ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday 20 November, 2011

ವಾಕ್ಪಥ

ಭಾಷಣವನ್ನು ನಿರರ್ಗಳವಾಗಿ ತಪ್ಪಿಲ್ಲದೆ ನಿಗದಿತ ಸಮಯದಲ್ಲಿ ವ್ಯವಸ್ಥಿತ ರೀತಿಯಲ್ಲಿ ಆಕರ್ಷಣೀಯವಾಗಿ ಪರಿಣಾಮಕಾರಿಯಾಗಿ ಮಂಡಿಸುವದನ್ನು ಕಲಿಸುವ ಶಾಲೆಯೇ ವಾಕ್ಪಥ.

ಇದಕ್ಕಾಗಿ ಒಂದು ತರಗತಿ ಅಥವಾ ಗೋಷ್ಟಿಯನ್ನು ಸಮಯವನ್ನು ನಿಗಧಿತವಾಗಿರಿಸಿಕೊಂಡು ಒಂದು ಸೂತ್ರದಲ್ಲಿ ಕಟ್ಟಿಡಲಾಗುತ್ತದೆ. ಮೊದ ಮೊದಲು ವಿಷಯವನ್ನು ಅಷ್ಟಾಗಿ ಗಮನದಲ್ಲಿರಿಸಿಕೊಳ್ಳದೇ ಬರೇ ಧ್ವನಿ ಶೈಲಿ ರೀತಿಯನ್ನೇ ಮುಖ್ಯವಾಗಿರಿಸಿಕೊಂಡು ಭಾಷಣಕಾರರಿಗೆ ಅವಕಾಶ ನೀಡಲಾಗುತ್ತದೆ. ನಿರ್ವಾಹಕ ಒಂದು ಪೂರ್ವನಿಯೋಜಿತ ವ್ಯವಸ್ಥಿತ ರೀತಿಯಲ್ಲೇ ಕಾರ್ಯಕ್ರಮವನ್ನು ನಿರ್ವಹಿಸುತ್ತಾ ಸಮಯ ಪಾಲಕರ ಹಾಗೂ ವಿಮರ್ಶಕರ ಮತ್ತು ಭಾಷಾ ಶುದ್ಧಿಗಾರರ ಸಲಹೆ ಸಹಕಾರಗಳಿಂದ ಭಾಷಣಕಾರರ ಭಾಷಣವನ್ನು ಒರೆ ಹಚ್ಚಿ ಇನ್ನಷ್ಟು ಪರಿ ಪಕ್ವ ಗೊಳಿಸುವ ನಿಟ್ಟಿನಲ್ಲಿ ಅವರನ್ನು ಉದ್ದೀಪಿಸುತ್ತಾನೆ.

ಹೀಗೆ ಪ್ರತಿ ಗೋಷ್ಟಿಯೂ ಪ್ರತಿಯೊಬ್ಬ ವಾಕ್ಪಥಿಕರಲ್ಲಿ ಹೊಸ ಹೊಸ ಭಾಷಣಕಾರರು ವಿಮರ್ಶಕಾರರು ಭಾಷಾ ಶುದ್ಧಿಗಾರರು ಮತ್ತು ಸಮಯಪಾಲಕರನ್ನು ಸೃಷ್ಟಿಸುತ್ತಾ, ಒರೆಗೆ ಹಚ್ಚಿಕೊಳ್ಳುತ್ತಾ ಪರಿಪಕ್ವಗೊಳಿಸುತ್ತಾ ಪ್ರತಿ ಹೆಜ್ಜೆಯನೂ ಪ್ರಗತಿಯತ್ತ ಕೊಂಡೊಯ್ಯುತ್ತದೆ.

ವಾಕ್ಪಥದ ಸಾಫಲ್ಯವೇ ಹೀಗೆ ಮುನ್ನುಗ್ಗುತ್ತಿರುವ ಪ್ರಗತಿಯ ಪ್ರತಿ ಹೆಜ್ಜೆಯಲ್ಲೇ ಅಡಗಿದೆ.

೧. ನಿರ್ವಾಹಕ:

ಇಡೀ ಕಾರ್ಯಕ್ರಮದ ಕೀಲಿ ಕೈ ಆದ ನಿರ್ವಾಹಕ ಒಂದು ರೀತಿಯಲ್ಲಿ ಸಮಯ ಪಾಲಕನೂ ಹೌದು . ಅಯಾ ದಿನದ ಕಾರ್ಯಕ್ರಮವನ್ನು ಆರಂಭದಿಂದ ಕೊನೆಯ ( ವಂದನಾರ್ಪಣೆಯ ) ವರೆಗೆ ಅಚ್ಚುಕಟ್ಟಾಗಿ ನಿಗದಿತವಾಗಿ ನಡೆಸುವ ಭಾರ ಈತನದ್ದೇ. ಗೋಷ್ಟಿಯ ಉದ್ದೇಶ ಆಶಯಗಳನ್ನು ತಿಳಿಸುತ್ತಾ ಆರಂಭಿಸುವ ಆತ ಭಾಷಣಕಾರರನ್ನು ಸ್ವತಃ ಅಥವಾ ಬೇರೆಯವರಿಂದಲೋ ಪರಿಚಯಿಸುತ್ತಾನೆ.ವಾಕ್ಪಥದ ಅಂದಿನ ಕಾರ್ಯಕ್ರಮಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಸಮಯದ ಚೌಕಟ್ಟಿನಲ್ಲಿರಿಸಿ ಪ್ರತಿಯೊಂದೂ ವಿಷಯವನ್ನು ಗಮನದಲ್ಲಿರಿಸಿಕೊಂಡು ನಿರ್ವಹಿಸುತ್ತಾನೆ. ಅವಶ್ಯಕತೆ ಇದ್ದಲ್ಲಿ ತಾನೇ ಸ್ವತಃ ವಿಮರ್ಶೆಯನ್ನೂ ಮಾಡಿ, ಅನಿರೀಕ್ಷಿತ ಸಂಧರ್ಭಗಳನ್ನು ಸಂಭಾಳಿಸುತ್ತಾನೆ ಮತ್ತು ಕಾರ್ಯಕ್ರಮವನ್ನು ಅಂದ ಗಾಣಿಸಿಕೊಡುತ್ತಾನೆ.

ಈತನ ಮುಖ್ಯ ಕರ್ತವ್ಯಗಳು:
೧. ಸಮಯದ ಸದುಪಯೋಗ
೨. ವ್ಯವಸ್ಥಿತ ಕಾರ್ಯ ಪಾಲನೆ
೩. ಗೋಷ್ಟಿಯ ಆರಂಭಿಕ, ಭಾಷಣಕಾರರ ಪರಿಚಯ, ಮತ್ತು ಮುಕ್ತಾಯ ವಂದನಾರ್ಪಣೆ
೪. ಸಮಯಪಾಲಕರನ್ನು, ವಿಮರ್ಶಕರನ್ನು ಭಾಷಾ ಶುದ್ಧಿಗಾರರನ್ನು ಆಹ್ವಾನಿಸುವುದು,
೫. ಅನಿರೀಕ್ಷಿತ ಸಾಂಧರ್ಬಿಕ ವಿಷಯಗಳನ್ನು ಸಂಭಾಳಿಸುವುದು

೨.ಭಾಷಣ ಕಾರ

ನಿಗದಿತ ವಿಷಯವನ್ನು, ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಆಕರ್ಷಕವಾಗಿ ಮಂಡಿಸುವುದೇ ಭಾಷಣಕಾರ ಮುಖ್ಯ ಧ್ಯೇಯ. ತನ್ನ ಮಾತಿನ ಪಾಂಡಿತ್ಯದಲ್ಲೇ ಸಭಿಕರನ್ನು ಸೂಜಿಕಲ್ಲಿನಂತೆ ಆಕರ್ಷಿಸಿ ಧ್ವನಿಯ, ಶೈಲಿಯ, ಓಘವನ್ನು ಮಂಡಿಸುವ ಸರಿಯಾದ ಕ್ರಮದಲ್ಲಿ ಅರಿತುಕೊಂಡು ಮಂಡಿಸುವುದೇ ಮುಖ್ಯ ಕರ್ತವ್ಯ.ಪ್ರತಿ ಬಾರಿಯ ಭಾಷಣದಲ್ಲಿನ ಕುಂದುಕೊರತೆಗಳನ್ನು ತನ್ನನ್ನು ತಾನೇ ಒರೆಗೆ ಹಚ್ಚಿ ನೋಡಿಕೊಂಡು ಮುಂದುವರಿಯುತ್ತಾನೆ. ಭಾಷಣಕಾರನ ಸಮಯ ಮತ್ತು ಬಾಷೆಯ ಶುದ್ಧಿಯನ್ನು ಸಮಯಪಾಲಕ ಮತ್ತು ಭಾಷಾ ಶುದ್ಧಿ ಕಾರರು ವಿಮರ್ಶಿಸಿ ವರದಿ ಸಲ್ಲಿಸಿರುತ್ತಾರೆ. ನಿಜವಾದ ಭಾಷಣಕಾರ ತನ್ನ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ. ಅಲ್ಲದೇ ಹೀಗೆ ಎಲ್ಲಾ ಕೋನದಿಂದಲೂ ಪರಿಶೀಲಿಸುವ ಕೆಲಸ ನಡೆದಿರುವಾಗ ವಿಷಯದ ಪಾಂಡಿತ್ಯ ಅಥವಾ ಹರಹನ್ನು ವಿಸ್ತರಿಸಿಕೊಳ್ಳಲೂ ಇದು ಅವನಿಗೆ ನೆರವಾಗುತ್ತದೆ.

೩.ಸಮಯ ಪಾಲಕ

ಭಾಷಣಕಾರರು ಮತ್ತು ವಿಮರ್ಶಕರಿಗೆ ಕೊಟ್ಟ ನಿಗಧಿತ ಅವಧಿಯನ್ನು ಗಮನಿಸಿ, ಅದನ್ನು ವ್ಯವಸ್ಥಿತವಾಗಿ ತನ್ನಲ್ಲಿದ್ದ ಮೂರು ಬಾವುಟಗಳಿಂದ ಭಾಷಣಕಾರರು ಮತ್ತು ವಿಮರ್ಶಕರಿಗೆ ತಿಳಿಸುವುದು ( ಮೊದಲು ಹಸಿರು ನಂತರ ಹಳದಿ ತೋರಿಸಿ ಸಮಯದ ಅವಧಿ ಮೀರಿತ್ತಲೇ ಕೆಂಪು ಬಾವುಟವನ್ನು ಎತ್ತಿ ತೋರಿಸುತ್ತಾ ಅವರ ಭಾಷಣ ಮುಗಿಯುವ ವರೆಗೆ ಎತ್ತಿ ಹಿಡಿದು ತೋರಿಸುವುದೇ ) ಸಮಯ ಪಾಲಕನ ಆದ್ಯ ಕರ್ತವ್ಯ. ಇವು ಭಾಷಣಕಾರರಿಗೆ ತಮ್ಮ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅಂತ್ಯಗೊಳಿಸಲು ಅನುವಾಗುತ್ತವೆ. ಮತ್ತು ಕೊನೆಯಲ್ಲಿ ನಿರ್ವಾಹಕರ ಅಪ್ಪಣೆಯಂತೆ ವಿಮರ್ಶೆ ಅಥವಾ ಭಾಷಣಕ್ಕೆ ಎಷ್ಟು ಕಾಲಾವಕಾಶ ತೆಗೆದು ಕೊಂಡರು ಎನ್ನುವ ವರದಿಯನ್ನು ಸಭೆಗೆ ಸಲ್ಲಿಸುತ್ತಾನೆ.

೪. ಭಾಷಾ ಶುದ್ಧಿಗಾರ

ಸಮಯ ಪಾಲಕರಂತೆಯೇ ಇರುವ ಇನ್ನೊಂದು ಪರಿಣಿತ. ಈತನ ಕೆಲಸ ಭಾಷಣಕಾರನ ಮಾತುಗಳಲ್ಲಿನ ಕೊರತೆಯನ್ನು ವಿಮರ್ಶಿಸುವುದು. ಉದಾಹರಣೆಗೆ ಅ ಮತ್ತು ಹ ಉಚ್ಛಾರಣೆಯಲ್ಲಿನ ವ್ಯತ್ಯಾಸ, ಕೆಲವು ಶಬ್ದಗಳ ಪುನರಾವರ್ತನೆ.. ಇತ್ಯಾದಿ. ಇವನ ವಿಮರ್ಶೆಯ ಇನ್ನುಳಿದ ಭಾಗಗಳೆಂದರೆ:

೧. ಧ್ವನಿ ಏರಿಳಿತ
೨. ಓಘ
೩. ಶೈಲಿ
೪. ವ್ಯಾಕರಣ
೫. ಭಾಷೆಯಲ್ಲಿನ ಹಿಡಿತ
೬. ವಿಷಯದ ಪಾಂಡಿತ್ಯ
೭. ಕ್ಲಪ್ತತೆ
೮. ಆರಂಭ ಮತ್ತು ಮುಕ್ತಾಯ.

೫. ವಿಮರ್ಶಕ
ಭಾಷಾ ಶುದ್ಧಿಗಾರರಂತೆಯೇ ಅಷ್ಟೇ ಪ್ರಾಮುಖ್ಯ ಹೊಂದಿದ ಪರಿಣಿತ ಕೆಲಸವಿದು. ಭಾಷಣ ಕಾರರ ಭಾಷಣದೊಳಗಿಳಿಯದೇ ಹೊರಗಿನಿಂದ ಭಾಷಣವನ್ನು ತನ್ನ ವಿಮರ್ಶೆಯ ವರೆಗಲ್ಲಿನಲ್ಲಿಡಬೇಕಾದಂತಹ ಪಾಂಡಿತ್ಯ, ಅರಿವು ಇವರಿಗಿರಬೇಕಾದದ್ದು ಅವಶ್ಯಕ. ನಂತರ ಸಮಯ ಬಂದಾಗ ಇವುಗಳನ್ನು ನಿಗದಿತ ಸಮಯದಲ್ಲಿ ಸಭೆಗೆ ವರದಿ ನೀಡಬೇಕಾಗುತ್ತದೆ. ಈತನ ವಿಮರ್ಶೆಯ ಮುಖ್ಯ ಹರಹುಗಳು:
೧, ಸರಾಸರಿ ಒಟ್ಟಾರೆಯಾದ ನಿಲುವು.
೨. ಕುಂದು ಕೊರತೆಗಳು
೩. ಶೈಲಿ/ ಧ್ವನಿ
೪. ಒಳ್ಳೆಯ ಅಂಶಗಳು
೫. ಭಾಷಣ ಪಕ್ವವಾಗಲು ಅನುಸರಿಸಬೇಕಾದ ವಿಧಾನಗಳು

No comments:

Post a Comment