ಬಾಣ ಹೂಡಲು ಸೂಚಿಸಿದ ಕಪಟನಾಟಕ ಸೂತ್ರಧಾರಿ ಕೃಷ್ಣ ಮಾಡಿದ್ದು ಅದನ್ನೇ ಅಲ್ಲವೇ. ಹಾಗೆ ಭ್ರಷ್ಟಾಚಾರ ಅಂದಿನಿಂದಲೂ ಇದೆ. ನಮಗೆಲ್ಲ ತಿಳಿದಿರುವಂತೆ ಮನೆಯೇ ಮೊದಲ ಪಾಠಶಾಲೆ ಹಾಗೆ ಭ್ರಷ್ಟಾಚಾರಕ್ಕೂ ಮನೆಯೇ ಮೊದಲ ಪಾಠಶಾಲೆ ಹೇಗೆಂದರೆ ಮನೆಯಲ್ಲಿ ಮಕ್ಕಳಿಗೆ ಏನಾದರೂ ಕೆಲಸ ಹೇಳುವ ಸಮಯ ಬಂದರೆ ಉದಾಹರಣೆಗೆ ಅಂಗಡಿಯಿಂದ ಸಕ್ಕರೆಯೋ ಅಥವಾ ಇನ್ನೇನಾದರೂ ವಸ್ತುಗಳನ್ನು ತೆಗೆದುಕೊಂಡು ಬರಲು ಮಕ್ಕಳಿಗೆ ಸಿಹಿ ತಿಂಡಿಯ ಆಸೆ ತೋರಿಸುವುದು ಅಥವಾ ಚಿಲ್ಲರೆ ಹಣದ ಆಸೆ ತೋರಿಸುವುದು. ಇದರಿಂದ ಚಿಕ್ಕಂದಿನಿಂದಲೇ ಮಕ್ಕಳ ಮೇಲೆ ಬೀರುವ ಪ್ರಭಾವ ಎಂತಹುದು ಎಂದು ಎಂದಾದರೂ ಯೋಚಿಸಿದ್ದೇವ? ಬಹುಷಃ ತಾವೆಲ್ಲರೂ ಕಡಿದಾಳ್ ಮಂಜಪ್ಪ ನವರ ಹೆಸರನ್ನು ಕೇಳಿರುತ್ತೀರ. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಅವರು ವಿಧಾನಸಭೆಗೆ ಸೈಕಲ್ ನಲ್ಲಿ ಬರುತ್ತಿದ್ದವರು. ಎಷ್ಟು ಜನ ಅಂಥಹ ನಿಷ್ಟಾವಂತರು ಇದ್ದಾರೆ. ಇದ್ದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ಮತದಾನದ ಬಗ್ಗೆ ಜನಕ್ಕೆ ಇರುವ ಅಸಡ್ಡೆಯೇ ಮುಖ್ಯ ಕಾರಣ. ಪ್ರತಿಸಲ ಚುನಾವಣಾ ನಡೆದಾಗ ೩೦, ೪೦ ೫೦ ಪ್ರತಿಶತ ಮಾತ್ರ ಮತದಾನವಾಗುತ್ತಿದೆ. ಇನ್ನುಳಿದ ಮತಗಳ ಭ್ರಷ್ಟರ ಪಾಲಾಗುತ್ತಿದೆ. ವಿದ್ಯಾವಂತರು ಮತಕಟ್ಟೆಯಿಂದ ದೂರ ಉಳಿದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಹೆಚ್ಚು ಮತದಾನವಾಗಬೇಕು ಇದ್ದದರಲ್ಲಿ ಅತೀ ಕಡಿಮೆ ಭ್ರಷ್ಟರನ್ನು ಆರಿಸೋಣ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಣ್ಣಾ ಹಜಾರೆ ಎಬ್ಬಿಸಿರುವ ಬಿರುಗಾಳಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎದ್ದಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. ಪ್ರತಿಯೊಬ್ಬರೂ ತಾವು ಅಣ್ಣನ ಬೆಂಬಲಿಗರು ಎಂದಷ್ಟೇ ಹೇಳಿಕೊಂಡರೆ ಸಾಲದು. ಮೊದಲು ತಮ್ಮನ್ನು ತಾವು ಪರಿಶೀಲಿಸಿಕೊಳ್ಳಬೇಕು. ತಮ್ಮಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಶುರುವಾಗಬೇಕು.
ಇವಿಷ್ಟು ಹೊಳೆನರಸಿಪುರ ಮಂಜುನಾಥ ಅವರ ಭಾಷಣದ ಸಾರಾಂಶ. ಇವರ ಭಾಷಣದ ವಿಮರ್ಶೆಯನ್ನು ಜಯಂತ್ ರಾಮಾಚಾರ್ ಅವರು ನಿರ್ವಹಿಸಿದರು. ಮಂಜಣ್ಣ ಅವರ ಕಂಚಿನ ಕಂಠ, ಭಾಷೆಯ ಮೇಲೆ ಅವರಿಗಿರುವ ಹಿಡಿತ, ನಿರರ್ಗಳವಾಗಿ ಸರಾಗವಾಗಿ ಪ್ರಭಾವಿಯಾಗಿ ಭಾಷಣ ಮಂಡಿಸುವ ಶೈಲಿ ಅವರ ಧನಾತ್ಮಕ ಅಂಶಗಳಾದರೆ ಅಲ್ಲಲ್ಲಿ ಆಂಗ್ಲ ಪದಗಳನ್ನು ಬಳಸಿದ್ದು ಅವರ ಋಣಾತ್ಮಕ ಅಂಶವೆಂದು ತಿಳಿಸಿ ತಮ್ಮ ವಿಮರ್ಶೆಯನ್ನು ಮಂಡಿಸಿದರು.
ಈ ಎರಡು ಭಾಷಣಗಳ ನಂತರ ಆಶುಭಾಷಣವನ್ನು ನಿರ್ವಹಿಸಿದವರು ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು. ಅವರು ಕೊಟ್ಟ ವಿಷಯ ಇಂದಿನ ಚಲನಚಿತ್ರ ಮಾಧ್ಯಮ ಜನರಿಗೆ ನೀಡುತ್ತಿರುವ ಸಂದೇಶ ಏನು?
ಆಶುಭಾಷಣವನ್ನು ಮಂಡಿಸಿದವರು ಶ್ರೀಯುತ ಮಧ್ವೇಶ್, ಹಾಗೂ ಹೊಸ ಪಥಿಕರಾದ ಶ್ರೀಯುತ ಶ್ರೀನಾಥ್, ಶ್ರೀಯುತ ರುದ್ರೇಶ್ ಹಾಗೂ ಶ್ರೀಯುತ ಹರೀಶ್ ಆತ್ರೇಯ ಅವರು.
ಹಿಂದಿನ ಚಿತ್ರಗಳು ಸಂಸಾರ ಸಮೇತವಾಗಿ ನೋಡುವಂಥಹ ಚಿತ್ರಗಳಾಗಿದ್ದು ಉತ್ತಮ ಸಂದೇಶ, ಉತ್ತಮ ಸಾಹಿತ್ಯ, ಉತ್ತಮ ನಿರ್ದೇಶನವನ್ನು ಹೊಂದಿದ್ದು ಬಹಳ ಕಾಲದವರೆಗೂ ಮೆಲುಕು ಹಾಕುವಂತಾದಾಗಿದ್ದು ಇಂದಿನ ಚಿತ್ರಗಳು ಕೊಡುತ್ತಿರುವ ಸಂದೇಶ ಚಿಕ್ಕ ಮಕ್ಕಳಿಂದ ಹಿಡಿದೂ ದೊಡ್ದವರವರೆಗೂ ಕೆಟ್ಟ ಸಂದೇಶವನ್ನು ಕೊಡುತ್ತಿರುವುದು. ಇನ್ನು ಇಂದಿನ ಸಾಹಿತ್ಯ ಅಂತೂ ಬೇಡವೇ ಬೇಡ ಒಂದು ಕಾಲದಲ್ಲಿ "ಅಮ್ಮ ಸೀತಮ್ಮ ತಂದೆ ಶ್ರೀರಾಮ" ಎಂಬ ಸಾಹಿತ್ಯ ಇದ್ದರೆ ಇಂದು " ಅಪ್ಪ ಲೂಸಾ, ಅಮ್ಮ ಲೂಸಾ"ಎಂಬಂಥಹ ಸಾಹಿತ್ಯ ಬರುತ್ತಿರುವುದು ನಿಜವಾಗಿಯೂ ದುರದೃಷ್ಟಕರ.
ಇನ್ನು ಸಮಯಪರಿಪಾಲಕರಾಗಿ ಶ್ರೀಯುತ ರಾಮ್ ಮೋಹನ್ ಅವರು ಯಾರ್ಯಾರು ಎಷ್ಟೆಷ್ಟು ಸಮಯವನ್ನು ತೆಗೆದುಕೊಂಡರು ಎಂದು ವಿವರಿಸಿದರೆ ಶ್ರೀಯುತ ಪಾರ್ಥಸಾರಥಿಯವರು ವ್ಯಾಕರಣ ಶುದ್ಧಿಯನ್ನು "ಮೊಸರಿನಲ್ಲಿ ಕಲ್ಲು ಹುಡುಕುವುದೆಂದು" ಹಾಸ್ಯವಾಗಿ ವರ್ಣಿಸಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಈ ಬಾರಿಯ ವಾಕ್ಪಥ ಗೋಷ್ಟಿಗೆ ಸಂಪದಿಗರಾದ ಶ್ರೀಯುತ ಶ್ರೀನಾಥ್ ಭಲ್ಲೆ ಆಗಮಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದು ಸಂತೋಷವಾಗಿತ್ತು.
ಇಲ್ಲಿಗೆ ಅಧಿಕೃತವಾಗಿ ವಾಕ್ಪಥ ಆರನೇ ಗೋಷ್ಟಿಯ ಮುಕ್ತಾಯವಾಗಿ ನಂತರ ಮುಂದಿನ ಗೋಷ್ಟಿಯ ರೂಪುರೇಷೆಗಳನ್ನು ನಿರ್ಧರಿಸಲಾಯಿತು. ಮುಂದಿನ ಗೋಷ್ಟಿಯ ನಿರ್ವಾಹಕರಾಗಿ ಜಯಂತ್ ರಾಮಾಚಾರ್ ಅವರಿಗೆ ವಾಕ್ಪಥದ ಫಲಕವನ್ನು ಹಸ್ತಾಂತರಿಸಲಾಯಿತು.
ಮುಂದಿನ ಗೋಷ್ಟಿಯ ದಿನಾಂಕ ಹಾಗೂ ಕಾರ್ಯಕ್ರಮಗಳ ಪಟ್ಟಿಯನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು.

No comments:

Post a Comment