ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Wednesday, 9 March 2011

ವಾಕ್ಪಥದಲ್ಲಿ ಮೊದಲ ಗುರುತು ಹೆಜ್ಜೆ ೧ ದಿನಾಂಕ ೬.೦೩.೨೦೧೧ ರಂದು ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿ

ವಾಕ್ಪಥದಲ್ಲಿ ಮೊದಲ ಗುರುತು

ಹೆಜ್ಜೆ ೧  ದಿನಾಂಕ ೬.೦೩.೨೦೧೧ ರಂದು
ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿ

ಎಣಿಸಿದ ದಿನ ಬಂದೇ ಬಿಟ್ಟಿತು. ಕಾತರದ ಕ್ಷಣಗಳವು.ಎಣಿಸಿದಂತೆಯೆ ಪ್ರಭುಗಳು ಸರಿಯಾಗಿ ೯ಕ್ಕೇ ಮನೆಯಲ್ಲಿ ಹಾಜರ್.
ಕಳೆದವಾರವಿಡೀ ನನ್ನ ದಫ್ತರಿನ ಕೆಲಸದಲ್ಲೇ ಮಗ್ನನಾಗಿದ್ದ ನನಗೆ ಈ ಕಡೆ ಮನಹರಿಸಲೂ ಸಮಯವಿರಲಿಲ್ಲ. ನೆನ್ನೆಯಂತೂ ನನ್ನ ದಪ್ತರಿನ ಹೊಸ ಜಾಗದಲ್ಲಿ ನನ್ನ ಈಗಿನ ಪ್ರಾಜೆಕ್ಟ್ ಬಗ್ಗೆ  ದರ್ಶಿನಿಯಿತ್ತು. ನನಗೇ ಗೊತ್ತಿರದ ಹಾಗೆ ಅಲ್ಲಿಂದ ಸಂಜೆಯ ಕಾರ್ಯಕ್ರಮ ಮುಗಿಯುವಾಗಲೇ ಸಂಜೆ ಏಳೂವರೆಯಾಗಿತ್ತು.ನಂತರ ಮನೆಗೆ ಬಂದು ಹಾ ಹೂ ಅನ್ನುವುದರೊಳಗಾಗಲೇ ರಾತ್ರೆ ಮತ್ತು ನಿದ್ರೆ ನನ್ನನ್ನು ಆವರಿಸಿಯೇ ಬಿಟ್ಟಿದ್ದವು.

ಎಂದಿನಂತೆ ಕೆಂಪಿಯನ್ನು( ನನ್ನ ದ್ವಿಚಕ್ರಿ) ಹೊರತೆಗೆದು ನಾನೂ ಪ್ರಭುಗಳೂ ಹೊರ ಹೊರಟೆವು, ಈ ಸಾರಿ ಏನೂ ಅನಾಹುತವಾಗದೇ ನಾವು ನೇರವಾಗಿ ಪುಳಿಯೊಗೆರೆ ಬಿಂದು ತಲುಪಿದೆವು, ಅಲ್ಲಿ ಆಗಲೇ ಮಂಜು ಮತ್ತು ರಘು ಆತ್ರೇಯರು ಮೊದಲೇ ಬಂದು ನಮ್ಮ ದಾರಿ ಕಾಯುತ್ತಿದ್ದರು.
ಸೃಷ್ಟಿ ವೆಂಚರ್ ತಲುಪಿದೆವು.  ಮುಂದಿನ ಹೆಜ್ಜೆಯ ಕಾರ್ಯರೂಪು ರೇಷೆಯನ್ನು  ರೂಪಿಸಿಕೊಳ್ಳುತ್ತಿರುವಾಗಲೇ ಪ್ರಿಯರಾದ ಪಾರ್ಥ ಸಾರಥಿಯವರೂ  ತಮ್ಮ ಅನುಜ ರಾಮ ಮೋಹನರು  ಮತ್ತು ಅವರ ಮಗಳು ಚಿ ಮಾನಸರೊಡನೆ  ಆಗಮಿಸಿದರು.ನೋಡ ನೋಡುತ್ತಿರುವಂತೆಯೇ ಸ್ನೇಹಿ ಮಧ್ವೇಶರೂ ನಮ್ಮ ನಡುವೆಯೇ ಆಸೀನರಾದರು.
ಸುನಿಲ್ ರ ಸ್ಥಾನ ಆತ್ರೇಯರು ತುಂಬಿದ್ದರು.
ಸುಂದರ ಪದ ಬಳಕೆಯ ಮೂಲಕ ರಘುರವರು ತಮ್ಮದೇ ಆದ ಎಂದಿನ ಹಾಸ್ಯ ಹಾಗೂ ಗ್ರಾಮ್ಯ ಶೈಲಿಯಲ್ಲಿ ಮಂಜುರವರ ಮತ್ತು ನನ್ನ  ಪರಿಚಯಮಾಡಿಸಿದ್ದರು. ಅವರ ಪರಿಚಯ ಮಾಡಿಸುವ ರೀತಿಗೇ ಯಾರೂ ಮಾರು ಹೋಗಲೇ ಬೇಕು.
ಮಂಜುರವರು ತಮ್ಮ ವಿಶಿಷ್ಟ ಹಾಗೂ ಗಂಭೀರ ಮಾಧುರ್ಯದ ಶೈಲಿಯಲ್ಲಿ ತಮ್ಮ ಕಾಲೇಜು ಜೀವನದ ಹೋಗುಗಳನ್ನು ವಿವರಿಸಿದರು. ಅದೂ ನಾವಿಲ್ಲಿಯವರೆಗೆ ಕೇಳಿ ಅರಿಯದ ವಿಷಯವನ್ನು ತಮ್ಮದೇ ಆದ ಭಾಷಣ ಮಂಡಿಸಿದರು. ಅವರ ಭಾಷಣ ಕೇಳಿಯೇ ನಾನು ನನ್ನ ಭಾಷಣದಲ್ಲಿ ಬರೇ ಸೈನ್ಯದ ವಿಷಯವನ್ನೇ ಹೇಳೋಣ ಎಂದು ಕೊಂಡು ಅಂತೆಯೇ ಮಾಡಿದೆ ಕೂಡಾ.

ಇಲ್ಲಿ ಪ್ರಭು ಮೂರ್ತಿಯವರ ಆಸಕ್ತಿ ಆಧ್ಯತೆ ಮತ್ತು ವಿಷಯದೊಳಗಿನ ಅವರ ಅಪಾರ ಪಾಂಡಿತ್ಯದ ಬಗ್ಗೆ ಎರಡು ಮಾತಿಲ್ಲ.
ಈ ವಾಕ್ಪಥ ಅವರ ಕನಸಿನ ಕೂಸು. ಇವತ್ತಿನ ಈ ಮೊದಲ ಹೆಜ್ಜೆಯೇ ಅವರ ಇವತ್ತಿನ ನನಗೆ ದೊರಕಿದ ಪಾಠ ನೂರಕ್ಕೆ ನೂರು ಯಶಸ್ವಿಯಾಯಿತೆಂದೇ ಎದೆ ತಟ್ಟಿ ಹೇಳುವೆ.

ನಾನು ಅವರ ಜತೆ ಇದರಲ್ಲಿ ಸೇರಲು ನನ್ನದೇ ಆದ ಆಸಕ್ತಿಯಿತ್ತು.

ನಾನಾಗ ಐದನೇ ತರಗತಿಯಲ್ಲಿದ್ದೆ. ಅತೀ ಹಳ್ಳಿಯಾದ ಬೆಳ್ಳಾಲದಿಂದ ಸಣ್ಣ ಪೇಟೆಯೆನಿಸಿದ ಸಿದ್ದಾಪುರಕ್ಕೆ ಪ್ರಾಥಮಿಕ ಶಾಲೆಗೆ ಬಂದು ಸೇರಿದ್ದೆ. ಭಾಷಣದ ಗಂಧ ಗಾಳಿಯೂ ಇಲ್ಲದ ನನ್ನನ್ನು ಪ್ರಥಮ ಬಾರಿಯೇ (  ಅಧ್ಯಾಪಕರ ವಂಶದ ನಾನು ಆಗ ತರಗತಿಯಲ್ಲಿ ಸಹಜವಾಗಿಯೇ ವಾಚಾಳಿಯಾಗಿದ್ದುದೂ ಕಾರಣವೆನಿಸಿ) ಭಾಷಣಕ್ಕೆ ಕರೆದರು . ಬಾಲ್ಯ ಸಹಜ ಬುದ್ದಿಯ ನಾನು ಸ್ಟೇಜಿಗೆ ಹತ್ತಿದ್ದೇನೋ ನಿಜ ಇದಿರಿನ ಅಗಾಧ ಮಕ್ಕಳ
ಸೈನ್ಯ, ಮಾಸ್ತರುಗಳ ಹಿಂಡು ನನ್ನನ್ನು ಅಧೀರನಾಗಿಸಿ ಆ ಸಭೆಯಲ್ಲೇ ಬೆಬ್ಬೆಬ್ಬೆ ಅನ್ನುತ್ತಾ ಅತ್ತೇ ಬಿಟ್ಟಿದ್ದೆ, ಆಗಿನ ನಮ್ಮ ಮುಖ್ಯ ಆಧ್ಯಾಪಕ ನಾರಾಯಣ ಶೆಟ್ಟಿಯವರು, ನನ್ನನ್ನು ಸಂತೈಸಿದರಲ್ಲದೇ ಮುಂದಿನ ಪ್ರತಿ ಡಿಬೇಟಿಗೂ ನನ್ನ ಹೆಸರನ್ನು ಖಾಯಮ್ ಆಗಿ ಸೇರಿಸಿದ್ದರು, ಪರಿಣಾಮ ಮುಂದಿನ ವರ್ಷದಿಂದ ಪ್ರತಿ ಭಾಷಣ ಸ್ಪರ್ದೆಯಲ್ಲೂ ನಾನೇ ಮೊದಲಿಗನಾಗಿದ್ದೆ, ಈ ವಿಷಯ ಇಂದೂ ನನ್ನ ಮನಸ್ಸಿನಲ್ಲೇ ಹಚ್ಚ ಹಸಿರಾಗಿ ಉಳಿದಿದೆ.
ಹಳ್ಳಿಯಿಂದ ಬಂದ ಎಲ್ಲಾ ಮಕ್ಕಳ ಪಾಡೂ ಇದೇ. ಅದನ್ನೇ ಸರಿಯಾಗಿ ಅಭ್ಯಸಿಸಿ ಮಕ್ಕಳಿಗೆ ತಿಳಿಹೇಳಿ ಅಂತವರನ್ನು ಶಾಸ್ತ್ರೀಯವಾಗಿ ತಯಾರು ಮಾಡುವ ಬಯಕೆ ನನ್ನದು.

ಪ್ರಭುಗಳು ನಮ್ಮಿಬ್ಬರ ಭಾಷಣವನ್ನೂ ಅಳೆದು ತೂಗಿ ಶಾಸ್ತ್ರೀಯವಾಗಿ ಎಲ್ಲೆಲ್ಲಿ ತಪ್ಪು ಮಾಡಿದ್ದೆವು, ಎಲ್ಲೆಲ್ಲಿ ಚೆನ್ನಾಗಿ ಮಾಡಿದ್ದೆವು, ಯಾವಯಾವ ಭಾಗವನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎನ್ನುವುದನ್ನೂ ಅತ್ಯಂತ ಸಮರ್ಪಕವಾಗಿ ವಿವರಿಸಿ ತಿಳಿಹೇಳಿದರು.
ಮುಂದಿನ ಆಶು ಭಾಷಣವಂತೂ ಅತ್ಯಂತ ಆಸಕ್ತಿಕರವಾಗಿತ್ತು, ನನಗೆ ಮಾತನಾಡಲು ಬರುವುದಿಲ್ಲಎನ್ನುತ್ತಲೇ ಮಧ್ವೇಶ ತನ್ನ ಶ್ರೀಮತಿಯವರ ಗುಣಗಾನ ಮಾಡಿದ್ದರೆ ಪಾರ್ಥ ಸಾರಥಿಯವರು,  ರಾಮ ಮೋಹನರು   ನಿರರ್ಗಳವಾಗಿ ಭಾಷಣ ಮಾಡಿದರು, ಆತ್ರೇಯರೂ ತಮ್ಮ ಅಕ್ಕನ ಪ್ರೀತಿಯ ಬಗ್ಗೆ ಮನದುಂಬಿ ನಮ್ಮ ಮನಸೂರೆಗೊಂಡರೆ, ಮಂಜುರವರು ರಾಗಿಮುದ್ದೆಯ ಬಗೆಗೆ ತಮ್ಮ ಪ್ರೀತಿಯನ್ನೂ ತಮ್ಮ ಹೆಂಡತಿಯ ಕೈ ಗುಣವನ್ನೂ ಹಾಸ್ಯ ಶೈಲಿಯಲ್ಲಿಯೇ ವಿವರಿಸಿದರು, ರಘುರವರು ತಮ್ಮ ಬಾಲ್ಯದ ಹಬ್ಬದ ಬಗೆಗೆ ಹೇಳುತ್ತ ತಮ್ಮ ಅತಿ ವಿಶಿಷ್ಟ ಶೈಲಿಯಲ್ಲಿ ಮುಳುಗಿ ಎದ್ದರು.
ನಂತರ ಸಮಯಕಾರರಾದ ಹರೀಶರು ಮಂಜುರವರ ಕೊಟ್ಟ ಎಂಟು ನಿಮಿಷದಲ್ಲಿ ಎರಡು ಸೆಕೆಂಡ್ ಉಳಿಸಿದ್ದರೆ ನಾನು ಆ ಎರಡು ಸೆಕೆಂಡ್ ಜಾಸ್ತಿ ಉಪಯೋಗಿಸಿದ್ದೆ ಎಂದು ಹೇಳಿ ನಂತರದ ಎಲ್ಲರೂ ತಮ್ಮ ತಮ್ಮ ಸಮಯದೊಳಗೇ ಮುಗಿಸಿದ್ದರೂ ರಘುರವರು ಒಂದೂವರೆ ನಿಮಿಶ ಜಾಸ್ತಿ ತೆಗೆದುಕೊಂಡರು ಎಂದು ಹೇಳುತ್ತ ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸಿದರು.
ಅಂತೂ ನಮ್ಮ ಹೆಗ್ಗುರುತಾದ ಮೊದಲ ಹೆಜ್ಜೆ ಅತ್ಯಂತ ಸಮರ್ಪಕವಾಗಿ ಅತ್ಯಂತ ಜವಾಬ್ದಾರಿಯುತವಾಗಿ ನೆರವೇರಿತು.
ಎರಡನೇ ಸಾರಿಯ ನಮ್ಮ ಕೂಟದಲ್ಲೇ ಮೊದಲ ದಿನದ ದುಪ್ಪಟ್ಟು ಜನರು ಕೂಡಿದ್ದೂ ಸಹ ಒಂದು ವಿಶೇಷ.



ಎಲ್ಲರಿಗೂ ಕಣ್ಮಣಿಯಾದ ಸಂಪದವೇ ನಮ್ಮೆಲ್ಲರ ಸ್ನೇಹೀ ಕೂಟಕ್ಕೆ ನಾಂದಿ ಹಾಡಿದ್ದನ್ನೂ ಕೂಡಾ ಎಲ್ಲರೂ ಸ್ಮರಿಸಿದರು.ಸಂಪದವಿಲ್ಲದಿದ್ದರೆ ಇದೆಲ್ಲಾ ಸಾಧ್ಯವೇ ಇರುತ್ತಿರಲಿಲ್ಲ. ನಿಜವಾಗಿಯೂ ನಾವೆಲ್ಲರೂ ಸಂಪದಕ್ಕೆ ಚಿರ ಋಣಿ ಯಾಗಿದ್ದೇವೆ.

3 comments:

  1. ವಾಕ್ಪಥದ ಬ್ಲಾಗ ಶುರುವಾಗಿದ್ದು ಸಂತಸದ ವಿಷಯ ,ಬ್ಲಾಗ ಸುಂದರವಾಗಿದೆ

    ReplyDelete
  2. ಬ್ಲಾಗ್ ನೋಡಿ ತುಂಬಾ ಸಂತೋಷವಾಯ್ತು. ಹರೀಶ್, ಧನ್ಯವಾದಗಳು! ಪ್ರಭು

    ReplyDelete
  3. ಹರಿ
    ಬ್ಲಾಗ್ ತುಂಬಾನೇ ಚೆನ್ನಾಗಿದೆ
    ಗೋಡೆಯ ಬಣ್ಣ ಮತ್ತು ಅಕ್ಷರಗಳ ಬಣ್ಣ ಸಾಮ್ಯವಾಗಿವೆ
    ಬದಲಿಸಿದರೆ ಒಳ್ಳೆಯದಿತ್ತೇನೋ

    ReplyDelete