ಸುಮಾರು ಒಂದೂವರೆ ತಿಂಗಳ ಹಿಂದೆ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ಏಳನೆಯ ಹೆಜ್ಜೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೃಷ್ಟಿ ವೆಂಚರ್ಸ್ ನ ವ್ಯವಸ್ಥಾಪಕರಾದ ಶ್ರೀಯುತ ನಾಗರಾಜ್ ನಾವುಂದ ಅವರು ಅಕ್ಟೋಬರ್ ೩೦ ರಂದು ಹಮ್ಮಿಕೊಂಡಿರುವ "ಪುಸ್ತಕ ಪರಿಷೆ" ಯ ಬಗ್ಗೆ ತಿಳಿಸಿ ಅಂದಿನ ಸಂಪೂರ್ಣ ವೇದಿಕೆ ನಿರ್ವಹಣೆಯನ್ನು ವಾಕ್ಪಥ ತಂಡಕ್ಕೆ ವಹಿಸುತ್ತಿದ್ದೇನೆ ಎಂದು ಹೇಳಿದಾಗ ಎಲ್ಲ ವಾಕ್ಪಥಿಕರಿಗೂ ಸಂತೋಷದ ಜೊತೆಗೆ ಆಶ್ಚರ್ಯವೂ ಆಯಿತು.
ಕೇವಲ ಏಳು ಹೆಜ್ಜೆಗಳನ್ನು ಇಟ್ಟಿದ್ದ ವಾಕ್ಪಥಕ್ಕೆ ದೊರೆತ ಸುವರ್ಣಾವಕಾಶ ಈ ಪುಸ್ತಕ ಪರಿಷೆಯ ವೇದಿಕೆಯ ನಿರ್ವಹಣೆ.ಒಂದು ಲಕ್ಷ ಪುಸ್ತಕ ಪ್ರದರ್ಶನ
ಒಬ್ಬೊಬ್ಬರಿಗೆ ಒಂದೊಂದು ಉಚಿತ ಪುಸ್ತಕ.
ಅನೇಕ ಗಣ್ಯ ಆಹ್ವಾನಿತರು.
ಬೆಳಗಿನಿಂದ ಸಂಜೆಯವರೆಗೂ ವೇದಿಕೆಯನ್ನು ಖಾಲಿ ಬಿಡಬಾರದು.
ಗಣ್ಯರ ಭಾಷಣಗಳು, ಮನರಂಜನೆಯ ಕಾರ್ಯಕ್ರಮಗಳು
ವಾಕ್ಪಥದ ಎಂಟನೆಯ ಗೋಷ್ಠಿ.
ಇವುಗಳಲ್ಲಿ ಮೊದಲೆರಡು ಬಿಟ್ಟರೆ ಉಳಿದೆಲ್ಲ ಜವಾಬ್ದಾರಿ ವಾಕ್ಪಥ ತಂಡದ ಮೇಲಿತ್ತು. ಬೆಳಗಿನಿಂದ ಸಂಜೆಯವರೆಗೂ ವೇದಿಕೆಯನ್ನು ಖಾಲಿ ಬಿಡದೆ ನೋಡಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಅದೂ ಅಲ್ಲದೆ ಒಂದು ಪುಸ್ತಕ ಮೇಳದಲ್ಲಿ ಬರುವ ಜನರು ಕೇವಲ ಪುಸ್ತಕ ಕೊಳ್ಳುವುದರಲ್ಲಿ ಆಸಕ್ತರಾಗಿರುತ್ತಾರೆ ಹೊರತು ವೇದಿಕೆಯ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ. ಹಾಗಾಗಿ ನೆರೆದಿರುವ ಪ್ರೇಕ್ಷಕರು ಪುಸ್ತಕ ಕೊಳ್ಳುವುದರ ಜೊತೆಗೆ ವೇದಿಕೆಯ ಕಡೆಗೂ ಗಮನ ಹರಿಸುವ ಹಾಗೆ ಕೆಲಸ ನಿರ್ವಹಿಸುವ ದೊಡ್ಡ ಸವಾಲು ವಾಕ್ಪಥ ತಂಡದ ಮುಂದಿತ್ತು.
ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ ವಾಕ್ಪಥ ತಂಡದ ಸದಸ್ಯರುಗಳಾದ ಶ್ರೀಯುತ ಪ್ರಭುನಂದನ ಮೂರ್ತಿ, ಶ್ರೀಯುತ ಬೆಲ್ಲಾಳ ಗೋಪಿನಾಥರಾಯರು, ಶ್ರೀಯುತ ಹೊಳೆನರಸಿಪುರ ಮಂಜುನಾಥರವರು, ಶ್ರೀಯುತ ರಘು ಎಸ.ಪಿ ಯವರು, ಶ್ರೀಯುತ ಹರೀಶ್ ಆತ್ರೇಯ ರವರು, ಶ್ರೀಯುತ ಪಾರ್ಥಸಾರಥಿಯವರು, ಹಾಗೂ ಶ್ರೀಯುತ ರಾಮ್ ಮೋಹನ್ ಅವರು ವಾರದಲ್ಲಿ ಸಿಗುತ್ತಿದ್ದ ಒಂದು ರಜಾ ದಿನವಾದ ಭಾನುವಾರದಲ್ಲಿ ಅರ್ಧ ದಿನ ಈ ಕೈಂಕರ್ಯದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸುವುದರಲ್ಲಿ ಮಗ್ನರಾದರು.
ಈ ಜವಾಬ್ದಾರಿ ಬಂದ ದಿನದಿಂದ ಸೃಷ್ಟಿಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು, ವಿಶೇಷ ಆಹ್ವಾನಿತರು, ಭಾಷಣಕಾರರು, ಮನರಂಜನೆ ಕಲಾವಿದರು ಇವರುಗಳ ವಿವರಗಳನ್ನು ಸಂಗ್ರಹಿಸಿ ಅದರ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ತಯಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಶ್ರೀಯುತ ಹರೀಶ್ ಆತ್ರೇಯ ಇವರ ಶ್ರಮ ಸಾಕಷ್ಟಿದೆ.
ಈ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬೆಳಗಿನಿಂದ ಸಂಜೆಯವರೆಗೂ ಯಾವ ಯಾವ ಕಾಲಾವಧಿಯಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಬೇಕು, ಉದ್ಘಾಟನೆ, ಗಣ್ಯರ ಭಾಷಣ, ಸಂಗೀತ ಕಾರ್ಯಕ್ರಮ,ವಾಕ್ಪಥ ಗೋಷ್ಠಿ, ವಿಶೇಷ ಆಹ್ವಾನಿತರ ಭಾಷಣ, ಚರ್ಚೆ/ಚಿಂತನೆ, ಜಂಬೆ(ವಿಶೇಷ ವಾದ್ಯ ಪರಿಕರ) ಕಾರ್ಯಕ್ರಮ, ಹಾಗೂ ಸಮಾರೋಪ ಇವಿಷ್ಟು ಕಾರ್ಯಕ್ರಮಗಳನ್ನು ಆಯಾ ಸಮಯಕ್ಕೆ ಹೊಂದಿಸುವಲ್ಲಿ ಎಲ್ಲ ವಾಕ್ಪಥಿಕರು ಪಾತ್ರ ವಹಿಸಿದ್ದಾರೆ.
ಅಂದಿನ ಕಾರ್ಯಕ್ರಮಕ್ಕೆ ಅವಶ್ಯವಿದ್ದ ಗುರುತಿನ ಚೀಟಿಗಳು, ವಾಕ್ಪಥದ ಆಶಯ ಹಾಗೂ ಉದ್ದೇಶಗಳನ್ನು ಒಳಗೊಂಡ ಫಲಕಗಳನ್ನು ವಿಶೇಷ ಕಾಳಜಿ ಮುತುವರ್ಜಿಯಿಂದ ಸುಂದರವಾಗಿ ತಯಾರು ಮಾಡುವುದರಲ್ಲಿ ಶ್ರೀಯುತ ರಘು ಎಸ. ಪಿ ಅವರು ವಿಶೇಷ ಪಾತ್ರ ವಹಿಸಿದ್ದಾರೆ.
ಅಂದಿನ ಕಾರ್ಯಕ್ರಮಕ್ಕೆ ವಿಶೇಷವಾಗಿ ಒಂದು ಮನರಂಜನೆಯ ಕಾರ್ಯಕ್ರಮ ಕೊಡುವ ನಿಟ್ಟಿನಲ್ಲಿ ರೂಪುಗೊಂಡಿದ್ದೆ "ಬಾಲ ವಾಕ್ಪಥ". ಪ್ರಸ್ತುತ ಹೇಗೆ ನಾವುಗಳು ಅಂದರೆ ಹಿರಿಯರು ವಾಕ್ಪಥವನ್ನು ನಡೆಸುತ್ತಿದ್ದೆವೋ ಅದೇ ರೀತಿಯಲ್ಲಿ ಮಕ್ಕಳಿಂದ ಒಂದು ವಾಕ್ಪಥ ಆಯೋಜಿಸುವ ಯೋಚನೆ ಬಂದದ್ದೆ ತಡ ಎಲ್ಲ ವಾಕ್ಪಥಿಕರು ಸಹಮತದಿಂದ ಒಪ್ಪಿಗೆ ಸೂಚಿಸಿದರು. ಇದಕ್ಕೆ ಅವಶ್ಯವಿದ್ದ ಪಥಿಕರನ್ನು ಒದಗಿಸುವಲ್ಲಿ ಸೃಷ್ಟಿಯ ವ್ಯವಸ್ಥಾಪಕರಲ್ಲಿ ಕೇಳಿದಾಗ ತಮ್ಮದೇ ಅನುಭವ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ನಮಗೆ ತೋರಿಸಿದರು. ನಮಗೆ ಉಳಿದಿದ್ದ ಎರಡೇ ವಾರದಲ್ಲಿ ಆ ಮಕ್ಕಳನ್ನು ತಯಾರು ಮಾಡುವುದರಲ್ಲಿ ಎಲ್ಲ ವಾಕ್ಪಥಿಕರ ಪಾತ್ರ ಅಮೋಘ (ಇದಕ್ಕೆ ಸಾಕ್ಷಿ ಕಾರ್ಯಕ್ರಮದಲ್ಲಿ ಅಧ್ಬುತ ಯಶಸ್ಸು ಕಂಡ ಬಾಲ ವಾಕ್ಪಥ)
ಇನ್ನುಳಿದಂತೆ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಲಹೆ, ಸೂಚನೆ ಬೆಂಬಲವನ್ನು ವ್ಯಕ್ತಪಡಿಸಿದ ಶ್ರೀಯುತ ಕಿರಣ್, ಶ್ರೀಯುತ ಅ.ಸು. ಹೆಗ್ಡೆ, ಶ್ರೀಯುತ ಸತ್ಯಚರಣ, ಶ್ರೀಯುತ ಶ್ರೀಹರ್ಷ ಸಾಲಿಮಟ್ ಪ್ರತಿಯೊಬ್ಬರಿಗೂ ವಾಕ್ಪಥ ತಂಡದ ಪರವಾಗಿ ಅನಂತಾನಂತ ಧನ್ಯವಾದಗಳು.
ಕೊನೆಯದಾಗಿ ಒಬ್ಬರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಬೇಕೆಂದರೆ ಅದು ಶ್ರೀಯುತ ಪ್ರಭುನಂದನ ಮೂರ್ತಿ ಅವರಿಗೆ. ಅಮೇರಿಕಾದಲ್ಲಿ ನೆಲೆಸಿ ಅಲ್ಲಿನ ಬೇ ಏರಿಯಾದಲ್ಲಿ "ವಾಕ್ಪಟು" ಎಂಬ ತಂಡವನ್ನು ಕಟ್ಟಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ "ವಾಕ್ಪಥ" ದ ಸೃಷ್ಟಿಗೆ ಕಾರಣರಾಗಿ ಕೇವಲ ಏಳು ಹೆಜ್ಜೆಗೆ ಇಂಥಹ ಒಂದು ಮಹಾದವಕಾಶದಲ್ಲಿ ನಾವುಗಳು ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಶ್ರೀಯುತ ಪ್ರಭುನಂದನ ಮೂರ್ತಿ ಅವರಿಗೆ ಸಲ್ಲುತ್ತದೆ
No comments:
Post a Comment