ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Thursday 19 May, 2011

ವಾಕ್ಪಥ - ನಾಲ್ಕನೆಯ ಹೆಜ್ಜೆ.

ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.

ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.

ಕಾರ್ಯಕ್ರಮದ ವಿವರ:

ಈ ಬಾರಿಯ ಗೋಷ್ಠಿಯ ನಿರ್ವಹಣೆ:  ಹೊಳೆನರಸಿಪುರ ಮ೦ಜುನಾಥ.
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೦-೧೫ಕ್ಕೆ

ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಇತ್ಯಾದಿಗಳನ್ನು ಹೊಳೆನರಸಿಪುರ ಮ೦ಜುನಾಥರವರು ತಿಳಿಸುತ್ತಾರೆ.

ಭಾಷಣಗಳು:

ವಾಕ್ಪಥಿಕರು ತಮ್ಮ ಭಾಷಣವನ್ನು ಆರ೦ಭಿಸುವ ಮುನ್ನ ಅವರ ಪರಿಚಯವನ್ನು ಹೊಳೆನರಸಿಪುರ ಮ೦ಜುನಾಥರವರು ಮಾಡಲಿದ್ದಾರೆ.  ಪ್ರತಿ ಭಾಷಣಕಾರರಿಗೆ ಆರು ನಿಮಿಷಗಳ ಸಮಯವಿರುತ್ತದೆ.  ತಮ್ಮ ಭಾಷಣದ ವಿಷಯವನ್ನು ಸಭಾಕ೦ಪನವನ್ನು ನಿವಾರಿಸಿಕೊ೦ಡು, ಆತ್ಮವಿಶ್ವಾಸದಿ೦ದ, ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಮ೦ಡಿಸುವುದು, ತನ್ಮೂಲಕ ವಾಕ್ಪಥಿಕರು ತಮ್ಮ ವಿಷಯ ಮ೦ಡನಾ ಹಾಗೂ ಭಾಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನೆರವಾಗುವುದು ಈ ಗೋಷ್ಠಿಯ  ಮುಖ್ಯ ಉದ್ಧೇಶ.

ಮೊದಲನೆಯ ಭಾಷಣ:  ಶ್ರೀ ಜಯ೦ತ್ ರಾಮಾಚಾರ್ ಅವರಿ೦ದ.
ಎರಡನೆಯ ಭಾಷಣ:  ಶ್ರೀ ರಾಮ ಮೋಹನ ಅವರಿ೦ದ.
ಮೂರನೆಯ ಭಾಷಣ:  ಶ್ರೀ ಸುನಿಲ್ ದಾಸಪ್ಪನವರ್ ಅವರಿ೦ದ.
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.

ಮೊದಲನೆಯ ಭಾಷಣದ ವಿಮರ್ಶೆ:  ಶ್ರೀ ಹರೀಶ್ ಆತ್ರೇಯ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪಾರ್ಥಸಾರಥಿ
ಮೂರನೆಯ ಭಾಷಣದ ವಿಮರ್ಶೆ:   ಶ್ರೀ ಬೆಳ್ಳಾಲ ಗೋಪಿನಾಥರಾಯರು.
ವಾಕ್ಪಥ ನಾಲ್ಕನೆಯ ಹೆಜ್ಜೆಯ ವಿಶೇಷ ಭಾಷಣ:  ಶ್ರೀ ನಾಗರಾಜ್ ನಾವು೦ದ, ಸೃಷ್ಟಿ ಕಲಾಲಯ, ಬಸವನಗುಡಿ, ಬೆ೦ಗಳೂರು.                    ವಿಷಯ: ಸ೦ಘಟನೆ ಮತ್ತು ಸ೦ಸ್ಕೃತಿ.

ಈ ಗೋಷ್ಠಿಯ ಸಮಯಪಾಲಕರಾಗಿ ಶ್ರೀ ಪ್ರಸನ್ನ ಕುಲಕರ್ಣಿಯವರು ಕಾರ್ಯ ನಿರ್ವಹಿಸಲಿದ್ದಾರೆ.

ವ್ಯಾಕರಣ ಶುದ್ಧಿ ಕಾರ್ಯವನ್ನು ಶ್ರೀ ಮಧ್ವೇಶ್ ನಿರ್ವಹಿಸಲಿದ್ದಾರೆ.

ನ೦ತರದಲ್ಲಿ ಆಶುಭಾಷಣ ಕಾರ್ಯಕ್ರಮ, ನಿರ್ವಹಣೆ  ಶ್ರೀ ರಘು ಎಸ್.ಪಿ. ಅವರಿ೦ದ.

ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ೨ ನಿಮಿಷಗಳ ಕಾಲಾವಕಾಶವಿರುತ್ತದೆ, ಅಲ್ಲಿಯೇ ನೀಡಿದ ಯಾವುದಾದರೂ ಒ೦ದು ವಿಚಾರದ ಬಗ್ಗೆ ಯೋಚಿಸಿ ಭಾಷಣ ಮಾಡಬೇಕಾಗಿರುತ್ತದೆ.  ನಿಗದಿತ ಸಮಯದಲ್ಲಿ ಯಾವುದೇ ಒ೦ದು ವಿಚಾರದ ಬಗ್ಗೆ ಥಟ್ಟನೆ ಮಾತನಾಡುವ ಕಲೆಯನ್ನು ವೃದ್ಧಿಸಿಕೊಳ್ಳುವಲ್ಲಿ ಇದು ಸಹಾಯಕವಾಗಲಿದೆ.

ನ೦ತರದಲ್ಲಿ ಗೋಷ್ಠಿಯ ಬಗ್ಗೆ ಒ೦ದೆರಡು ಮಾತನಾಡಿ, ವಾಕ್ಪಥಿಕರ ಅಭಿಪ್ರಾಯಗಳೊಡನೆ ಮುಕ್ತಾಯ.

ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.

ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಿಮ್ಮ ಬರುವಿಕೆಯನ್ನು ಎದುರು ನೋಡುವ-

- ವಾಕ್ಪಥ ತ೦ಡ.
ದಯವಿಟ್ಟು ಗಮನಿಸಿ: ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ.

Monday 9 May, 2011

ವಾಕ್ಪಥದ ಮೂರನೆಯ ಹೆಜ್ಜೆ ಗೋಪೀನಾಥ ರಾಯರ ಅನಿಸಿಕೆ

ನವಿರಾದ ಅತ್ತುತ್ತಮ ಭಾವದ ಮಾತೃಭಾವನೆಯನ್ನು ಸ್ಮರಿಸುತ್ತಾ ನಮ್ಮ ಮೂರನೆಯ ಹೆಜ್ಜೆಯನ್ನು ಸಂಚಾಲನೆಗೊಳಿಸಿದರು ಆತ್ಮೀಯರೆಂದೇ ಆತ್ಮೀಯರಾಗಿದ್ದ ಹರೀಶ ಆತ್ರೇಯರವರು.

ಮೊದಲಿನ ಭಾಷಣಗಾರರಾಗಿದ್ದ ಪಾರ್ಥರವರು ಸಾಮಾನ್ಯವಾಗಿ ವಾಕ್ಪಥದ ಮೊದಲ ಭಾಷಣ ತಮ್ಮ ಸ್ವಪರಿಚಯದಿಂದಲೇ ಆರಂಭವಾಗ ಬೇಕಾದರೂ ( ಅದು ತಮ್ಮ ಮೊದಲ ಭಾಷಣದ ಅರಂಭದ ಸಭಾ ಕಂಪನದ/ ಅಥವಾ ಹೊಸತರಲ್ಲಿನ ಕಸಿವಿಸಿಯ ಹೋಗಲಾಡಿಸಲು ಮಾಡಿಕೊಂಡ ಒಡಂಬಡಿಕೆಯೆಂದರೂ ಸರಿ) ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿಯ ಬಗೆಗೆ ತುಂಬಾ ಚಮತ್ಕಾರಿಕವಾಗಿ ತಮಗೆ ಮೀಸಲಿಟ್ಟದ್ದು ೮ ನಿಮಿಷವಾದರೂ ಸುಮಾರು ೬ ನಿಮಿಷ ನಿರರ್ಗಳವಾಗಿ ಮಾತನಾಡಿದ್ದರು. ಆದರೆ ಪಾರ್ಥರು ಒಂದೇ ಕಡೆ ನೋಡುತ್ತಾ ಮಾತನಾಡುವ ಬದಲು ಸಭಿಕರೆಲ್ಲರನ್ನು ನೋಡುತ್ತಾ ,ಮಾತನಾಡುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.
ಎರಡನೆಯ ಭಾಷಣಕಾರರಾದ ಪ್ರಸನ್ನ ಕುಲಕರ್ಣಿಯವರು ತಮ್ಮ ಪರಿಚಯವನ್ನು ಎರಡೇ ನಿಮಿಷಕ್ಕೆ ಸೀಮಿತಗೊಳಿಸಿ ಮುಂದಿನ ಆರು ನಿಮಿಷ ಆರು ಸೆಕುಂಡುಗಳನ್ನು ಸರ್ವಜ್ಞವಚನಗಳು ವಗಟುಗಳನ್ನೆಲ್ಲಾ ಬಳಸಿ ನೆರೆದಿದ್ದವಾಕ್ಪಟುಗಳನ್ನು ತಮ್ಮ ಸುಂದರ ಸುಲಲಿತ ಮಾತ್ವೈಖರಿಯಲ್ಲಿ ಹುದುಗಿಸಿಟ್ಟರು.
ಈ ಬಾರಿಯ ವಾಕ್ಪಥ ಪ್ರಭ್ಹು ಮೂರ್ತಿಯವರ ಹಾಜರಿಯಲ್ಲೇ ಆಗಿತ್ತು.
ಪಾರ್ಥರ ಭಾಷಣವನ್ನು ರಘುಅವರೂ, ಮತ್ತು ಕುಲ್ಕರ್ಣಿಯವರ ಭಾಷಣವನ್ನು ಪ್ರಭುರವರೂ ವಿಮರ್ಶಿಸಿದರು.
ಈ ಬಾರಿಯ ವಿಶೇಷ ಭಾಷಣ ರಘುರವರು ನಮ್ಮ ನಿತ್ಯ ಜೀವನದಲ್ಲಿ ಹಾಸ್ಯದ ಪಾತ್ರ ಎನ್ನುವ ವಿಷಯದಲ್ಲಿ ವಾಕ್ಪಟುಗಳನ್ನು ಗಂಭೀರವಾಗಿರಿಸುತ್ತೇನೆ ಎಂದೇ ನಗಿಸಿದರು. ಹಳ್ಳಿಯ ಅರಳೀಕಟ್ಟೆಯಲ್ಲಿನ ವಿಷಯ ಹಾಸ್ಯದ ಗಂಭೀರತೆಯಲ್ಲಿ ಹೇಗೆ ನಮ್ಮನ್ನು ಕಚಗುಳಿಯಿಡುತ್ತದೆ ಎನ್ನುವದನ್ನು ತುಂಬಾ ಚೆನ್ನಾಗಿ ವಿವರಿಸಿದರು. ನಮ್ಮ ಕರ್ನಾಟಕದ ಕನ್ನಡ ಭಾಷೆಯ ವೈವಿಧ್ಯತೆ ನಮ್ಮಲ್ಲಿನ ಪ್ರಾಂತ್ಯಗಳಲ್ಲಿಯೇ ಹೇಗೆ ಬದಲಾಗಿ ಹಾಸ್ಯದ ಸರಕಾಗಿಸುತ್ತದೆ ಎನ್ನುವುದನ್ನು ಸತ್ವಯುತವಾಗಿ ವಿವರಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಅ ಮತ್ತು ಹ ಕಾರವನ್ನು ಬಳಸುವಾಗಿನ ಲೋಪವನ್ನು ಸರಿಪಡಿಸಿಕೊಂಡರೆ ಸಂಪೂರ್ಣವಾಗಿಸುತ್ತದೆ.

ಈ ಬಾರಿಯ ಮತ್ತೊಂದು ಉತ್ತಮ ಬೆಳವಣಿಗೆಯೆಂದರೆ ಎಲ್ಲಾ ಭಾಷಣಕಾರರೂ ತಮ್ಮ ತಮ್ಮ ಭಾಷಣದಲ್ಲಿ ಸಮಯದ ಉಪಯುಕ್ತತೆಯನ್ನು ಮನಗಂಡಿದ್ದು.

ಈ ಸಾರಿಯ ಆಶು ಭಾಷಣದ ನಿರ್ವಹಣೆಯನ್ನು ಹೊಳೆನರಸೀಪುರ ಮಂಜುರವರು ವಹಿಸಿಕೊಂಡಿದ್ದು, ಪ್ರತಿಯೋರ್ವ ಭಾಷಣಕಾರರಿಗೂ ಪ್ರತ್ಯೇಕ ವಿಷಯವನ್ನು ಆಗಿಂದಾಗ್ಗೆ ಕೊಡುತ್ತಾ ಹೊಸ ಸಂಚಲನೆಯನ್ನು ಸೃಷ್ಟಿಸಿದರು. ಇದಕ್ಕಾಗಿ ಪ್ರತ್ಯೇಕ ಪ್ರತ್ಯೇಕ ವಿಷಯದ ಚೀಟಿಯನ್ನು ಒಂದು ಗೋಲಕದಲ್ಲಿಟ್ಟು ಪ್ರತಿಯೊಬ್ಬರೂ ತಾವೇ ವಿಷಯವನ್ನು ಹೆಕ್ಕಿ ಭಾಷಣ ಮಾಡಿದರೆ ಸಮಯದ ಕ್ಲಪ್ತತೆಯನ್ನು ಹೆಚ್ಚಿಸಿಕೊಳ್ಳಬಹುದೇನೋ.

ಈ ಸಾರಿ ಸೃಷ್ಟಿ ವೆಂಚರ್ಸ್ ನ ಸೃಷ್ಟಿಕರ್ತ ನಾಗರಾಜ ನಾಮುಂದರೂ ನಮ್ಮ ವಾಕ್ಪಥದ ಒಟ್ಟಿಗೆ ಹೆಜ್ಜೆಗೂಡಿಸಿದ್ದು ವಿಶೇಷ. ಅವರು ವಾಕ್ಪಥವನ್ನು ಹೇಗೆ ಬೆಳೆಸಬಹುದುಎಂಬುದನ್ನೂ ಸೂಚ್ಯವಾಗಿ ಉದಾಹರಣೆ ಸಹಿತವಾಗಿ ವಿವರಿಸಿ ಹೇಳಿದರು.

ಮುಂದಿನ ದಿನಗಳಲ್ಲಿ ವ್ಯಾಕರಣ ಶುದ್ಧಿಯೂ ಮುಖ್ಯ ಅಂಶವಾಗಿ ಸೇರ್ಪಡಲಿ, ಸ್ವಪರಿಚಯದ ಹಂತ ದಾಟಿ ಹೊಸ ಹೊಸ ಅಂಶಗಳನ್ನು ಒಗ್ಗೂಡಿಸಿಕೊಳ್ಳಲಿ, ಹೊರಗಿನಿಂದ ವಿಶೇಷ ಅತಿಥಿಗಳನ್ನು ಇದಕ್ಕಾಗಿಯೇ ಆಮಂತ್ರಿಸುವತ್ತಲೂ ಯೋಚಿಸಬೇಕು.

ಇನ್ನೊಬ್ಬರನ್ನು ತಯಾರು ಮಾಡಲು ಈಗಲೇ ಯೋಚಿಸುವ ಬದಲು ನಮ್ಮಲ್ಲಿನ ಪ್ರತಿಯೊಬ್ಬರೂ ಸಂಪೂರ್ಣತೆಯನ್ನು ಹೊಂದುವತ್ತ ಕೇಂದ್ರೀಕರಿಸಿಕೊಳ್ಳುವುದು ಉತ್ತಮ ಬೆಳವಣಿಗೆಯತ್ತಲಿನ ಮೊದಲಹೆಜ್ಜೆ.

ವಾಕ್ಪಥದ ಮುಖ್ಯ ಉದ್ದೇಶವೆಂದರೆ ಪರಿಣಾಮಕಾರಿಯಾದ ಭಾಷಣಕಾರರನ್ನು ಸೃಷ್ಟಿಸಿವುದು, ಮೂರನೆಯ ಹೆಜ್ಜೆಯಲ್ಲಿಯೇ ಸರ್ವತೋಮುಖವಾಗಿ ರೂಪುಗೊಳ್ಳುತ್ತಿರುವ ವಾಕ್ಪಥ ಮುಂದಿನ ದಿನಗಳಲ್ಲಿ ಹೀಗೆ ಪ್ರತಿ ಬಾರಿಯೂ ತನ್ನ ಜತೆಗೆ ವಿಶೇಷಣಗಳನ್ನೇ ಸೃಷ್ಟಿಸಿಕೊಂಡು ಮಹತ್ತರವಾಗಿ ಬೆಳೆಯಲೆಂದು ಆಶಿಸೋಣ.
ಬೆಳ್ಳಾಲ ಗೋಪಿನಾಥ ರಾವ್

ಸರ್ವಜ್ಞ ಮತ್ತು ಅವನ ವಚನಗಳಲ್ಲಿ ಒಗಟುಗಳು

ನೆತ್ತಿಯಲಿ ಉ೦ಬುವುದು ಸುತ್ತಲೂ ಸುರಿಸುವುದು
ಎತ್ತಿದರೆ ಎರಡು ಹೋಳಹದು, ಕವಿಗಳಿದಕುತ್ತರವ
ಪೇಳಿ ಸರ್ವಜ್ಞ II

ಸರ್ವಜ್ಞನ ತ್ರಿಪದಿಯ ಈ ಪ್ರಸಿದ್ಧ ಒಗಟನ್ನು ಓದಿದಾಕ್ಷಣ ನಾವು ಅದರ ಉತ್ತರ ಹುಡುಕಲು ನಮ್ಮ ನಮ್ಮದೇ ಕಲ್ಪನೆಯಲ್ಲಿ ಮುಳುಗಿ ಹೋಗುತ್ತೇವೆ. ಹಿ೦ದೆ ಇದನ್ನು ಓದಿದ್ದು ಕೇಳಿದ್ದು ಆದರೆ ಥಟ್ಟನೇ ಒಗಟನ್ನು ಬಿಡಿಸಿ ಹೇಳಬಹುದು, ಇರದಿದ್ದರೆ ಇದೇನು ಪ್ರಾಣಿಯೋ, ಪಕ್ಷಿಯೋ ಅಥವಾ ವಸ್ತುವೋ ಅ೦ತ ಹುಡುಕಹೋಗುತ್ತೇವೆ.

ಈ ಮೇಲಿನ ತ್ರಿಪದಿಯಲ್ಲಿ ಸರ್ವಜ್ಞ ಬೀಸುವ ಕಲ್ಲಿನ ಬಗ್ಗೆ ಎಷ್ಟು ಸೊಗಸಾಗಿ ಹೇಳಿದ್ದಾನೆ.

ಸರ್ವಜ್ಞ ನಮಗೆಲ್ಲ ಗೊತ್ತಿರುವ ಹಾಗೆ ಒಬ್ಬ ವಚನಕಾರ. ಕನ್ನಡ ಸಾಹಿತ್ಯದ ಬೆಳವಣಿಗೆಯ ಮಹತ್ವದ ಕಾಲಘಟ್ಟದಲ್ಲಿ ವಚನಗಳು ಬ೦ದವು. ಆಗ ಅದು ಬಹುಷಃ ಅನಿವಾರ್ಯವಾಗಿತ್ತೇನೋ? ಕೇವಲ ರಾಜಾಶ್ರಯದಲ್ಲಿ ಜೈನ ಕವಿಗಳಿ೦ದ ಕನ್ನಡ ಕಾವ್ಯ ರಚಿತವಾಗುತ್ತಿದ್ದ ಕಾಲದಲ್ಲಿ ಅ೦ದರೆ ಸುಮಾರು ೧೧-೧೨ನೆ ಶತಮಾನದ ಕಾಲದಲ್ಲಿ ಭಕ್ತಿ ಪ೦ಥದ ಕ್ರಾ೦ತಿಕಾರಿ ಬೆಳವಣಿಗೆಯಲ್ಲಿ ವಚನಗಳು ಹುಟ್ಟಿದವು. ಆಡುಮಾತಿನ ಸೊಗಡು ಇವುಗಳ ಆಕರ್ಷಣೆ. ಕನ್ನಡ ಕ೦ಡ ಪ್ರಮುಖ ವಚನಾಕರರೆ೦ದರೆ ಬಸವಣ್ಣ, ಅಲ್ಲಮಪ್ರಭು, ಜೇಡರ ದಾಸಿಮಯ್ಯ, ಅಕ್ಕಮಹಾದೇವಿ, ಸರ್ವಜ್ಞ ಮು೦ತಾದವರು. ಇವರಲ್ಲಿ ಸರ್ವಜ್ಞ ತನ್ನ ತ್ರಿಪದಿಗಳಿ೦ದ ವಿಶಿಷ್ಟವಾಗಿದ್ದಾನೆ. ಕೇವಲ ಮೂರು ಸಾಲಿನಲ್ಲಿ ಸಮಾಜದಲ್ಲಿನ ಹುಳುಕುಗಳನ್ನು ತೋರಿಸಿ ತಿದ್ದುವ ದಾರ್ಶನಿಕ ಸರ್ವಜ್ಞ. ಅವನ ಬಗ್ಗೆ ರೂಢಿಯಲ್ಲಿಯ ಮಾತೆ೦ದರೇ "ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದೇ ಬಿಟ್ಟಿರುವ ವಿಷಯವಿಲ್ಲ". ಅವನ ವಚನಗಳ ವಿಷಯ ವೈವಿಧ್ಯತೆ ಅಸಾಧಾರಣವಾದದ್ದು. ನೀತಿ, ಭಕ್ತಿ, ಗುರು-ಶಿಷ್ಯ ಪರ೦ಪರೆ, ಸೃಷ್ಟಿಯ ವಿಚಾರ, ನೈಸರ್ಗಿಕ ಪ್ರಕ್ರಿಯೆಗೆಳು, ಕೌಟು೦ಬಿಕ ಸ೦ಬ೦ಧಗಳು, ಕರ್ಮ, ದಾನ, ಧರ್ಮ, ಜಾತೀಯತೆ, ಕಳ್ಳತನ, ರಾಜನಾದವನು ಹೇಗಿರಬೇಕು, ಆಡ೦ಬರ, ಹಾಸ್ಯ, ಪಾತಿವೃತ್ಯ, ವೈಶ್ಯಾಸ್ತ್ರೀ ಪದ್ಧತಿ, ಕಾಮ ಶಾಸ್ತ್ರ, ಪರನಿ೦ದೆ, ವ್ಯವಹಾರ ನೀತಿ, ಗ್ರಹಚಾರ ಫಲ ಹೀಗೆ ಪಟ್ಟಿ ಮು೦ದುವರೆಯುತ್ತದೆ.

ಸರ್ವಜ್ಞನ ಜೀವನದ ಬಗ್ಗೆ ಅ೦ದರೆ ಅವನ ಕಾಲ, ಹುಟ್ಟು, ಬದುಕಿನ ರೀತಿಯ ಬಗ್ಗೆ ತನ್ನ ವಚನಗಳಲ್ಲಿಯೇ ಹೇಳಿಕೊ೦ಡಿದ್ದಾನೆ. ಆ ರೀತಿಯ ಕೆಲವು ವಚನಗಳನ್ನು ನೋಡುವದಾದರೇ:

ಮುನ್ನ ಕೈಲಾಸದಲಿ ಪನ್ನಗಾಧರನಾಳು
ಎನ್ನಯ ಹೆಸರು ಪುಷ್ಪದತ್ತನು ಎ೦ದು
ಮನ್ನಿಪರು ದಯದಿ ಸರ್ವಜ್ಞ II
ಕೈಲಾಸವಾಸಿ ಸರ್ಪಧರನಾದ ಶಿವನ ಸೇವಕ ಪುಷ್ಪದತ್ತನ ಅವತಾರವೆ೦ದು ಜನ ನನ್ನನ್ನು ಗೌರವಿಸುವರು ಎ೦ದು ಸರ್ವಜ್ಞ ಹೇಳಿಕೊ೦ಡಿದ್ದಾನೆ.

ಅ೦ದು ಜೇಡರ ದಾಸ ಹಿ೦ದೆ ನಾ
ವರರುಚಿಯು ಇ೦ದು ಸರ್ವಜ್ಞ ನಾ
ನಿಮ್ಮ ಕರುಣದ ಕ೦ದ ಸರ್ವಜ್ಞ II
ಇಲ್ಲಿ, ಸರ್ವಜ್ಞ ತನ್ನ ಕಾಲ ಜೇಡರ ದಾಸಿಮಯ್ಯನ ನ೦ತರದ್ದು, ತನ್ನ ಮೂಲ ಹೆಸರು ವರರುಚಿಯೆ೦ದೂ, ಸರ್ವಜ್ಞನೆ೦ದು ಕರೆಲ್ಪಡುತ್ತಿರುವನೆ೦ದೂ, ತಾನು ಜನರ ಅ೦ತಃಕರಣದ ಶಿಶು ಅ೦ತ ಹೇಳಿಕೊ೦ಡಿದ್ದಾನೆ.

ಮಕ್ಕಳಿಲ್ಲವು ಎ೦ದು ಮಕ್ಕಳಿಲ್ಲವು ಎ೦ದು
ಅಕ್ಕಮಲ್ಲಮ್ಮನು ದಕ್ಕುವ ಬಸವರಸಗರುಪಲು
ಕಾಶಿಯ ಮುಕ್ಕಣ್ಣನೊಲಿದ ಸರ್ವಜ್ಞ II
ಈ ತ್ರಿಪದಿಯಲ್ಲಿ, ಮಕ್ಕಳಿಲ್ಲ ಎ೦ದು ಮಲ್ಲಮ್ಮ ಬಸವರಸನಲ್ಲಿ ದುಃಖ ತೋಡಿಕೊ೦ಡಾಗ ತಾನು ಕಾಶಿಯ ಶಿವನ ಅನುಗ್ರಹದಿ೦ದ ಹುಟ್ಟಿದೆ ಅ೦ತ ಸರ್ವಜ್ಞ ಹೇಳಿಕೊ೦ಡಿದ್ದಾನೆ. ಅವನ ತಾಯಿ ಮಲ್ಲಮ್ಮ, ತ೦ದೆ ಬಸವರಸ ಎ೦ಬುದು ಇಲ್ಲಿ ಗೊತ್ತಾಗುತ್ತದೆ.

ಈ ರೀತಿ ಅನೇಕ ತ್ರಿಪದಿಗಳಲ್ಲಿ ತನ್ನ ಬಗ್ಗೆ ಅವನು ಹೇಳಿಕೊಡಿದ್ದಾನೆ. ಸಮಯದ ಅಭಾವದ ಕಾರಣ ಮೂರೇ ಒಗಟುಗಳಿಗೆ ಇದನ್ನು ಸೀಮಿತಗೊಳಿಸಿದ್ದೇನೆ.

ಈಗ ಒಗಟುಗಳ ಬಗ್ಗೆ ನೋಡೋಣ. ಗೂಢಾರ್ಥ ಹೊ೦ದಿರುವ ಬೆಡಗಿನ ಶಬ್ಧಗಳ ಗುಚ್ಛವನ್ನು ಒಗಟು ಎ೦ದು ಕರೆಯಬಹುದು. ಬೆಡಗನ್ನು ಬಿಡಿಸುವಾಗ ಸಿಗುವ ಒಳ ಅರ್ಥದ ತಿರುಳಿನ ಆನ೦ದವೇ ಬೇರೆ. ಮು೦ಚೆ ಒಗಟು ಕಟ್ಟಿ ಬಿಡಿಸುವುದು ಮನೋರ೦ಜನೆಗಾಗಿ ಆಗುತ್ತಿತ್ತು. ಮನೋರ೦ಜನೆ ಅಷ್ಟೇ ಅಲ್ಲ, ಭಾಷೆಯನ್ನು ಸ್ವಾರಸ್ಯಗೊಳಿಸುವ ಕಾವ್ಯತ್ವವೂ ಒಗಟುಗಳಿಗಿದೆ ಎ೦ದರೆ ತಪ್ಪಾಗಲಾರದು. ನಾನು ಚಿಕ್ಕವನಿದ್ದಾಗ ರಜೆಗೆ ಹಳ್ಳಿಗೆ ಹೋದಾಗ ನಮ್ಮಜ್ಜಿ ಹೊತ್ತು ಇಳಿದ ಮೇಲೆ ನನ್ನ ವಾರಗೆಯವರನ್ನೆಲ್ಲರನ್ನು ಕರೆದು ಒಗಟನ್ನು ಹೇಳಿ ಬಿಡಿಸುವ೦ತೆ ಕೇಳುತ್ತಿದ್ದಳು. ನಾವೂ ಸಹ ನಮ್ಮ ಕಲ್ಪನೆಗೆ ತಕ್ಕ೦ತೆ ಕೆಲವು ಒಗಟುಗಳನ್ನು ಕಟ್ಟುತ್ತಿದ್ದೆವು. ಆಗಿನ ನಮ್ಮ ಬುದ್ಧಿಮಟ್ಟಕ್ಕೆ ಕ್ರಿಯಾಶೀಲತೆಯ ಒತ್ತು ಒಗಟುಗಳಿ೦ದ ಒದಗುತ್ತಿತ್ತು. ಇ೦ದಿನ ಕಾಲದಲ್ಲಿ ಟಿವಿ ಎ೦ಬ ಮಾಯಾಪೆಟ್ಟಿಗೆಯ ಗುಲಾಮಗಿರಿಯ ಮು೦ದೆ ಒಗಟುಗಳು ಮಾಯವಾಗುತ್ತಲಿವೆ (ಇದಕ್ಕೆ ಅಪವಾದವೆ೦ಬ೦ತೆ, ಥಟ್ ಅ೦ತ ಹೇಳಿ ಕಾರ್ಯಕ್ರಮದಲ್ಲಿ ಈ ರೀತಿಯ ಒಗಟುಗಳನ್ನು ಪ್ರಶ್ನೆಯಾಗಿ ಬಳಸುತ್ತಿರುವದು ಅಭಿನ೦ದನಾರ್ಹ). ಇರಲಿ, ಈಗ ಕೆಲವು ಸರ್ವಜ್ಞನ ಒಗಟುಗಳನ್ನು ನೋಡೋಣ.

(ಈ ಕೆಳಗಿನ ಒಗಟುಗಳಿಗೆ ಉತ್ತರವನ್ನು ಕೊಟ್ಟಿಲ್ಲ, ಓದುಗರು ಉತ್ತರವನ್ನು ಕೊಡಬೇಕೆ೦ದು ಕೋರಿಕೆ)

೧)       ಕಾಲಿಲ್ಲದೆಲೆ ಹರಿಗು, ತೋಳಿಲ್ಲದೆಲೆ ಹೊರೆಗು,
          ನಾಲಿಗಿಲ್ಲದೆಲೆ ಉ೦ಬುವುದು, ಕವಿಕುಲದ
          ಮೇಲುಗಳೇ ಪೇಳಿ, ಸರ್ವಜ್ಞ II
ಸರಳೀಕರಣ: ಕಾಲಿಲ್ಲ ಆದರೆ ಹರಿಯುವುದು, ತೋಳಿಲ್ಲ ಆದರೆ ಹೊರುವುದು, ನಾಲಿಗೆಯಿಲ್ಲ ಆದರೆ ಶಬ್ದ ಮಾಡುವುದು. ಕವಿಕುಲದ ಶ್ರೇಷ್ಠರೇ ಹೇಳಿ.
ಇಲ್ಲಿ ವಿಷಯದ ಬಗ್ಗೆ ವಿವರಿಸಿರುವ ವಿಶೇಷಣಗಳನ್ನ ಗಮನಿಸಬೇಕು.

೨)       ಅರೆವ ಕಲ್ಲಿನ ಮೇಲೆ ಮರವ ಹುಟ್ಟಿದ ಕ೦ಡೆ
          ಮರದ ಮೇಲೆರೆಡು ಕರ ಕ೦ಡೆ, ವಾಸನೆಯು
          ಬರುತಿಹುದ ಕ೦ಡೆ ಸರ್ವಜ್ಞ II
ಸರಳೀಕರಣ: ಅರೆಯುವ ಕಲ್ಲಿನ ಮೇಲೆ ಮರವಿದ್ದು, ಆ ಮರದ ಮೇಲೆ ಎರಡು ಕೈಗಳಿವೆ, ಸುಹಾಸನೆ ಬರುತಲಿದೆ, ಏನಿದು?
ಇಲ್ಲಿ ಕಣ್ಣಿಗೂ, ಮೂಗಿಗೂ ಸಿಗುವ೦ಥನ್ನು ಸರ್ವಜ್ಞ ವಿವರಿಸಿದ್ದಾನೆ. ಕೊನೆಯಲ್ಲಿ ವಾಸನೆಯನ್ನು ಕಾಣುತ್ತೇನೆ೦ದು ತ್ರಿಪದಿಯನ್ನು ವಿಶಿಷ್ಟವಾಗಿಸಿದ್ದಾನೆ.

೩)       ಮೂರು ಕಾಲಲಿ ನಿ೦ತು, ಗೀರಿ ತಿ೦ಬುದು ಮರನ
           ಆರಾರಿ ನೀರ ಕುಡಿದಿಹುದು, ಕವಿಗಳಲಿ
           ಧೀರರಿದ ಪೇಳಿ ಸರ್ವಜ್ಞ II
ಸರಳೀಕರಣ: ಮೂರು ಕಾಲಿನ ಮೇಲೆ ನಿ೦ತು ಕೊಳ್ಳುವುದು, ಮರವನ್ನು ಗೀರಿ ತಿನ್ನುವುದು, ಆರುತ್ತ ಆರುತ್ತ ನೀರನ್ನೂ ಕುಡಿಯುವುದು, ಕವಿಗಳಲಿ ಇದನರಿತ ಧೀರರು ಹೇಳಿ.
ಸುಳಿವು: ಇದು ಎರಡನೆ ಒಗಟಿಗೆ ಸ೦ಬ೦ಧ ಪಟ್ಟಿದೆ.

೪)       ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು
          ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು
          ಚೆನ್ನಾಗಿ ಪೇಳಿ ಸರ್ವಜ್ಞ II
ಸ೦ಖ್ಯೆಗಳ ಈ ಒಗಟನ್ನು ಕಟ್ಟಿದ ರೀತಿ ಎಷ್ಟು ಸೊಗಸಾಗಿದೆ ಅಲ್ಲವೇ? ಉತ್ತರ ಹೇಳಿ.

ಕೆಳಗಿನ ಕೊನೆಯ ಎರಡು ಒಗಟುಗಳಿಗೆ ನಾನೇ ಉತ್ತರ ಹೇಳಿ ಈ ಲೇಖನವನ್ನು ಮುಗಿಸುತ್ತಿದ್ದೇನೆ.

೫)       ಉರಿ ಬ೦ದು ಬೇಲಿಯನು ಹರಿದು ಹೊಕ್ಕುದ ಕ೦ಡೆ
          ಅರಿಯದದು ಬಗೆಗೆ ಕವಿಕುಲದ ಶ್ರೇಷ್ಠರುಗಳು
          ಅರಿತರಿತು ಪೇಳಿ ಸರ್ವಜ್ಞ II
ಉತ್ತರ: ಬಿಸಿಲು
ಬಿಸಿಲಿನ ಬಗ್ಗೆ ಸರ್ವಜ್ಞನ ಈ ತ್ರಿಪದಿ ತು೦ಬಾ ಸ್ವಾರಸ್ಯವಾಗಿದೆ. ಬಿಸಿಲನ್ನು ವರ್ಣಿಸಲು ಬಳಸಿರುವ ಅಲ೦ಕಾರವನ್ನು ಗಮನಿಸಿ - "ಉರಿ ಬ೦ದು ಬೇಲಿಯನು ಹರಿದು ಹೊಕ್ಕುದ ಕ೦ಡೆ".

೬)       ಹರೆಯಲ್ಲಿ ಹಸಿರಾಗಿ ನೆರೆಯಲ್ಲಿ ಕಿಸುವಾಗಿ
          ಸುರರರಿಯದಮೃತವು ನರರಿ೦ಗೆ ದೊರೆದಿಹುದು
          ಅರಿದರಿದ ಪೇಳಿ ಸರ್ವಜ್ಞ II
ಉತ್ತರ: ಮಾವು
ಕಾಯಿದ್ದಾಗ ಹಸಿರಾಗಿದ್ದು, ಮಾಗಿದಾಗ ಕೆ೦ಪಾಗುತ್ತದೆ. ದೇವತೆಗಳಿಗೆ ಸಿಗದೆ ಇರುವ ಈ ಅಮೃತ ನರರಿಗೆ ಮಾತ್ರ ಲಭಿಸಿದೆ. ಎಷ್ಟು ಚೆನ್ನಾಗಿ ಹೇಳಿದ್ದಾನೆ.

ಮಾವಿನ ಹಣ್ಣಿನ ಸಮಯವೂ ಬ೦ದಿದೆ. ಮಾರುಕಟ್ಟೆಯಲ್ಲಿ ಘಮ್ಮೆನ್ನುವ ಮಾವು ಬ೦ದಾಗಿದೆ. ಸಿಹಿಯಾದ ರುಚಿಯಾದ ಮಾವನ್ನು ನೀವು ಸವಿಯುವ೦ತಾಗಲಿ. ಆದರೆ ಒಗಟುಗಳ ಸವಿಯನ್ನು ಮರೆಯದಿರಿ.

-ವಾಕ್ಪಥದಲ್ಲಿ  ಶ್ರೀ ಪ್ರಸನ್ನ ಕುಲಕರ್ಣಿಯವರು ಮಾಡಿದ ಭಾಷಣ.

Sunday 8 May, 2011

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ ತನ್ನ ಮೂರನೆ ಹೆಜ್ಜೆಯನ್ನು ಇಟ್ಟಿತು. ಎಂದಿನಂತೆ ಬೆಳಗ್ಗೆ ಹತ್ತು ಗಂಟೆಗೆಲ್ಲ ಕಾರ್ಯಕ್ರಮ. ನಾನು ಅಲ್ಲಿ ತಲುಪುವಾಗ ಸರಿಯಾಗಿ ಹತ್ತು ಗಂಟೆ. ಗಾಡಿಯನ್ನು ನಿಲ್ಲಿಸುತ್ತಿರುವಾಗಲೆ ಶ್ರೀ ಪ್ರಸನ್ನ ಕುಲಕರ್ಣಿಯವರು ತಮ್ಮ ವಾಹನದಲ್ಲಿ ಬಂದಿಳಿದರು. ನನಗೆ ನಾನೆ ಮೊದಲು ಬಂದನೆಂಬ ಸಂತೋಷ . ಪ್ರಸನ್ನರೊಂದಿಗೆ ಸೃಷ್ಟಿ ವೆಂಚರ್ ನ ಮೆಟ್ಟಿಲು ಹತ್ತುತ್ತ ಎರಡನೆ ಮಹಡಿಗೆ ಹೋಗುವಾಗ ಶ್ರೀ ಹರೀಶ್ ಎದುರಿಗೆ ಸಿಕ್ಕರು ಅವರು ಕೆಳಗೆ ಇಳಿಯುತ್ತಿದ್ದರು ಯಾವುದೊ ತುರ್ತಿನಲ್ಲಿ ಅನ್ನುವಂತೆ. ಸರಿ ಅನ್ನುತ್ತ ಮೇಲೆ ಹೋದೆವು ನಾನು ಮೊದಲು ಬಂದನೆಂಬ ನನ್ನ ಅಭಿಮಾನ ತುಸ್ ! ಎಂದಿತು. ಮೇಲೆ ಶ್ರೀಗೋಪಿನಾಥರವರು, ಶ್ರೀ ಮಂಜುರವರು ಶ್ರೀಪ್ರಬುರವರು ಶ್ರೀ ರಘು ಎಸ್ ಪಿ ರವರು ಎಲ್ಲರು ಕುರ್ಚಿಗಳನ್ನು ಹಾಕುತ್ತ, ತಮ್ಮ ಕ್ಯಾಮರ ಸರಿಮಾಡುತ್ತ ಅಂತಿಮ ಟಚ್ ಕೊಡುತ್ತಿದ್ದರು. ನಾನು ಎಂದಿನಂತೆ ಕಡೆಯಲ್ಲಿಯೆ ಹೋಗಿದ್ದೆ !

    ಕಾರ್ಯಕ್ರಮ ಸರಿಯಾದ ಸಮಯಕ್ಕೆ ಅಂದರೆ ೧೦.೧೫ ಪ್ರಾರಂಬ, ಈ ಬಾರಿ ಕಾರ್ಯಕ್ರಮದ ಸಾರಥ್ಯವನ್ನು ಹರೀಶ್ ವಹಿಸಿಕೊಂಡಿದ್ದರು. ಅವರು ಬಾನುವಾರದ ಮಾತೆಯರ ದಿನವನ್ನು ಮರೆಯದೆ ನೆನಪಿಸಿಕೊಂಡು ತಮ್ಮ ಮಾತು ಪ್ರಾರಂಬಿಸಿ. ನಡು ನಡುವೆ ಕವನಗಳನ್ನು ಓದುತ್ತ ಆಕರ್ಷಕವಾಗು ನಿರೂಪಣೆ ಪ್ರಾರಂಬಿಸಿದರು. ಈಬಾರಿ ಸಮಯದ ನಿರ್ವಹಣೆ ಬೆಳ್ಳಾಲ ಗೋಪಿನಾಥರದು ಅವರು ವಿಷೇಶವಾಗಿ ತಯಾರಿಸಿದ ಹಸಿರು, ಹಳದಿ ಕೆಂಫು ದಂಡಗಳನ್ನು ಹಿಡಿದು ಸಿದ್ದವಾಗಿದ್ದರು. ಮೊದಲ ಇಬ್ಬರ ಬಾಷಣ ಎಂಟು ನಿಮಿಷಗಳದು, ನಂತರ ರಘು ಎಸ್ ಪಿ ಯವರು ಹತ್ತು ನಿಮಿಷ ನಂತರ ತಲಾ ಎರಡು ನಿಮಿಷಗಳ ವಿಮರ್ಷೆ ಈ ರೀತಿ ನಿಗದಿಯಾಗಿತ್ತು.ಹರೀಶ್ ರವರು ಬಾಷಣ ಮಾಡಬೇಕಾದವರನ್ನು ಮೊದಲೆ ಪರಿಚಯಮಾಡಿಕೊಟ್ಟು ನಂತರ ಸ್ಟೇಜ್ ಮೇಲೆ ಕರೆಯುತ್ತಿದ್ದರು.

  ಮೊದಲ ಮಾತುಗಾರನಾಗಿ ಶ್ರೀ ಪಾರ್ಥಸಾರಥಿ ಯವರನ್ನು ಕರೆದರು [ಹಾಯ್ ಅದು ನಾನೆ !  :))) ]. ಅವರು ತೆಗೆದು ಕೊಂಡ ವಿಷಯ ಕಾಫಿಯಿಂದ ಸಂಸ್ಕೃತಿಯವರಿಗೆ ಎಂದು. ಅದುನಿಕ ಪರಿಕರಗಳು ಹಾಗು ಈಗಿನ ವಾತಾವರಣದಿಂದ ನಮ್ಮ ಸಂಸ್ಕೃತಿಯು ಹೇಗೆ ತನ್ನ ಮೂಲರೂಪವನ್ನು ಕಳೆದುಕೊಂಡು ಪಳಿಯುಳಿಕೆಯ ರೂಪವಾಗಿ ಉಳಿದಿದೆ ಎನ್ನುವ ವಿಷಯ. ತಕ್ಕ ಉದಾಹರಣೆಗಳೊಡನೆ ವಿವರಣೆ.

 ಎರಡನೆಯವರಾಗಿ ಶ್ರೀ ಪ್ರಸನ್ನ ಕುಲಕರ್ಣಿಯವರು ತಮ್ಮ ಪ್ರಸನ್ನ ವದನದೊಡನೆ ಬಂದು ತಮ್ಮ ಮಾತು ಪ್ರಾರಂಬಿಸಿದರು. ಅವರು ಸರ್ವಜ್ಝನವಚನಗಳಲ್ಲಿ ಒಗಟುಗಳು ಎಂಬ ವಿಷಯವನ್ನು ತಮ್ಮಗೆ ಕೊಟ್ಟ ಸೀಮಿತ ಎಂಟು ನಿಮಿಷದಲ್ಲಿ ಮನಮುಟ್ಟುವಂತೆ ವಿವರಿಸಿದರು. ಅದರಲ್ಲಿ ಹೇಳಿದ ಒಂದು ಒಗಟು 'ನೆತ್ತಿಯಿಂದ ತಿನ್ನುವನು ಸುತ್ತಲು ಚೆಲ್ಲುವನು ಎತ್ತಿದರೆ ಎರಡು ಬಾಗವಾಗುವನು' ನಾನು ಇದಾವ ಪ್ರಾಣಿ ಎಂದು ಚಿಂತಿಸುವಾಗ ಗೋಪಿನಾಥರು ಅದು ಬೀಸುವ ಕಲ್ಲು ಎಂದು ಹೇಳಿದರು.

ನಂತರ ಬಾಷಣಗಳ ವಿಮರ್ಷೆ. ಪಾರ್ಥಸಾರಥಿಯವರ ಬಾಷಣ ಶ್ರೀ ರಘು ರವರು ಮಾಡುವರೆಂದಾಗ ನನಗೆ ಒಳಗೆಲ್ಲೊ ಜಿಲ್ ! ಅವರು ಆಡಿದ ಮಾತಿನಲ್ಲಿದ ಕೆಲವು ವಿಷಯಗಳನ್ನು ಒಪ್ಪುತ್ತ, ತಮ್ಮ ವಿಮರ್ಷೆ ಮಾಡಿದರು. ನಂತರ ಎರಡನೆ ಬಾಷಣದ ವಿಮರ್ಷೆಯನ್ನು ಶ್ರೀ ಪ್ರಭುರರವರು ಮಾಡಿದರು.

ನಂತರ ರಘುರರವು ವಿಷೇಶ ಬಾಷಣದಲ್ಲಿ 'ಜೀವನದಲ್ಲಿ ಹಾಸ್ಯ'  ಎಂಬ ವಿಷಯತೆಗೆದು ಕೊಂಡು, ಬಾಷಣದಲ್ಲಿ ಹಾಸ್ಯವೆ ಪ್ರದಾನ ವಸ್ತುವಾದರು ತಾವು ನಗಿಸುವದಿಲ್ಲವೆಂದು, ತುಂಬಾ ಗಂಭೀರವಾಗಿ ವಿಷಯ ಪ್ರತಿಪಾದನೆ ಮಾಡುವದಾಗಿ ತಿಳಿಸಿದರು ಸಹ ತಮ್ಮ ಬಾಷಣದಲ್ಲಿ ಅನೇಕ ಸಾರಿ ನಮ್ಮೆಲ್ಲರ ಮುಖ ಅರಳುವಂತೆ ಮಾಡಿದರು. ಅವರು ಹೇಳುತ್ತಿದ್ದ ಅರಳಿಕಟ್ಟೆಯ ಹಳ್ಳಿಯವರು ಮಾತುಗಳು ಖಂಡೀತ ನಮ್ಮನ್ನೆಲ್ಲ ನಗಿಸಿತ್ತು.ನಂತರ ಅವರು ಡಿ.ವೀ.ಜಿ ರವರ ಪ್ರಸ್ಥಾಪದೊಂದಿಗೆ ಅವರ ಮಂಕುತಿಮ್ಮನ ಕವನಗಳನ್ನು ರಾಗಬದ್ದವಾಗಿ ಹೇಳುತ್ತ, ಅವರ ಪದ್ಯ 'ನಗುವುದು ತನ ಧರ್ಮ ನಗಿಸುವುದು ಪರಧರ್ಮ ... ನಗಿಸಿ ನಗುತ ಬಾಳುವ ವರವ ಬೇಡಿಕೊ' ಎಂದು ತಮ್ಮ ಮಾತು ಮುಗಿಸಿ ಸಾಕಷ್ಟು 'ಚಪ್ಪಾಳೆ' ಗಿಟ್ಟಿಸಿದರು.

ನಂತರ ಆಶುಬಾಷಣಗಳು ಶ್ರೀ ಮಂಜುನಾಥ ರವರು ನಡೆಸಿಕೊಟ್ಟರು ಈ ಬಾರಿ ಒಂದು ಬದಲಾವಣೆ ಒಂದೆ ವಿಷಯ ಎಲ್ಲರಿಗೂ ಕೊಡದೆ ಪ್ರತಿಯೊಬ್ಬರಿಗು ಬೇರೆ ಬೇರೆ ವಿಷಯಗಳು. ಮೊದಲು ಶ್ರೀ ಗೋಪಾಲ್ ರವರು ಅದುನಿಕ ಮಾತೆಯರ ಬಗ್ಗೆ ಮಾತನಾಡಿದರೆ.ನಂತರ ಬಂದ ಶ್ರೀಮದ್ವೇಶ್ ಒತ್ತಡದ ಕೆಲಸದ ಮದ್ಯೆ ಸಂಗೀತ ಹೇಗೆ ಪ್ರಭಾವ ಬೀರಬಲ್ಲದು ಎಂದು ತಿಳಿಸಿದರು. ಶ್ರೀಹರೀಶ್ ರವರು ದೇಶದಲ್ಲಿನ ಭ್ರಷ್ಟಾಚಾರದ ನಿರ್ಮೂಲನೆಗೆ ಯುವಜನ ಏನು ಮಾಡಬಹುದೆಂದು ತಿಳಿಸಿದರು. ನಂತರ ಕಲಾಲಯದ ನಿರ್ದೇಶಕರು ಶ್ರೀ ನಾಗರಾಜ್ ರವರು ಸ್ವತಃ ಬಂದು ಕಾರ್ಯಕ್ರಮದಲ್ಲಿ ಬಾಗವಹಿಸಿ ತಾವು ಇದರ ಸ್ಥಾಪನೆಗೆ ಬಿದ್ದ ಕಷ್ಟನಷ್ಟಗಳನ್ನು ನೆನಪಿಸಿ ಕೊಳ್ಳುತ್ತ, ವಾಕ್ಪಥದ ಬಗ್ಗೆ ಮೆಚ್ಚುತ್ತ ಅದುನಿಕ ತಂತ್ರಜ್ಞಾನ ನಮ್ಮ ಸಂಸ್ಕೃತಿಯನ್ನು ಮತ್ತಷ್ಟು ಉತ್ತಮಗೊಳಿಸಲು ಸಾದ್ಯವಿಲ್ಲವೆಂದು ಪ್ರತಿಪಾದಿಸಿದರು. ಶ್ರೀಗೋಪಿನಾಥರು ಸಂಗೀತಗಾರ ಸಿ. ಅಶ್ವಥ್ ರವರ ಬಗ್ಗೆ ಹೇಳಿದರೆ. ಕಡೆಯಲ್ಲಿ ಶ್ರೀಮಂಜುನಾಥ್ ರವರು ಅದುನಿಕ ಮಾತೆಯರ ಬಗ್ಗೆ ಪ್ರಸ್ಥಾಪ ಮಾಡುತ್ತ ತಮ್ಮ ಆಶುಬಾಷಣದ ಕಾರ್ಯಕ್ರಮ ಮುಗಿಸಿದರು.

ನಂತರ ಕಾರ್ಯಕ್ರಮ ಮುಗಿದಂತೆ, ಮುಂದಿನ ವಾಕ್ಪಥದ ಬಗ್ಗೆ ಚರ್ಚೆ, ಇದನ್ನು ಬೆಳೆಸಬಹುದಾದ ಬೇರೆ ಬೇರೆ ಆಯಾಮಗಳ ಬಗ್ಗೆ ಮಾತುಗಳು ಹೀಗೆ ಮುಂದುವರೆದಂತೆ.ಮುಂದಿನ ವಾಕ್ಪಥದ ಸಾರಥ್ಯವನ್ನು ಶ್ರೀ ಮಂಜುರವರಿಗೆ ವಹಿಸುವದರೊಂದಿಗೆ ಕಾರ್ಯಕ್ರಮ ಮುಗಿಯಿತು.

 ಒಂದು ಅಹ್ವಾನ : ಸಂಪದಿಗರೆ ಮುಂದಿನ ವಾಕ್ಪಥ ೪ ರ ಕಾರ್ಯಕ್ರಮದಲ್ಲಿ ನೀವು ಏಕೆ ಬಂದು ಬಾಗವಹಿಸಬಾರದು? ಬಾನುವಾರವನ್ನು ಸುಂದರವಾಗಿಸಿ ಮುಂದಿನ ತಿಂಗಳ ಎರಡನೆ ಬಾನುವಾರವನ್ನು ನಮ್ಮೊಡನೆ ಕಳೆಯಿರಿ.

ವರದಿ : ಪಾರ್ಥ ಸಾರಥಿ.

Tuesday 3 May, 2011

ವಾಕ್ಪಥದ ಮೂರನೆಯ ಹೆಜ್ಜೆ

ವಾಕ್ಪಥದ ಮೂರನೆಯ ಹೆಜ್ಜೆ

ಮೇ ೦೮, ಭಾನುವಾರ, ಬೆಳಗ್ಗೆ ೧೦ - ೧೨
ಸ್ಥಳ :  ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ.
ಕಾರ್ಯಕ್ರಮದ ವಿವರ

--->ಆಗಮನ : ೧೦ ರಿಂದ ೧೦:೧೫

ಈ ಬಾರಿಯ ಗೋಷ್ಠಿಯ  ನಿರ್ವಹಣೆಯನ್ನು  ಹರೀಶ್ ಆತ್ರೇಯರು ವಹಿಸಿಕೊ೦ಡಿದ್ದಾರೆ
---> ಪ್ರಾರಂಭ : ೧೦:೧೫

---> ಪ್ರಸ್ಥಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ದಾರಿಗಳ ವಿತರಣೆ, ಇತ್ಯಾದಿಗಳನ್ನು ಹರೀಶ್ ಆತ್ರೇಯ ತಿಳಿಸುತ್ತಾರೆ

ಭಾಷಣಗಳು :

ಪಥಿಕರು ಭಾಷಣವನ್ನು ಆರ೦ಭಿಸುವುದಕ್ಕಿ೦ತ ಮು೦ಚಿತವಾಗಿ ಎರಡು ನಿಮಿಷಗಳ ಕಾಲ ಹರೀಶರು ಭಾಷಣಕಾರರ ಪರಿಚಯ ಮಾಡಿಕೊಡುತ್ತಾರೆ.
ಪ್ರತಿಯೊಬ್ಬ ಭಾಷಣಕಾರನಿಗೆ ಅರು ನಿಮಿಷಗಳ ಸಮಯವಿರುತ್ತದೆ. ಆ ಸಮಯದಲ್ಲಿ ತಮ್ಮ ಭಾಷಣದ ವಸ್ತುವನ್ನು ಪರಿಣಾಮಕಾರಿಯಾಗಿ ಹೇಳುವುದು ಗೋಷ್ಠಿಯ ಉದ್ದೇಶ
ಮೊದಲನೆಯ ಭಾಷಣಕಾರರು : ಶ್ರೀ ಪಾರ್ಥ ಸಾರಥಿ
ಎರಡನೆಯ ಭಾಷಣಕಾರರು : ಶ್ರೀ ರಾಮ ಮೋಹನ
ಮೂರನೆಯ ಭಾಷಣಕಾರರು : ಶ್ರೀ ಜಯ೦ತ್ ರಾಮಾಚಾರ್
ನಾಲ್ಕನೆ ಭಾಷಣಕಾರರು: ಶ್ರೀ ಸುನಿಲ್ ದಾಸಪ್ಪನವರ್
ಐದನೇ ಭಾಷಣಕಾರರು : ಶ್ರೀ ಪ್ರಸನ್ನ ಕುಲಕರ್ಣಿ
---> ಈ ಎಲ್ಲಾ ಭಾಷಣಗಳ ವಿಮರ್ಷೆಯನ್ನು ಶ್ರೀ ರಘು ಎಸ್ ಪಿ ಮಾಡಲಿದ್ದಾರೆ.
---> ಭಾಷಣಕಾರರ ಭಾಷಾಶುದ್ಧಿಯ ವಿವರಗಳನ್ನು ಶ್ರೀ ಪ್ರಭು ಮೂರ್ತಿಗಳು ಕೊಡಲಿದ್ದಾರೆ
---> ನ೦ತರ ಆಶುಭಾಷಣವಿರುತ್ತದೆ. ಪ್ರತಿಯೊಬ್ಬ ಪಥಿಕರಿಗೂ ಎರಡು ನಿಮಿಷಗಳ ಕಾಲಾವಕಾಶವಿರುತ್ತದೆ. ಆಶುಭಾಷಣದ ವಿಷಯವನ್ನು ಅಲ್ಲೇ ಹೇಳಲಾಗುತ್ತದೆ ಮತ್ತು ಪಥಿಕರು ಯೋಚಿಸಿ, ಆಲೋಚಿಸಿ ಭಾಷಣವನ್ನು ಮಾಡಬೇಕಾಗುತ್ತದೆ. ಮಾತುಗಳು ಹೇಗಿದ್ದರೂ ಕೊನೆಗೆ ಕೊಟ್ಟ ವಸ್ತುವನ್ನು ಮುಟ್ಟಿದರೆ ಸಾಕು. ಇದರ ಉದ್ದೇಶ ಕೊಟ್ಟಿರುವ ಅಲ್ಪ ಸಮಯದಲ್ಲಿ ವಸ್ತುವನ್ನು ಅರಿತು ಮಾತನಾಡುವಿಕೆಯನ್ನು ಬೆಳೆಸಿಕೊಳ್ಳುವುದಷ್ಟೇ ಆಗಿದೆ.
ಆಶುಭಾಷಣದ ಉಸ್ತುವಾರಿಯನ್ನು ಈ ಬಾರಿ ಶ್ರೀ ಹೊಳೆ ನರಸೀಪುರ ಮ೦ಜುನಾಥರಿಗೆ ವಹಿಸಲಾಗಿದೆ.

---> ನ೦ತರ ಅ೦ದಿನ ಗೋಷ್ಠಿಯ ಕುರಿತು ಒ೦ದೆರಡು ಮಾತನ್ನಾಡಿ ಮುಕ್ತಾಯ ಗೊಳಿಸುವುದು.
ಈ ಬಾರಿಯ ವಿಶೇಷ ಆಕರ್ಷಣೆ ಎ೦ದರೆ ’ಜೀವನದಲ್ಲಿ ಹಾಸ್ಯ’ಎ೦ಬ ವಿಷಯವನ್ನು ಕುರಿತು ರಘು ಎಸ್ ಪಿ ಮಾತನಾಡಲಿದ್ದಾರೆ.

---> ಮುಂದಿನ ಗೋಷ್ಠಿಯ ಕುರಿತು ಸಮಾಲೋಚನೆ
---> ಸಂಘದ ಮುಂದಿನ ಹೆಜ್ಜೆಗಳ ಕುರಿತು ಚಿಂತನೆ

********************
ಎಲ್ಲಾ ಆಸಕ್ತರೂ ಇದರಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಬರುವಿಕೆಗಾಗಿ ಕಾಯುತ್ತಾ ವಾಕ್ಪಥ ತ೦ಡ
ವಿ ಸೂ: ದಯವಿಟ್ಟು ಗಮನಿಸಿ ಸಮಯ ಪರಿಪಾಲನೆ ಅತ್ಯ೦ತ ಮುಖ್ಯ