ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday 20 November, 2011






ವಾಕ್ಪಥ ಸಮಾನ ಮನಸ್ಕರೆಲ್ಲರಿಗೂ ಒಂದು ವಿಶೇಷ ಸಿಹಿ ಸುದ್ದಿ
ಏನು ಗೊತ್ತೇ
ನಮ್ಮ ವಾಕ್ಪಥದ ಮೊದಲ ವಾರ್ಷಿಕೋತ್ಸವಕ್ಕೆ "ಅಭ್ಯಾಸ" ದ ಮೆರುಗು
ಅಭ್ಯಾಸದ ನಿರ್ವಾಹಕ ಶ್ರೀಯುತ ರಾಜಶೇಖರ ಮಾಲೂರು ಮತ್ತು ರೂವಾರಿ  ಡಾ ಸನ್ಮಾನ್ಯ ಎಚ್ ಎಸ್ ವೀಯವರೂ
ಫೆಬ್ರವರಿಯ ನಮ್ಮ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ
ಇದಕ್ಕಾಗಿ ವಾಕ್ಪಥ ತಂಡವು ಇವರಿಬ್ಬರಿಗೂ ಧನ್ಯವಾದಗಳನ್ನರ್ಪಿಸುತ್ತಿದೆ
ಏನಂತೀರಿ ಗೆಳೆಯರೇ?
ವಾಕ್ಪಥ

ಭಾಷಣವನ್ನು ನಿರರ್ಗಳವಾಗಿ ತಪ್ಪಿಲ್ಲದೆ ನಿಗದಿತ ಸಮಯದಲ್ಲಿ ವ್ಯವಸ್ಥಿತ ರೀತಿಯಲ್ಲಿ ಆಕರ್ಷಣೀಯವಾಗಿ ಪರಿಣಾಮಕಾರಿಯಾಗಿ ಮಂಡಿಸುವದನ್ನು ಕಲಿಸುವ ಶಾಲೆಯೇ ವಾಕ್ಪಥ.

ಇದಕ್ಕಾಗಿ ಒಂದು ತರಗತಿ ಅಥವಾ ಗೋಷ್ಟಿಯನ್ನು ಸಮಯವನ್ನು ನಿಗಧಿತವಾಗಿರಿಸಿಕೊಂಡು ಒಂದು ಸೂತ್ರದಲ್ಲಿ ಕಟ್ಟಿಡಲಾಗುತ್ತದೆ. ಮೊದ ಮೊದಲು ವಿಷಯವನ್ನು ಅಷ್ಟಾಗಿ ಗಮನದಲ್ಲಿರಿಸಿಕೊಳ್ಳದೇ ಬರೇ ಧ್ವನಿ ಶೈಲಿ ರೀತಿಯನ್ನೇ ಮುಖ್ಯವಾಗಿರಿಸಿಕೊಂಡು ಭಾಷಣಕಾರರಿಗೆ ಅವಕಾಶ ನೀಡಲಾಗುತ್ತದೆ. ನಿರ್ವಾಹಕ ಒಂದು ಪೂರ್ವನಿಯೋಜಿತ ವ್ಯವಸ್ಥಿತ ರೀತಿಯಲ್ಲೇ ಕಾರ್ಯಕ್ರಮವನ್ನು ನಿರ್ವಹಿಸುತ್ತಾ ಸಮಯ ಪಾಲಕರ ಹಾಗೂ ವಿಮರ್ಶಕರ ಮತ್ತು ಭಾಷಾ ಶುದ್ಧಿಗಾರರ ಸಲಹೆ ಸಹಕಾರಗಳಿಂದ ಭಾಷಣಕಾರರ ಭಾಷಣವನ್ನು ಒರೆ ಹಚ್ಚಿ ಇನ್ನಷ್ಟು ಪರಿ ಪಕ್ವ ಗೊಳಿಸುವ ನಿಟ್ಟಿನಲ್ಲಿ ಅವರನ್ನು ಉದ್ದೀಪಿಸುತ್ತಾನೆ.

ಹೀಗೆ ಪ್ರತಿ ಗೋಷ್ಟಿಯೂ ಪ್ರತಿಯೊಬ್ಬ ವಾಕ್ಪಥಿಕರಲ್ಲಿ ಹೊಸ ಹೊಸ ಭಾಷಣಕಾರರು ವಿಮರ್ಶಕಾರರು ಭಾಷಾ ಶುದ್ಧಿಗಾರರು ಮತ್ತು ಸಮಯಪಾಲಕರನ್ನು ಸೃಷ್ಟಿಸುತ್ತಾ, ಒರೆಗೆ ಹಚ್ಚಿಕೊಳ್ಳುತ್ತಾ ಪರಿಪಕ್ವಗೊಳಿಸುತ್ತಾ ಪ್ರತಿ ಹೆಜ್ಜೆಯನೂ ಪ್ರಗತಿಯತ್ತ ಕೊಂಡೊಯ್ಯುತ್ತದೆ.

ವಾಕ್ಪಥದ ಸಾಫಲ್ಯವೇ ಹೀಗೆ ಮುನ್ನುಗ್ಗುತ್ತಿರುವ ಪ್ರಗತಿಯ ಪ್ರತಿ ಹೆಜ್ಜೆಯಲ್ಲೇ ಅಡಗಿದೆ.

೧. ನಿರ್ವಾಹಕ:

ಇಡೀ ಕಾರ್ಯಕ್ರಮದ ಕೀಲಿ ಕೈ ಆದ ನಿರ್ವಾಹಕ ಒಂದು ರೀತಿಯಲ್ಲಿ ಸಮಯ ಪಾಲಕನೂ ಹೌದು . ಅಯಾ ದಿನದ ಕಾರ್ಯಕ್ರಮವನ್ನು ಆರಂಭದಿಂದ ಕೊನೆಯ ( ವಂದನಾರ್ಪಣೆಯ ) ವರೆಗೆ ಅಚ್ಚುಕಟ್ಟಾಗಿ ನಿಗದಿತವಾಗಿ ನಡೆಸುವ ಭಾರ ಈತನದ್ದೇ. ಗೋಷ್ಟಿಯ ಉದ್ದೇಶ ಆಶಯಗಳನ್ನು ತಿಳಿಸುತ್ತಾ ಆರಂಭಿಸುವ ಆತ ಭಾಷಣಕಾರರನ್ನು ಸ್ವತಃ ಅಥವಾ ಬೇರೆಯವರಿಂದಲೋ ಪರಿಚಯಿಸುತ್ತಾನೆ.ವಾಕ್ಪಥದ ಅಂದಿನ ಕಾರ್ಯಕ್ರಮಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಸಮಯದ ಚೌಕಟ್ಟಿನಲ್ಲಿರಿಸಿ ಪ್ರತಿಯೊಂದೂ ವಿಷಯವನ್ನು ಗಮನದಲ್ಲಿರಿಸಿಕೊಂಡು ನಿರ್ವಹಿಸುತ್ತಾನೆ. ಅವಶ್ಯಕತೆ ಇದ್ದಲ್ಲಿ ತಾನೇ ಸ್ವತಃ ವಿಮರ್ಶೆಯನ್ನೂ ಮಾಡಿ, ಅನಿರೀಕ್ಷಿತ ಸಂಧರ್ಭಗಳನ್ನು ಸಂಭಾಳಿಸುತ್ತಾನೆ ಮತ್ತು ಕಾರ್ಯಕ್ರಮವನ್ನು ಅಂದ ಗಾಣಿಸಿಕೊಡುತ್ತಾನೆ.

ಈತನ ಮುಖ್ಯ ಕರ್ತವ್ಯಗಳು:
೧. ಸಮಯದ ಸದುಪಯೋಗ
೨. ವ್ಯವಸ್ಥಿತ ಕಾರ್ಯ ಪಾಲನೆ
೩. ಗೋಷ್ಟಿಯ ಆರಂಭಿಕ, ಭಾಷಣಕಾರರ ಪರಿಚಯ, ಮತ್ತು ಮುಕ್ತಾಯ ವಂದನಾರ್ಪಣೆ
೪. ಸಮಯಪಾಲಕರನ್ನು, ವಿಮರ್ಶಕರನ್ನು ಭಾಷಾ ಶುದ್ಧಿಗಾರರನ್ನು ಆಹ್ವಾನಿಸುವುದು,
೫. ಅನಿರೀಕ್ಷಿತ ಸಾಂಧರ್ಬಿಕ ವಿಷಯಗಳನ್ನು ಸಂಭಾಳಿಸುವುದು

೨.ಭಾಷಣ ಕಾರ

ನಿಗದಿತ ವಿಷಯವನ್ನು, ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಆಕರ್ಷಕವಾಗಿ ಮಂಡಿಸುವುದೇ ಭಾಷಣಕಾರ ಮುಖ್ಯ ಧ್ಯೇಯ. ತನ್ನ ಮಾತಿನ ಪಾಂಡಿತ್ಯದಲ್ಲೇ ಸಭಿಕರನ್ನು ಸೂಜಿಕಲ್ಲಿನಂತೆ ಆಕರ್ಷಿಸಿ ಧ್ವನಿಯ, ಶೈಲಿಯ, ಓಘವನ್ನು ಮಂಡಿಸುವ ಸರಿಯಾದ ಕ್ರಮದಲ್ಲಿ ಅರಿತುಕೊಂಡು ಮಂಡಿಸುವುದೇ ಮುಖ್ಯ ಕರ್ತವ್ಯ.ಪ್ರತಿ ಬಾರಿಯ ಭಾಷಣದಲ್ಲಿನ ಕುಂದುಕೊರತೆಗಳನ್ನು ತನ್ನನ್ನು ತಾನೇ ಒರೆಗೆ ಹಚ್ಚಿ ನೋಡಿಕೊಂಡು ಮುಂದುವರಿಯುತ್ತಾನೆ. ಭಾಷಣಕಾರನ ಸಮಯ ಮತ್ತು ಬಾಷೆಯ ಶುದ್ಧಿಯನ್ನು ಸಮಯಪಾಲಕ ಮತ್ತು ಭಾಷಾ ಶುದ್ಧಿ ಕಾರರು ವಿಮರ್ಶಿಸಿ ವರದಿ ಸಲ್ಲಿಸಿರುತ್ತಾರೆ. ನಿಜವಾದ ಭಾಷಣಕಾರ ತನ್ನ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ. ಅಲ್ಲದೇ ಹೀಗೆ ಎಲ್ಲಾ ಕೋನದಿಂದಲೂ ಪರಿಶೀಲಿಸುವ ಕೆಲಸ ನಡೆದಿರುವಾಗ ವಿಷಯದ ಪಾಂಡಿತ್ಯ ಅಥವಾ ಹರಹನ್ನು ವಿಸ್ತರಿಸಿಕೊಳ್ಳಲೂ ಇದು ಅವನಿಗೆ ನೆರವಾಗುತ್ತದೆ.

೩.ಸಮಯ ಪಾಲಕ

ಭಾಷಣಕಾರರು ಮತ್ತು ವಿಮರ್ಶಕರಿಗೆ ಕೊಟ್ಟ ನಿಗಧಿತ ಅವಧಿಯನ್ನು ಗಮನಿಸಿ, ಅದನ್ನು ವ್ಯವಸ್ಥಿತವಾಗಿ ತನ್ನಲ್ಲಿದ್ದ ಮೂರು ಬಾವುಟಗಳಿಂದ ಭಾಷಣಕಾರರು ಮತ್ತು ವಿಮರ್ಶಕರಿಗೆ ತಿಳಿಸುವುದು ( ಮೊದಲು ಹಸಿರು ನಂತರ ಹಳದಿ ತೋರಿಸಿ ಸಮಯದ ಅವಧಿ ಮೀರಿತ್ತಲೇ ಕೆಂಪು ಬಾವುಟವನ್ನು ಎತ್ತಿ ತೋರಿಸುತ್ತಾ ಅವರ ಭಾಷಣ ಮುಗಿಯುವ ವರೆಗೆ ಎತ್ತಿ ಹಿಡಿದು ತೋರಿಸುವುದೇ ) ಸಮಯ ಪಾಲಕನ ಆದ್ಯ ಕರ್ತವ್ಯ. ಇವು ಭಾಷಣಕಾರರಿಗೆ ತಮ್ಮ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅಂತ್ಯಗೊಳಿಸಲು ಅನುವಾಗುತ್ತವೆ. ಮತ್ತು ಕೊನೆಯಲ್ಲಿ ನಿರ್ವಾಹಕರ ಅಪ್ಪಣೆಯಂತೆ ವಿಮರ್ಶೆ ಅಥವಾ ಭಾಷಣಕ್ಕೆ ಎಷ್ಟು ಕಾಲಾವಕಾಶ ತೆಗೆದು ಕೊಂಡರು ಎನ್ನುವ ವರದಿಯನ್ನು ಸಭೆಗೆ ಸಲ್ಲಿಸುತ್ತಾನೆ.

೪. ಭಾಷಾ ಶುದ್ಧಿಗಾರ

ಸಮಯ ಪಾಲಕರಂತೆಯೇ ಇರುವ ಇನ್ನೊಂದು ಪರಿಣಿತ. ಈತನ ಕೆಲಸ ಭಾಷಣಕಾರನ ಮಾತುಗಳಲ್ಲಿನ ಕೊರತೆಯನ್ನು ವಿಮರ್ಶಿಸುವುದು. ಉದಾಹರಣೆಗೆ ಅ ಮತ್ತು ಹ ಉಚ್ಛಾರಣೆಯಲ್ಲಿನ ವ್ಯತ್ಯಾಸ, ಕೆಲವು ಶಬ್ದಗಳ ಪುನರಾವರ್ತನೆ.. ಇತ್ಯಾದಿ. ಇವನ ವಿಮರ್ಶೆಯ ಇನ್ನುಳಿದ ಭಾಗಗಳೆಂದರೆ:

೧. ಧ್ವನಿ ಏರಿಳಿತ
೨. ಓಘ
೩. ಶೈಲಿ
೪. ವ್ಯಾಕರಣ
೫. ಭಾಷೆಯಲ್ಲಿನ ಹಿಡಿತ
೬. ವಿಷಯದ ಪಾಂಡಿತ್ಯ
೭. ಕ್ಲಪ್ತತೆ
೮. ಆರಂಭ ಮತ್ತು ಮುಕ್ತಾಯ.

೫. ವಿಮರ್ಶಕ
ಭಾಷಾ ಶುದ್ಧಿಗಾರರಂತೆಯೇ ಅಷ್ಟೇ ಪ್ರಾಮುಖ್ಯ ಹೊಂದಿದ ಪರಿಣಿತ ಕೆಲಸವಿದು. ಭಾಷಣ ಕಾರರ ಭಾಷಣದೊಳಗಿಳಿಯದೇ ಹೊರಗಿನಿಂದ ಭಾಷಣವನ್ನು ತನ್ನ ವಿಮರ್ಶೆಯ ವರೆಗಲ್ಲಿನಲ್ಲಿಡಬೇಕಾದಂತಹ ಪಾಂಡಿತ್ಯ, ಅರಿವು ಇವರಿಗಿರಬೇಕಾದದ್ದು ಅವಶ್ಯಕ. ನಂತರ ಸಮಯ ಬಂದಾಗ ಇವುಗಳನ್ನು ನಿಗದಿತ ಸಮಯದಲ್ಲಿ ಸಭೆಗೆ ವರದಿ ನೀಡಬೇಕಾಗುತ್ತದೆ. ಈತನ ವಿಮರ್ಶೆಯ ಮುಖ್ಯ ಹರಹುಗಳು:
೧, ಸರಾಸರಿ ಒಟ್ಟಾರೆಯಾದ ನಿಲುವು.
೨. ಕುಂದು ಕೊರತೆಗಳು
೩. ಶೈಲಿ/ ಧ್ವನಿ
೪. ಒಳ್ಳೆಯ ಅಂಶಗಳು
೫. ಭಾಷಣ ಪಕ್ವವಾಗಲು ಅನುಸರಿಸಬೇಕಾದ ವಿಧಾನಗಳು

Sunday 13 November, 2011

ನವಮಾಸಗಳು ಪೂರೈಸಿದ ವಾಕ್ಪಥ

ವಾಕ್ಪಥ ಸೃಷ್ಟಿಯಾಗಿ ೯ ಹೆಜ್ಜೆಗಳು ಸಂದಿವೆ. ಅಕ್ಟೋಬರ್ ೩೦ ರಂದು ಪುಸ್ತಕ ಪರಿಷೆಯಲ್ಲಿ ನಡೆದ ವಾಕ್ಪಥ ಗೋಷ್ಠಿ ಎಂಟನೆ ಹೆಜ್ಜೆ ಆಗಿತ್ತು. ನಂತರದ ಗೋಷ್ಠಿ ಅಂದರೆ ವಾಕ್ಪಥ ಹೆಜ್ಜೆ ೯ ನೆನ್ನೆ ಅಂದರೆ ೧೩-೧೧-೨೦೧೧ ರಂದು ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ಅದರ ಒಂದು ಸಣ್ಣ ವರದಿ.
೯ನೆ ಹೆಜ್ಜೆಯ ನಿರ್ವಾಹಕರು - ಶ್ರೀಯುತ ರಾಮ ಮೋಹನ್ ಅವರು
ಮೊದಲ ಭಾಷಣಕಾರರು - ಶ್ರೀಯುತ ಸುನೀಲ್ ದಾಸಪ್ಪನವರು
ಮೊದಲ ಭಾಷಣದ ವಿಮರ್ಶಕಾರರು - ಶ್ರೀಯುತ ಪ್ರಭುನಂದನ ಮೂರ್ತಿ ಅವರು
ಎರಡನೆಯ ಭಾಷಣಕಾರರು - ಶ್ರೀಯುತ ರಘು ಎಸ್.ಪಿ ಅವರು
ಎರಡನೆಯ ಭಾಷಣದ ವಿಮರ್ಶಕಾರರು - ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು
ಆಶುಭಾಷಣ ನಿರ್ವಾಹಕರು - ಶ್ರೀಯುತ ಪಾರ್ಥಸಾರಥಿಯವರು
ಸಮಯ ಪರಿಪಾಲಕರು - ಶ್ರೀಯುತ ಜಯಂತ್ ರಾಮಾಚಾರ್
ಉಪಸ್ಥಿತರು - ಶ್ರೀಯುತ ಪ್ರಭುನಂದನ ಮೂರ್ತಿಯವರು, ಶ್ರೀಯುತ ಬೆಳ್ಲಾಲ ಗೋಪಿನಾಥರಾಯರು, ಹೊಸ ಪಥಿಕರು - ಶ್ರೀಯುತ ಸಚೆತನ್ ಭಟ್ ಹಾಗೂ ಶ್ರೀಮತಿ ಪದ್ಮಶ್ರೀ ಮೂರ್ತಿ.
ಸ್ಥಳ - ಸೃಷ್ಟಿ ವೆಂಚರ್ಸ್
ಸಮಯ - ೧೦-೧೫
ಸರಿಯಾದ ಸಮಯಕ್ಕೆ ಆಗಮಿಸಿದ್ದ ಪಥಿಕರನ್ನು ಸ್ವಾಗತಿಸುವ ಮೂಲಕ ನಿರ್ವಾಹಕರಾದ ರಾಮ್ ಮೋಹನ್ ಅವರು ಗೋಷ್ಟಿಗೆ ಚಾಲನೆ ನೀಡಿ ಅಂದಿನ ಕಾರ್ಯಕ್ರಮಗಳ ವಿವರ ನೀಡಿ ಸಮಯ ಪರಿಪಾಲಕರಾದ ಜಯಂತ್ ಅವರನ್ನು ತಮ್ಮ ಪಾತ್ರದ ಬಗ್ಗೆ ವಿವರಿಸಲು ವೇದಿಕೆಗೆ ಆಹ್ವಾನಿಸಿದರು. ಸಮಯ ಪರಿಪಾಲಕನ ಪಾತ್ರ ನಿರ್ವಹಿಸಿದ್ದ ಜಯಂತ್ ಅವರು ವೇದಿಕೆಗೆ ಬಂದು ತಮ್ಮ ಪಾತ್ರದ ಬಗ್ಗೆ ವಿವರಿಸಿ ಪ್ರತಿಯೊಬ್ಬರಿಗೂ ಎಷ್ಟೆಷ್ಟು ಸಮಯಾವಕಾಶ ಇದೆ ಎಂಬುದನ್ನು ತಿಳಿಸಿದರು. ಅದರ ಪ್ರಕಾರ ಪ್ರತಿಯೊಬ್ಬ ಭಾಷಣಕಾರರಿಗೆ ೧೦ ನಿಮಿಷದ ಕಾಲಾವಧಿ ಇರುತ್ತದೆ. ಎಂಟು ನಿಮಿಷಗಳ ನಂತರ ಹಸಿರು ಬಾವುಟ, ಒಂಭತ್ತನೇ ನಿಮಿಷಕ್ಕೆ ಹಳದಿ ಬಾವುಟ ಹಾಗೂ ಹತ್ತನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸಲಾಗುವುದು. ಹಾಗೆ ವಿಮರ್ಶಕರಿಗೆ ಮೂರು ನಿಮಿಷದ ಕಾಲಾವಧಿ ಇರುತ್ತದೆ. ಎರಡು ನಿಮಿಷಕ್ಕೆ ಹಸಿರು, ಎರಡೂವರೆ ನಿಮಿಷಕ್ಕೆ ಹಳದಿ ಹಾಗೆ ಮೂರನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸಲಾಗುವುದು. ನಂತರದಲ್ಲಿ ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ಎರಡು ನಿಮಿಷಗಳ ಅವಧಿ ಇರುತ್ತದೆ. ಒಂದನೇ ನಿಮಿಷಕ್ಕೆ ಹಸಿರು, ಒಂದೂವರೆ ನಿಮಿಷಕ್ಕೆ ಹಳದಿ ಹಾಗೂ ಎರಡನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸಲಾಗುತ್ತದೆ. ಇದರ ಉದ್ದೇಶ ಭಾಷಣಕಾರರ ಮಾತಿಗೆ ತಡೆ ಒಡ್ಡುವುದಲ್ಲ ಬದಲಿಗೆ ನಿಗದಿತ ಸಮಯದಲ್ಲಿ ಎಷ್ಟು ಪ್ರಭಾವಶಾಲಿಯಾಗಿ ಹಾಗೂ ಕ್ಲುಪ್ತವಾಗಿ ವಿಷಯ ಮಂಡಿಸುತ್ತಾರೆ ಎಂಬುದನ್ನು ತಿಳಿಸಲು ಅಷ್ಟೇ.
ಮೊದಲನೇ ಭಾಷಣ - ಶ್ರೀಯುತ ಸುನೀಲ್ ದಾಸಪ್ಪನವರು - ವಿಷಯ - ಖಗೋಳ ಶಾಸ್ತ್ರ
ಶ್ರೀಯುತ ಸುನೀಲ್ ಅವರು ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಸುನೀಲ್ ಅವರು ತಮ್ಮ ಭಾಷಣ ಶುರು ಮಾಡುತ್ತಾ ಅವರಿಗೆ ಬಹಳ ನೆಚ್ಚಿನ ವಿಷಯ ಹಾಗೂ ಆಸಕ್ತಿದಾಯಕ ವಿಷಯ ಖಗೋಳ ಶಾಸ್ತ್ರ ಎನ್ನ್ನುವುದನ್ನು ತಿಳಿಸಿ ಅದರಿಂದ ಅವರು ಇಂದು ಈ ವಿಷಯವನ್ನು ಆಯ್ದುಕೊಂಡಿರುವುದಾಗಿ ತಿಳಿಸಿಕೊಟ್ಟರು. ವಿಶ್ವದ ಉಗಮ ಹೇಗೆ? ನಾವೆಲ್ಲಾ ಎಲ್ಲಿಂದ ಬಂದೆವು? ನಾವು ಈಗ ವಿಶ್ವದಲ್ಲಿ ಯಾವ ಭಾಗದಲ್ಲಿದ್ದೇವೆ? ಹೀಗೆ ಮುಂತಾದ ಪ್ರಶ್ನೆಗಳು ಕಾಡುತ್ತವೆ. ಕೆಲವರ ಪ್ರಕಾರ ನಾವು ವಿಶ್ವದ ಮಧ್ಯಭಾಗದಲ್ಲಿದ್ದೇವೆ ಎಂದಾದರೆ ಇನ್ನು ಕೆಲವರ ವಾದ ನಾವು ವಿಶ್ವದ ಅಂತ್ಯ ಭಾಗದಲ್ಲಿದ್ದೇವೆ ಎಂದು. ಆದರೆ ನಾವು ವಿಶ್ವದ ಮಧ್ಯ ಹಾಗೂ ಅಂತ್ಯದ ನಡುವೆ ಇದ್ದೇವೆ. ವಿಶ್ವದ ಉಗಮ "ಬಿಗ್ ಬ್ಯಾಂಗ್" ಥಿಯರಿ ಪರ್ಕಾರ ಆಗಿದೆ ಎನ್ನತ್ತಾರೆ. ವಿಶ್ವದ ವಿಸ್ತಾರ ಬೆಳಕಿನ ವೇಗದಲ್ಲಿ ಆಗುತ್ತಿದೆಯೇ? ಬ್ಲಾಕ್ ಹೋಲ್ಸ್, "General Theory of ರೆಳತಿವಿಟಿ" Steven Hawkins ನ ಆವಿಷ್ಕಾರಗಳು, Hawkins Radiation , Dark Matters ಇನ್ನೂ ಮುಂತಾದ ಕುತೂಹಲಕಾರಿ ಮತ್ತು ಆಶ್ಚರ್ಯದಾಯಕ ವಿಷಯಗಳನ್ನು ಸುನೀಲ್ ಅವರು ತಿಳಿಸಿಕೊಟ್ಟರು. ಸುನೀಲ್ ಅವರು ತಮ್ಮ ಭಾಷಣಕ್ಕೆ ತೆಗೆದುಕೊಂಡ ಸಮಯ ೧೦ ನಿಮಿಷ ೨೦ ಸೆಕೆಂಡ್ ಗಳು. ಇವರ ಭಾಷಣದ ವಿಮರ್ಶಕರಾಗಿ ಬಂದು ಪ್ರಭು ಅವರು ಸುನೀಲ್ ಅವರ ಭಾಷಣದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರ ಭಾಷಣದ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ತಿಳಿಸಿಕೊಟ್ಟರು. ಇವರು ತೆಗೆದುಕೊಂಡ ಸಮಯ ೩ ನಿಮಿಷ ೧೪ ಸೆಕೆಂಡ್ ಗಳು.
ಎರಡನೆಯ ಭಾಷಣ - ಶ್ರೀಯುತ ರಘು ಎಸ್.ಪಿ ಅವರು - ವಿಷಯ - ಇಂದಿನ ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು.
ಶ್ರೀಯುತ ರಘು ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಜನಪದ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಉಳ್ಳವರಾಗಿದ್ದಾರೆ. ವಾಕ್ಪಥದ ಒಂದು ಮುಖ್ಯ ಅಂಗವಾಗಿದ್ದಾರೆ. ಹಾಗೆ ಇವರು ಒಂದು ಸಮಾಜ ಸೇವಾ ಸಂಸ್ಥೆಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
"ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಹ, ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುಭ್ಯೋ ನಮಃ" ಈ ಶ್ಲೋಕದಿಂದ ತಮ್ಮ ಭಾಷಣ ಶುರು ಮಾಡಿದ ರಘು ಅವರು ಮನುಷ್ಯನ ಬದುಕನ್ನ್ನು ಕಟ್ಟಿಕೊಡುವುದು ಶಾಲೆಗಳು. ಬದುಕನ್ನು ಕಳಿಸುವುದು ಸಮಾಜ. ಈ ಕೆಲಸವನ್ನು ಇಂದಿನ ಶಾಲೆಗಳು ಹಾಗೂ ಶಿಕ್ಷಕರು ನಿಜವಾಗಿಯೂ ಮಾಡುತ್ತಿದ್ದಾರ? ಒಂದು ಐದನೇ ತರಗತಿಯ ಮಗುವಿಗೆ ಶಿಕ್ಷಕಿ ಏಸುಕ್ರಿಸ್ತ ಶ್ರೀಮಂತ ದೇವರು ಎಂದು ಹೇಳುತ್ತಾಳೆ. ದೇವನೊಬ್ಬ ನಾಮ ಹಲವು ಎಂದು ತಿಳಿಸಬೇಕಾದ ಮಕ್ಕಳಿಗೆ ಇದೇನಾ ಮಕ್ಕಳಿಗೆ ಭೋಧಿಸುವುದು? ಸಾಮಾಜಿಕ ಅಸಮಾನತೆ ಉಂಟುಮಾಡುತ್ತಿದ್ದಾರೆ. CBSE , ICSE ಶಾಲೆಗಳಲ್ಲಿ ಇರುವ ಶಿಕ್ಷಕರು ನಿಜವಾಗಿಯೂ ವಿದ್ಯಾರ್ಜನೆ ಮಾಡುವ ವಿದ್ಯಾರ್ಹತೆ ಹೊಂದಿರುತ್ತಾರೆಯೇ. ಇತ್ತೀಚಿನ ದಿನಗಳಲ್ಲಿ ನಿರರ್ಗಳವಾಗಿ ಆಂಗ್ಲ ಮಾತಾಡಿದರೆ ಸಾಕು ಶಿಕ್ಷಕನಾಗಬಲ್ಲ. ಇಂಥಹ ಶಿಕ್ಷಕರು ಸಮಾಜಕ್ಕೆ ಎಂಥಹ ವಿದ್ಯಾರ್ಥಿಗಳನ್ನು ಕೊಡಬಲ್ಲರು? ಪೇಟೆಯ ಮಕ್ಕಳನ್ನು ರಜೆಗೆಂದು ಹಳ್ಳಿಗೆ ಕಲಿಸುವ ಕಾಲವೊಂದಿತ್ತು. ಈಗ ಆ ಪರಿಸ್ಥಿತಿ ಬದಲಾಗಿದೆ ಎಂಬುದನ್ನು ಉದಾಹರಣೆ ಸಮೇತ ತಿಳಿಸಿದರು. ಹಾಗೆಯೇ ಇಂದಿನ ಮಕ್ಕಳು ಶಾಲೆಯಲ್ಲಿ ಏನೇ "Assignment " ಕೊಟ್ಟರು ಅದಕ್ಕೆ ಉತ್ತರವನ್ನು ಪ್ರಾಯೋಗಿಕವಾಗಿ ಅರಿತು ಉತ್ತರಿಸುವ ಬದಲು ಎಲ್ಲದಕ್ಕೂ "ಗೂಗಲ್" ಮಾಮನನ್ನು ಮೊರೆಹೊಗುತ್ತಿರುವುದು ವಿಷಾದಕಾರ ಎಂಬುದನ್ನು ಸಹ ಉದಾಹರಣೆ ಸಮೇತ ತಿಳಿಸಿಕೊಟ್ಟರು.
ರಘು ಅವರು ತಮ್ಮ ಭಾಷಣಕ್ಕೆ ತೆಗೆದುಕೊಂಡ ಸಮಯ ೧೦ ನಿಮಿಷ ೨೦ ಸೆಕೆಂಡ್ ಗಳು. ಇವರ ಭಾಷಣವನ್ನು ವಿಮರ್ಶಿಸಲು ಬಂದ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ರಘು ಅವರ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾವು ರಘು ಅವರ ಭಾಷಣಕ್ಕೆ "ಬೀಸಣಿಗೆ" ಎಂದು ತಿಳಿಸಿ ಎಲ್ಲರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದರು. ಇವರು ತೆಗೆದುಕೊಂಡ ಸಮಯ ೩ ನಿಮಿಷ ೨೧ ಸೆಕೆಂಡ್ ಗಳು.
ನಂತರ ಆಶುಭಾಷಣದ ನಿರ್ವಹಣೆ ಹೊತ್ತ ಶ್ರೀಯುತ ಪಾರ್ಥಸಾರಥಿಯವರು ನಾಲ್ಕು ಜನರನ್ನು ಆಯ್ದು ಒಬ್ಬೊಬ್ಬರಿಗೆ ಒಂದೊಂದು ವಿಷಯವನ್ನು ಕೊಟ್ಟರು
ಮೊದಲಿಗೆ ಶ್ರೀಯುತ ಪ್ರಭುನಂದನ ಮೂರ್ತಿಯವರು ಆಗಮಿಸಿ "ವಾಕ್ಪಥ ನಡೆದು ಬಂದ ದಾರಿ- ಅದರ ಹಿಂದಿರುವ ಚಾಲನಾ ಶಕ್ತಿಯ" ಬಗ್ಗೆ ೨ ನಿಮಿಷ ೦೯ ಸೆಕೆಂಡ್ ಗಳಲ್ಲಿ ವಿವರಿಸಿದರೆ ನಂತರ ಬಂದ ಬೆಳ್ಳಾಲ ಗೋಪಿನಾಥರಾಯರು "ಪುಸ್ತಕ ಪರಿಷೆಯಲ್ಲಿನ ವಾಕ್ಪಥ ಎಂಟನೆಯ ಹೆಜ್ಜೆ" ಬಗ್ಗೆ ೨ ನಿಮಿಷ ೧೦ ಸೆಕೆಂಡ್ ಗಳಲ್ಲಿ ವಿವರಿಸಿದರು. ನಂತರ ಬಂದ ಸುನೀಲ್ ದಾಸಪ್ಪನವರು "ವಾಕ್ಪಥಕ್ಕೆ ವ್ಯಾಕರಣ ಶುದ್ಧಿ - ಭಾಷಾ ಶುದ್ಧಿ ಅವಶ್ಯವೇ" ಎನ್ನುವ ವಿಷಯದ ಬಗ್ಗೆ ೧ ನಿಮಿಷ ೨೯ ಸೆಕೆಂಡ್ ಗಳಲ್ಲಿ ವಿವರಿಸಿದರೆ ನಂತರ ಬಂದ ರಘು ಅವರು "ವಾಕ್ಪಥದ ಬೆಳವಣಿಗೆ ಹೇಗೆ" ಎನ್ನುವುದರ ಬಗ್ಗೆ ೨ ನಿಮಿಷ ಹದಿನೇಳು ಸೆಕೆಂಡ್ ಗಳಲ್ಲಿ ವಿವರಿಸಿದರು.
ನಂತರದಲ್ಲಿ ಹೊಸಬರ ಅಭಿಪ್ರಾಯ ಮತ್ತು ಅನಿಸಿಕೆಯಲ್ಲಿ ಮಾತಾಡಿದ ಶ್ರೀಯುತ ಸಚೇತನ್ ಭಟ್ ಹಾಗೂ ಪದ್ಮಶ್ರೀ ಅವರು ವಾಕ್ಪಥದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ತಾವೂ ಸಹ ವಾಕ್ಪಥದ ಖಾಯಂ ಸದಸ್ಯರಾಗುವ ಅಭಿಲಾಷೆ ಹೊಂದಿರುವುದಾಗಿ ತಿಳಿಸಿಕೊಟ್ಟರು.
ಇಲ್ಲಿಗೆ ವಾಕ್ಪಥದ ೯ನೆ ಹೆಜ್ಜೆಗೆ ಅಧಿಕೃತ ಮುಕ್ತಾಯವಾಯಿತು. ಮತ್ತೆ ಭೇಟಿ ಮಾಡೋಣ ಹತ್ತನೇ ಹೆಜ್ಜೆಯಲ್ಲಿ. ಹತ್ತನೇ ಹೆಜ್ಜೆಯ ವಿವರಗಳು ಅತಿ ಶೀಘ್ರದಲ್ಲಿ ಮೂಡಿಬರಲಿದೆ. ವಾಕ್ಪಥಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
ಕೊನೆಯದಾಗಿ ನೆನ್ನೆ ವಾಕ್ಪಥ ಮುಗಿಸಿಕೊಂಡು ಬರುವಾಗ ವಾಕ್ಪಥಕ್ಕೆ ಒಂದು ಅಡಿಬರಹ ಇದ್ದರೆ ಹೇಗೆಂದು ಆಲೋಚಿಸುತ್ತಿರುವಾಗ ಇದು ಹೊಳೆಯಿತು {ವಾ - ವಾಚಿಸುವ, ಕ - ಕಲೆಯನ್ನು, ಪ - ಪರಿಪಕ್ವಗೊಳಿಸುವ, ಥ/ತ - ತಾಣ}
ಧನ್ಯವಾದಗಳು

Wednesday 2 November, 2011

ತುಂತುರು ಇಲ್ಲಿ ಪುಸ್ತಕ ರಾಗ.. ಪುಸ್ತಕ ಪರಿಷೆಯ ಝಲಕ್ ...

ತುಂತುರು ಇಲ್ಲಿ ಪುಸ್ತಕ ರಾಗ..

ನಿನ್ನೆ ಬಾನುವಾರ ೩೦-೧೦-೨೦೧೧ ರಂದು ಪುಸ್ತಕ ಪರಿಷೆ ನಡೆಯಿತು, ನಾನು ಹಿಂದೆಲ್ಲ  ಈ ರೀತಿ ಕಾರ್ಯಕ್ರಮ ಹೋಗಿರುವುದು ಅಪರೂಪವೆ ಆದರೆ ಈ ಬಾರಿ ಪೂರ್ತಿ ಸಮಯ ಅಲ್ಲೆ ಇರುವ ಅವಕಾಶ ಒದಗಿ ಬಂತು. ಅದು ವಾಕ್ಪಥಿಕರ ಸಹವಾಸದಿಂದಾಗಿ (!). ಹೊರಡುವಾಗಲೆ ಮೋಡ ಮೋಡ, ನಿನ್ನೆ ಬಿದ್ದಿದ್ದ ಮಳೆಯ ಪ್ರಭಾವ ಪೂರ್ತಿ ಕಡಿಮೆಯಾಗಿರಲಿಲ್ಲ. ತುಂತುರು ಮಳೆ ತನ್ನ ತುಂಟಾಟ ಮುಂದುವರೆಸಿತ್ತು . ಹೇಗು ಇರಲಿ ಎಂದು ರೈನ್ ಕೋಟನ್ನು ಜೊತೆಯಲ್ಲಿ ಇಟ್ಟುಕೊಂಡೆ 'ಸೃಷ್ಟಿ' ತಲುಪಿದೆವು ನಾನು ಮತ್ತು ರಾಮಮೋಹನ . ಅಲ್ಲಿಯೆ ಗಾಡಿ ನಿಲ್ಲಿಸಿ ನಡೆಯುತ್ತ ಪರಿಷೆಯ ಸ್ಥಳ ವಾಲಿಬಾಲ್ ಮೈದಾನ ತಲುಪುವಾಗಲೆ ಮಳೆಯ ತುಂತುರು, ಮನದಲ್ಲಿ ಎಂತದೊ ಆತಂಕ ಈ ಮಳೆರಾಯ ಪುಸ್ತಕ ಪರಿಷೆ ನಡೆಯಲು ಬಿಡುವನೆ!!
..............................................................................-----------------------------------------------------...

ಅಲ್ಲಿ ತಲುಪುವಾಗಲೆ ಬಹಳಷ್ಟು ಸಂಪದಿಗರ ಮುಖ ನೋಡುತ್ತ ಮನದಲ್ಲಿ ಹರುಷ ತುಂಬಿತು. ಮಂಜು, ರಘು , ಹರೀಶ್ , ಜಯಂತ್ , ಪ್ರಭು , ಕಿರಣ್ ಮತ್ತೆ ಒಂದಿಬ್ಬರು ಅಲ್ಲದೆ ಸೃಷ್ಟಿ ಕಲಾಲಯದ ಕೆಲವು ಮಂದಿ, ಅಲ್ಲದೆ ಜಂಬೆಹಾಡಿನ ಗುಂಪು. ನಮ್ಮವರನ್ನೆಲ್ಲ ಕಾಣುತ್ತ ಹತ್ತಿರ ಹೋಗಲು, ಒಬ್ಬೊಬ್ಬರನ್ನೆ ವಂದಿಸುತ್ತ ಹೋಗುತ್ತಿರುವಂತೆ, ಮದ್ಯೆ 'ಬುದ್ದಿಜೀವಿ'ಯ ಗಡ್ಡ ಬಿಟ್ಟಿದ್ದ ಯುವಕರೊಬ್ಬರು ಕೈ ನೀಡಿದರು, ಯಾರು ಎಂದು ತಿಳಿಯದಿದ್ದರು, ನಾನು ನನ್ನ ಪರಿಚಯ ಹೇಳಿ ಕೈ ನೀಡಿದೆ, ಎಲ್ಲರನ್ನು ಮಾತನಾಡಿಸುತ್ತಿದ್ದಂತೆ, ನಗುತ್ತ ಆ ಯುವಕ ನುಡಿದರು, 'ನಾನು ಸತ್ಯ ಚರಣ್'  ಮುಖ ನೋಡುತ್ತಿರುವಂತೆ ಅಂದರು  'ಯಾಕೆ ಶಾಕ್ ಆಯಿತ?"
----------------------------------------------------------------------------------------------------------





ನಿಜವೆ ನಾನು ಸ್ವಲ್ಪ ಮಾತ್ರ ಶಾಕ್ ಆಗಿದ್ದೆ ಕಾರಣವಿತ್ತು, ಸಂಪದದ ಪ್ರೊಫೈಲ್ ನಲ್ಲಿ ಅವರ ಚಿತ್ರ ನೋಡಿ ನಾನು ಸ್ವಲ್ಪ ಕಪ್ಪನೆಯ ಗುಂಡು ಗುಂಡಾದ ವ್ಯಕ್ತಿಯೊಬ್ಬರನ್ನು ಕಲ್ಪಿಸಿಕೊಂಡಿದ್ದೆ, ಇಲ್ಲಿ ಸತ್ಯಚರಣ್ ಅದಕ್ಕೆ ವಿರುದ್ದವಿದ್ದರು, ಸ್ವಲ್ಪ ಗಡ್ಡಬಿಟ್ಟ ಕೆಂಪನೆಯ ಸುಂದರ ಯುವಕ ಅವರು. ಬಹುಷ: ಬರಹದ ಮೂಲಕ ಅವರ ರೂಪವನ್ನು ಗುರುತಿಸುವುದು ಕಷ್ಟವೇನೊ. ಶ್ರೀಹರ್ಷ ಸಾಲಿಮಠರು ಸಹ ನನ್ನ ನಿರೀಕ್ಷೆಗೆ ವಿರುದ್ದವಾಗಿದ್ದರು, ಅವರ ಬರಹ ಗಮನಿಸಿ ನಾನು ಸ್ವಲ್ಪ ಖಡಕ್ ಆದ ಎಂತದೊ ಸ್ವರೂಪ ನನ್ನ ಮನದಲ್ಲಿತ್ತು ಆದರೆ ಎದುರಿಗೆ ನೋಡುವಾಗ ತುಂಬಾ ಸೌಮ್ಯ ಮುಖಭಾವದವರು.
ವರ್ಣಚಿತ್ರ:  ಸತ್ಯಚರಣರ ಪ್ರೋಪೈಲ್ ಹಾಗು ಗೋಪಿನಾಥರಾಯರ ಚಿತ್ರಗಳಿಂದ ತೆಗೆದಿರುವುದು
--------------------------------------------------------------------------------------------------------
 ಅಷ್ಟರಲ್ಲಿ ರಘು ಮುಳಿಯರು ಬಂದರು.ಹಾಗೆ ಆಸುರವರ ಆಗಮನವಾದಂತೆ ಎಲ್ಲ ವಾಕ್ಪಥಿಕರು ಎದ್ದು ಸಂಭ್ರಮದಿಂದ ಸ್ವಾಗತಿಸಿದರು. ಕಾರ್ಯಕ್ರಮ ನಡೆದಿರುವಂತೆ ಶ್ಯಾಮಲ ಜನಾರ್ದನನ್ ರವರ ಆಗಮನವಾಯಿತು.
ಮಳೆಯ ಲಕ್ಷಣಗಳೆಲ್ಲ ಕರಗಿಹೋಗಿ, ಲಕ್ಷಣವಾಗಿ ಬಿಸಿಲು ತುಂಬಿತು. ನನಗೆ ಮನದಲ್ಲಿ ಸಂತಸ ಎನಿಸಿತು, ಅಂದು ಕೊಂಡೆ ಮಳೆರಾಯ ದ್ವೇಷಿಸಲು ಪುಸ್ತಕ ಪರಿಷೆಯೇನು ಕ್ರಿಕೇಟ್ ಆಟವೆ !! ಮೂರ್ಖರ ಆಟ ಹಾಗಾಗಿ ಮಳೆರಾಯನಿಗೆ ಆಗಲ್ಲ ಅಂದುಕೊಂಡೆ ನೋಡಿ! ಎಡಕಿವಿಯ ಮೇಲೆ ಏನೊ ಅಪ್ಪಳಿಸಿತು, ದೇಹವೆಲ್ಲ ಜೂಂ ಎಂದಿತು, ಕಿವಿ ಮುಖವೇಕೊ ಕೆಂಪೇರಿತು, ಏನಾಯಿತು ಅಂತ ಆರ್ಥವಾಗಿತ್ತು, ಪರಿಷೆಯ ಪಕ್ಕದ ಮೈದಾನದಲ್ಲಿ ಕ್ರಿಕೇಟ್ ಆಡುತ್ತಿದ್ದ ಹುಡುಗರಲ್ಲಿ ಯಾರೊ ಒಬ್ಬ ಸಿಕ್ಸರ್ ಎತ್ತಿದ್ದ , ಆ ಚೆಂಡು ನೇರವಾಗಿ ಬಂದು ನನ್ನ ಎಡಕಿವಿಯನ್ನು ಅಪ್ಪಳಿಸಿತು, ನನಗೆ ಕೋಪ ಬಂದಿತು, ತಕ್ಷಣ ಬಗ್ಗಿ ಚೆಂಡನು ಹಿಡಿದು ಕುಳಿತು ಬಿಟ್ಟೆ, ಚೆಂಡು ಹಿಂದಿರುಗಿಸಿದರೆ ಆವರ ಆಟ ನಿಲ್ಲಿಸುವುದಿಲ್ಲ ಮಾತ್ಯಾರಾದರು ಆ ಹೊಡೆತಕ್ಕೆ ಬಲಿಯಾದರೆ ಎಂದು. ಬಹುಷಃ ನಾನು ಕ್ರಿಕೇಟನ್ನು ಮೂರ್ಖರ ಆಟ ಅಂದಿದ್ದು ಕ್ರಿಕೇಟ್ ದೇವತೆಗೆ ಕೇಳಿಸಿತ್ತೇನೊ.
---------------------------------------------------------------





  ರಘು ಮುಳಿಯರೊಂದಿಗೆ ಒಂದು ಸುತ್ತು ಹೊರಗೆ ಹೋಗಿ ಹೀಗೆ ಒಳಗೆ ಬಂದೆ, ಮತ್ತೆ ಒಂದು ತುರ್ತು ಏರ್ಪಟ್ಟಿತ್ತು, ಏನು ಕಾರಣವೊ ಮಂಜುರವರು ಯಾವುದೊ ಕರೆಯ ಮೇರೆಗೆ ಮನೆಗೆ ಹೊರಟು ಹೋಗಿದ್ದರು, ಹಾಗಾಗಿ ವಾಕ್ಪಥ ಎಂಟರ ವಿಮರ್ಷಕನ ಪಾತ್ರ ನಾನು ವಹಿಸ ಬೇಕಾಯಿತು, ಸಿದ್ದವಿಲ್ಲದೆ ಮಾಡಿದ ಪಾತ್ರ ಹೇಗೆ ಬಂತೊ ತಿಳಿಯಲಿಲ್ಲ, ತಪ್ಪಾಗಿದ್ದಲ್ಲಿ 'ಹರೀಶ್ ಆತ್ರೇಯರು' ಮನ್ನಿಸಬೇಕು.

-------------------------------------------------------------------------------------------------------

  ಹೀಗೆ ಆಸುರವರ ಪಕ್ಕ ಕುಳಿತು ಕಾರ್ಯಕ್ರಮ ನೋಡುತ್ತ , ಎಡಗಡೆ ಒಳಗೆ ಬರುತ್ತಿರುವ ಜನರನ್ನು ಗಮನಿಸುತ್ತಿದ್ದೆ, ಸಂತೋಷ ಎನಿಸುತ್ತಿತ್ತು, ಬೆಳಗ್ಗೆ ಸುಮಾರು ೧೦ ಘಂಟೆಗೆ ಪ್ರಾರಂಬವಾದ ಜನರ ಒಳಹರಿವು,ಸ್ವಲ್ಪವು ಕಡಿಮೆಯಾಗದೆ, ಒಂದೆ ಸಮ ಬರುತ್ತಲೆ ಇದ್ದರು, ಅಲ್ಲಿ ಶಾರುಕ್ ಖಾನ್ ಇಲ್ಲ, ಯಾವುದೆ ಚಿತ್ರ ನಟಿಯರಾಗಲಿ, ರಾಜಕೀಯದವರಾಗಲಿ ಇಲ್ಲ ಆದರು ಜನ ಬರುತ್ತಿರುವುದು ಬರಿ 'ಪುಸ್ತಕ' ಗಳನ್ನು ನೋಡಲು, ನಿಜಕ್ಕು ಸಂತೋಷ ಕೊಡುವ ಸಂಗತಿ ಅಲ್ಲವೆ !!!, , ಛೇ! ಯಾರಾತ ನನಗೆ ಅವನನ್ನು ಆರು ಏಳು ಸಾರಿ ನೋಡಿದಂತೆ ಅನ್ನಿಸುತ್ತಿದೆ, ಹೀಗೆ ಒಳಗೆ ಬರುತ್ತ  ಮೊದಲ ಸಲ ನೋಡಿದಾಗ ಕೈಯಲ್ಲಿ ಕಡಿಮೆ ಎಂದರು ಆರು ಏಳು ಪುಸ್ತಕ ಹಿಡಿದು ಹೊರನಡೆದಿದ್ದ ಅನ್ನಿಸಿತು, ಒಬ್ಬರಿಗೆ ಒಂದೆ ಪುಸ್ತಕ ಅಂತ ನಿಯಮವಿದ್ದರು ಸಹ. ಆದರೆ ಅನುಮಾನ ಎನಿಸಿದ್ದು ಆತನನ್ನು ನೋಡುವಾಗ ಪುಸ್ತಕ ಓದುವನು , ಓದುವದಕ್ಕಾಗಿ ಪುಸ್ತಕ ತೆಗೆದು ಕೊಂಡು ಹೋಗುತ್ತಿದ್ದಾನೆ ಅನ್ನಿಸುತ್ತಿಲ್ಲವಲ್ಲ ಪಕ್ಕದಲ್ಲಿ ಆಸುರವರಿಗೆ ತಿಳಿಸಿದೆ.

------------------------------------------------------------------------------------------------------------

ಸ್ವಲ್ಪ ಗಮನಿಸಿದರೆ ಅವನು ಪುಸ್ತಕಗಳನ್ನು ಅವನು ತನ್ನ ಪ್ಯಾಂಟಿನ ಜೋಭಿನಲ್ಲಿ, ಶರ್ಟಿನ ಒಳಗೆ ಹೊಟ್ಟೆಯಲ್ಲಿ ಸೇರಿಸುತ್ತಿದ್ದ, ಅವನ ಪಕ್ಕ ನಿಂತು, ಆಸುರವರೆ 'ಒಬ್ಬರಿಗೆ ಒಂದೆ ಪುಸ್ತಕ' ಎಂದರು, ಅದಕ್ಕವನು 'ಒಂದೆ ನೋಡಿ ' ಎಂದು ಕೈ ತೋರಿಸಿದ, ಅವನ ಪ್ಯಾಂಟಿನ ಜೇಬನ್ನು ಬಡಿದು, ಇದೇನು ಎಂದರು. ಅವನು ಸ್ವಲ್ಪ ಕನ್ಫೂಸ ಆದ 'ಜೇಬಿನಿಂದ ಇನ್ನೊಂದು ಪುಸ್ತಕ ಹೊರತೆರೆದ 'ಹಸುಗಳನ್ನು ಸಾಕುವ ಬಗೆ'. ಸಾರ್ ಹಸುಗಳನ್ನು ಸಾಕುವ ವಿಷಯ ಅದಕ್ಕೆ ಇಟ್ಟಿದ್ದೆ ಎಂದ. ನಮಗೆ ನಗು. ಸರಿ ಹೇಗೆ ಆ ಕಡೆ ಸರಿದು ಹೊರಟು ಹೋದ. ಮತ್ತೆ ಅವನು ಬಂದಿದ್ದು ಕಾಣಲಿಲ್ಲ. ನನಗೆ ಆನಿಸಿದ್ದು 'ಗಾಂಧಿ ಭಜಾರಿನ ರಸ್ತೆ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕ' ಸಂಗ್ರಹಕಾರರಿಗೆ ಇಲ್ಲಿಂದ ಕೆಲವರಾದರು ಪುಸ್ತಕಗಳನ್ನು ಕೊಂಡೋಯ್ದು ತಲುಪಿಸುತ್ತಿದ್ದಾರ ಎಂದು.

-------------------------------------------------------------------------------------------------------

ವರ್ಣಚಿತ್ರ: ಜಯಂತರ ಪೇಸ್ಬುಕ್ ಪೇಜಿನಿಂದ ಕದ್ದಿರುವುದು

ಸರಿ ಹೇಗೊ ಅಂತು ಪರಿಷೆಯ ಕಡೆಯ ಹಂತಕ್ಕೆ ಬಂದು, ಎಲ್ಲ ಕಾರ್ಯಕ್ರಮಗಳೆಲ್ಲ ಮುಗಿದವು. ವಂದನಾರ್ಪಣೆಗಳೆಲ್ಲ ಮುಗಿದು ಎಲ್ಲರು ಹೊರಡುತ್ತೇವೆ ಅನ್ನುವಾಗ ಒಂದು ಕಾಫಿ ಜೊತೆ ಏಕೆ ದಿನವನ್ನು ಮುಗಿಸಬಾರದು ಅಂದವರು 'ರಘು ಎಸ್.ಪಿ.' ಸರಿ ಎಲ್ಲ ಕಪ್ಪೆಗಳನ್ನು ಒಟ್ಟುಗೂಡಿಸಿ, ಪುಳಿಯೋಗರೆ ಪಾಯಿಂಟ್ ತಲುಪಿದೆವು. ಕಾಫಿ ಎಂದವರು ಜೊತೆಗು ಪಕೋಡವನ್ನು ಹೇಳಿದರು, ಎಲ್ಲರು ನಗುತ್ತ, ಹರಟುತ್ತ ಮುಗಿಸಿದರು.
ಒಬ್ಬರಿಗೊಬ್ಬರು ವಿದಾಯ ಹೇಳುತ್ತ ಹೊರಡುವಾಗ, ಬೆಳಗಿನಿಂದ ವಿರಾಮಕೊಟ್ಟಿದ್ದ 'ಮಳೆರಾಯ' ತನ್ನ ಆರ್ಭಟ ಪ್ರಾರಂಬಿಸಿದ

ವರದಿ ಶ್ರೀ ಪಾರ್ಥ ಸಾರಥಿ

ಪುಸ್ತಕ ಪರಿಷೆಯ ಯಶಸ್ಸಿನಲ್ಲಿ ವಾಕ್ಪಥ/ವಾಕ್ಪಥಿಕರ ಪಾತ್ರ

ಸುಮಾರು ಒಂದೂವರೆ ತಿಂಗಳ ಹಿಂದೆ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ಏಳನೆಯ ಹೆಜ್ಜೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೃಷ್ಟಿ ವೆಂಚರ್ಸ್ ನ  ವ್ಯವಸ್ಥಾಪಕರಾದ ಶ್ರೀಯುತ ನಾಗರಾಜ್ ನಾವುಂದ ಅವರು ಅಕ್ಟೋಬರ್ ೩೦ ರಂದು ಹಮ್ಮಿಕೊಂಡಿರುವ "ಪುಸ್ತಕ ಪರಿಷೆ" ಯ ಬಗ್ಗೆ ತಿಳಿಸಿ ಅಂದಿನ ಸಂಪೂರ್ಣ ವೇದಿಕೆ ನಿರ್ವಹಣೆಯನ್ನು ವಾಕ್ಪಥ ತಂಡಕ್ಕೆ ವಹಿಸುತ್ತಿದ್ದೇನೆ ಎಂದು ಹೇಳಿದಾಗ ಎಲ್ಲ ವಾಕ್ಪಥಿಕರಿಗೂ ಸಂತೋಷದ ಜೊತೆಗೆ ಆಶ್ಚರ್ಯವೂ ಆಯಿತು.
ಕೇವಲ ಏಳು ಹೆಜ್ಜೆಗಳನ್ನು ಇಟ್ಟಿದ್ದ ವಾಕ್ಪಥಕ್ಕೆ ದೊರೆತ ಸುವರ್ಣಾವಕಾಶ ಈ ಪುಸ್ತಕ ಪರಿಷೆಯ ವೇದಿಕೆಯ ನಿರ್ವಹಣೆ.
ಒಂದು ಲಕ್ಷ ಪುಸ್ತಕ ಪ್ರದರ್ಶನ
ಒಬ್ಬೊಬ್ಬರಿಗೆ ಒಂದೊಂದು ಉಚಿತ ಪುಸ್ತಕ.
ಅನೇಕ ಗಣ್ಯ ಆಹ್ವಾನಿತರು.
ಬೆಳಗಿನಿಂದ ಸಂಜೆಯವರೆಗೂ ವೇದಿಕೆಯನ್ನು ಖಾಲಿ ಬಿಡಬಾರದು.
ಗಣ್ಯರ ಭಾಷಣಗಳು, ಮನರಂಜನೆಯ ಕಾರ್ಯಕ್ರಮಗಳು
ವಾಕ್ಪಥದ ಎಂಟನೆಯ ಗೋಷ್ಠಿ.
ಇವುಗಳಲ್ಲಿ ಮೊದಲೆರಡು ಬಿಟ್ಟರೆ ಉಳಿದೆಲ್ಲ ಜವಾಬ್ದಾರಿ ವಾಕ್ಪಥ ತಂಡದ ಮೇಲಿತ್ತು. ಬೆಳಗಿನಿಂದ ಸಂಜೆಯವರೆಗೂ ವೇದಿಕೆಯನ್ನು ಖಾಲಿ ಬಿಡದೆ ನೋಡಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಅದೂ ಅಲ್ಲದೆ ಒಂದು ಪುಸ್ತಕ ಮೇಳದಲ್ಲಿ ಬರುವ ಜನರು ಕೇವಲ ಪುಸ್ತಕ ಕೊಳ್ಳುವುದರಲ್ಲಿ ಆಸಕ್ತರಾಗಿರುತ್ತಾರೆ ಹೊರತು ವೇದಿಕೆಯ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ. ಹಾಗಾಗಿ ನೆರೆದಿರುವ ಪ್ರೇಕ್ಷಕರು ಪುಸ್ತಕ ಕೊಳ್ಳುವುದರ ಜೊತೆಗೆ ವೇದಿಕೆಯ ಕಡೆಗೂ ಗಮನ ಹರಿಸುವ ಹಾಗೆ ಕೆಲಸ ನಿರ್ವಹಿಸುವ ದೊಡ್ಡ ಸವಾಲು ವಾಕ್ಪಥ ತಂಡದ ಮುಂದಿತ್ತು.
ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ ವಾಕ್ಪಥ ತಂಡದ ಸದಸ್ಯರುಗಳಾದ ಶ್ರೀಯುತ ಪ್ರಭುನಂದನ ಮೂರ್ತಿ, ಶ್ರೀಯುತ ಬೆಲ್ಲಾಳ ಗೋಪಿನಾಥರಾಯರು, ಶ್ರೀಯುತ ಹೊಳೆನರಸಿಪುರ ಮಂಜುನಾಥರವರು, ಶ್ರೀಯುತ ರಘು ಎಸ.ಪಿ ಯವರು, ಶ್ರೀಯುತ ಹರೀಶ್ ಆತ್ರೇಯ ರವರು, ಶ್ರೀಯುತ ಪಾರ್ಥಸಾರಥಿಯವರು, ಹಾಗೂ ಶ್ರೀಯುತ ರಾಮ್ ಮೋಹನ್ ಅವರು ವಾರದಲ್ಲಿ ಸಿಗುತ್ತಿದ್ದ ಒಂದು ರಜಾ ದಿನವಾದ ಭಾನುವಾರದಲ್ಲಿ ಅರ್ಧ ದಿನ ಈ ಕೈಂಕರ್ಯದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸುವುದರಲ್ಲಿ ಮಗ್ನರಾದರು.
ಈ ಜವಾಬ್ದಾರಿ ಬಂದ ದಿನದಿಂದ ಸೃಷ್ಟಿಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು, ವಿಶೇಷ ಆಹ್ವಾನಿತರು, ಭಾಷಣಕಾರರು, ಮನರಂಜನೆ ಕಲಾವಿದರು ಇವರುಗಳ ವಿವರಗಳನ್ನು ಸಂಗ್ರಹಿಸಿ ಅದರ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ತಯಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಶ್ರೀಯುತ ಹರೀಶ್ ಆತ್ರೇಯ ಇವರ ಶ್ರಮ ಸಾಕಷ್ಟಿದೆ.
ಈ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬೆಳಗಿನಿಂದ ಸಂಜೆಯವರೆಗೂ ಯಾವ ಯಾವ ಕಾಲಾವಧಿಯಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಬೇಕು, ಉದ್ಘಾಟನೆ, ಗಣ್ಯರ ಭಾಷಣ, ಸಂಗೀತ ಕಾರ್ಯಕ್ರಮ,ವಾಕ್ಪಥ ಗೋಷ್ಠಿ, ವಿಶೇಷ ಆಹ್ವಾನಿತರ ಭಾಷಣ, ಚರ್ಚೆ/ಚಿಂತನೆ, ಜಂಬೆ(ವಿಶೇಷ ವಾದ್ಯ ಪರಿಕರ) ಕಾರ್ಯಕ್ರಮ, ಹಾಗೂ ಸಮಾರೋಪ ಇವಿಷ್ಟು ಕಾರ್ಯಕ್ರಮಗಳನ್ನು ಆಯಾ ಸಮಯಕ್ಕೆ ಹೊಂದಿಸುವಲ್ಲಿ ಎಲ್ಲ ವಾಕ್ಪಥಿಕರು ಪಾತ್ರ ವಹಿಸಿದ್ದಾರೆ.
ಅಂದಿನ ಕಾರ್ಯಕ್ರಮಕ್ಕೆ ಅವಶ್ಯವಿದ್ದ ಗುರುತಿನ ಚೀಟಿಗಳು, ವಾಕ್ಪಥದ ಆಶಯ ಹಾಗೂ ಉದ್ದೇಶಗಳನ್ನು ಒಳಗೊಂಡ ಫಲಕಗಳನ್ನು ವಿಶೇಷ ಕಾಳಜಿ ಮುತುವರ್ಜಿಯಿಂದ ಸುಂದರವಾಗಿ ತಯಾರು ಮಾಡುವುದರಲ್ಲಿ ಶ್ರೀಯುತ ರಘು ಎಸ. ಪಿ ಅವರು ವಿಶೇಷ ಪಾತ್ರ ವಹಿಸಿದ್ದಾರೆ.
ಅಂದಿನ ಕಾರ್ಯಕ್ರಮಕ್ಕೆ ವಿಶೇಷವಾಗಿ ಒಂದು ಮನರಂಜನೆಯ ಕಾರ್ಯಕ್ರಮ ಕೊಡುವ ನಿಟ್ಟಿನಲ್ಲಿ ರೂಪುಗೊಂಡಿದ್ದೆ "ಬಾಲ ವಾಕ್ಪಥ". ಪ್ರಸ್ತುತ ಹೇಗೆ ನಾವುಗಳು ಅಂದರೆ ಹಿರಿಯರು ವಾಕ್ಪಥವನ್ನು ನಡೆಸುತ್ತಿದ್ದೆವೋ ಅದೇ ರೀತಿಯಲ್ಲಿ ಮಕ್ಕಳಿಂದ ಒಂದು ವಾಕ್ಪಥ ಆಯೋಜಿಸುವ ಯೋಚನೆ ಬಂದದ್ದೆ ತಡ ಎಲ್ಲ ವಾಕ್ಪಥಿಕರು ಸಹಮತದಿಂದ ಒಪ್ಪಿಗೆ ಸೂಚಿಸಿದರು. ಇದಕ್ಕೆ ಅವಶ್ಯವಿದ್ದ ಪಥಿಕರನ್ನು ಒದಗಿಸುವಲ್ಲಿ ಸೃಷ್ಟಿಯ ವ್ಯವಸ್ಥಾಪಕರಲ್ಲಿ ಕೇಳಿದಾಗ ತಮ್ಮದೇ ಅನುಭವ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ನಮಗೆ ತೋರಿಸಿದರು. ನಮಗೆ ಉಳಿದಿದ್ದ ಎರಡೇ ವಾರದಲ್ಲಿ ಆ ಮಕ್ಕಳನ್ನು ತಯಾರು ಮಾಡುವುದರಲ್ಲಿ ಎಲ್ಲ ವಾಕ್ಪಥಿಕರ ಪಾತ್ರ ಅಮೋಘ (ಇದಕ್ಕೆ ಸಾಕ್ಷಿ ಕಾರ್ಯಕ್ರಮದಲ್ಲಿ ಅಧ್ಬುತ ಯಶಸ್ಸು ಕಂಡ ಬಾಲ ವಾಕ್ಪಥ)
ಇನ್ನುಳಿದಂತೆ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಲಹೆ, ಸೂಚನೆ ಬೆಂಬಲವನ್ನು ವ್ಯಕ್ತಪಡಿಸಿದ ಶ್ರೀಯುತ ಕಿರಣ್, ಶ್ರೀಯುತ ಅ.ಸು. ಹೆಗ್ಡೆ, ಶ್ರೀಯುತ ಸತ್ಯಚರಣ, ಶ್ರೀಯುತ ಶ್ರೀಹರ್ಷ ಸಾಲಿಮಟ್ ಪ್ರತಿಯೊಬ್ಬರಿಗೂ ವಾಕ್ಪಥ ತಂಡದ ಪರವಾಗಿ ಅನಂತಾನಂತ ಧನ್ಯವಾದಗಳು.
ಕೊನೆಯದಾಗಿ ಒಬ್ಬರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಬೇಕೆಂದರೆ ಅದು ಶ್ರೀಯುತ ಪ್ರಭುನಂದನ ಮೂರ್ತಿ ಅವರಿಗೆ. ಅಮೇರಿಕಾದಲ್ಲಿ ನೆಲೆಸಿ ಅಲ್ಲಿನ ಬೇ ಏರಿಯಾದಲ್ಲಿ "ವಾಕ್ಪಟು" ಎಂಬ ತಂಡವನ್ನು ಕಟ್ಟಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ "ವಾಕ್ಪಥ" ದ ಸೃಷ್ಟಿಗೆ ಕಾರಣರಾಗಿ ಕೇವಲ ಏಳು ಹೆಜ್ಜೆಗೆ ಇಂಥಹ ಒಂದು ಮಹಾದವಕಾಶದಲ್ಲಿ ನಾವುಗಳು ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಶ್ರೀಯುತ ಪ್ರಭುನಂದನ ಮೂರ್ತಿ ಅವರಿಗೆ ಸಲ್ಲುತ್ತದೆ