ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Monday 30 January, 2012

ಆಧುನಿಕತೆಯ ಪಲ್ಲಟಗಳು

ಇವತ್ತು ಈ ವಾಕ್ಪಥ ೧೦ ರ ಗೋಷ್ಠಿಯಲ್ಲಿ ನಾನು ತಮ್ಮ ಮುಂದೆ ಪ್ರಸ್ತುತ ಪಡಿಸಲಿರುವ ವಿಷಯ ' ಆಧುನಿಕತೆಯ ಪಲ್ಲಟಗಳು.' ಮುಂದಿನ ಕೆಲವು ನಿಮಿಷಗಳ ಕಾಲ ನಾವು , ನಮ್ಮ ಕರಾವಳಿ , ಮಲೆನಾಡು ಅಥವಾ ಇನ್ಯಾವುದೇ ಹಳ್ಳಿಗಳ   ಕೃಷಿ ಆಧಾರಿತವಾಗಿದ್ದ ನಮ್ಮ ಬದುಕಿನ ದಿಕ್ಕು ,ಹೇಗೆ  ಆಧುನಿಕವಾಗುವ ಹಂಬಲದಲ್ಲಿ , ಆಧುನಿಕತೆಯ ಹಿಂದಿನ ರಕ್ಕಸ ಶಕ್ತಿಯಾದ ಬಂಡವಾಳಶಾಹಿ ದಿಕ್ಕಿನ ಕಡೆಗೆ ಮುಖ ಮಾಡಿ , ವ್ಯಾಪಾರೀ ಮನೋಭಾವದ ಎಡೆಗೇ ಮುಖ ಮಾಡಿ ನಿಂತಿದೆ ಎನ್ನುವದನ್ನು ಚರ್ಚಿಸೋಣ.
ಮೊದಲಿಗೆ ಆಧುನಿಕತೆ ಎಂದರೆ ಏನು ಎನ್ನುವದನ್ನು ನೋಡೋಣ. ಆಧುನಿಕತೆಯನ್ನ ಸರಳವಾದ ಶಬ್ದಗಳಲ್ಲಿ ಹೇಳಬೇಕು ಎಂದರೆ ಬದಲಾವಣೆ. ಒಂದರಿಂದ ಇನ್ನೊಂದಕ್ಕೆ ಬದಲಾಗುವದು. ಈ ಬದಲಾವಣೆಯ ಪರಿಣಾಮ ಧನಾತ್ಮಕವಾಗಿ ಇರಬಹುದು ಅಥವಾ ಋಣಾತ್ಮಕವಾಗಿರಬಹುದು. ಬದಲಾವಣೆಯ ಪ್ರಭಾವ ಋಣಾತ್ಮಕವಾಗಿದ್ದಾರೆ ಅದನ್ನು ಪಲ್ಲಟ ಅಂಥ ಕರೆಯಬಹುದು.
ಹಾಗಾದ್ರೆ ಈ ಪಲ್ಲಟಗಳು ಎಲ್ಲಿಂದ ಪ್ರಾರಂಭವಾದವು? ಸಾಮಾನ್ಯವಾಗಿ ನಾವು ನಮ್ಮ ಎಲ್ಲ ಋಣಾತ್ಮಕ ಬದಲಾವಣೆಗಳಿಗೆ ಮಾಹಿತಿ ತಂತ್ರಜ್ಞಾನ ಯುಗವನ್ನ , ಪಾಶ್ಚಿಮಾತ್ಯ ದೇಶಗಳನ್ನ ದೂಷಿಸುತ್ತೇವೆ. ಹಾಗಾದರೆ ಅವೇ ಈ ಪಲ್ಲಟಗಳ ಮೂಲವೇ? ದಿಕ್ಕನ್ನು ಹುಡುಕುತ್ತಾ ಹೋದಂತೆ ಕಾಣಸಿಗುವ ಮೂಲವೇ ಬೇರೆ.
ಇವತ್ತಿನ ಈ ಪಲ್ಲಟಗಳ ಮೂಲ ಶುರುವಾಗಿದ್ದು ಸುಮಾರು ಮೂರು ನಾಲ್ಕು ತಲೆಮಾರುಗಳ ಹಿಂದೆ.
ಮೊದಲೆಲ್ಲ ನಮ್ಮ ಹಳ್ಳಿಗಳು ಅದು ಮಲೆನಾಡು ಇರಬಹುದು ಅಥವಾ ಕರಾವಳಿ ಇರಬಹುದು , ಅಚ್ಚ ಹಸಿರಿನಿಂದ ಕೂಡಿದ ಗದ್ದೆ ಬಯಲುಗಳಾಗಿದ್ದವು. ಆಹಾರ ಧಾನ್ಯಗಳು ನಮ್ಮ ಮೊದಲ ಪ್ರಾಶಸ್ತ್ಯವಾಗಿದ್ದವು. ನಿಧಾನವಾಗಿ ನಾವು ಆ ಹಸಿರು ಗದ್ದೆ ಬಯಲುಗಳನ್ನ ಕಡಿದು , ತುಂಡು ತುಂಡು ಮಾಡಿ ಅಲ್ಲಿ ವಾಣಿಜ್ಯ ಬೆಳೆಗಳನ್ನ ಬೆಳೆಸಲಿಕ್ಕೆ ಪ್ರಾರಂಭ ಮಾಡಿದೆವು. ಭತ್ತ ಬೆಳೆಯುತಿದ್ದ ಜಾಗಗಳಲ್ಲಿ ಅಡಿಕೆ , ಹೊಗೆಸೊಪ್ಪು ಬೆಳೆಯಲು ಪ್ರಾರಂಭವಾಯಿತು. ವಾಣಿಜ್ಯ ಬೆಳೆಗಳನ್ನ ಬೆಳೆದಂತೆ ಹಣದ ಹರಿವು ಜಾಸ್ತಿ ಆಗತೊಡಗಿತು. ಹಣವಿದ್ದಲ್ಲಿ ಕೊಂಡಿಗಳು ಗಟ್ಟಿಯಾಗಿ ಇರುವದು ಕಷ್ಟ. ಕುಟುಂಬಗಳ ಕೊಂಡಿ ನಿಧಾನವಾಗಿ ಕಳಚತೊಡಗಿತು. ಹೀಗೆ ಭೂಮಿಯ ಜೊತೆ ಜೊತೆಗೆ ನಾವು ತುಂಡು ತುಂಡಾಗಿ ಹರಿದು ಹೋಗತೊಡಗೆದೆವು. ತುಂಡು ಭೂಮಿಗೆಲ್ಲ ತುಂಡರಸರು ಹುಟ್ಟತೊಡಗಿದರು. ಹೊಸ ಹೊಸ ಮನೆಗಳು ಸೃಷ್ಟಿಯಾದವು. ಮನೆಗೊಂದು ಮನೆತನಗಳಾಯಿತು. ರಸ್ತೆಗಳು ಹುಟ್ಟಿ ನಕಾಶೆ ಬದಲಾದಂತೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಬದಲಾಗತೊಡಗಿದೆವು. ಸಣ್ಣ ಸಣ್ಣ ಭೂಮಿಗಳ ಜೊತೆ ಜೊತೆಗೆ ಮನಸ್ಸು ಸಣ್ಣವಾಗುತ್ತಾ ಹೋಯಿತು. ಭಾವನಾತ್ಮಕತೆಯ ಕೊಂಡಿ ಸಡಿಲವಾಗ ತೊಡಗಿತು. ನಾವು  ಬದಲಾವಣೆಯ ಬುರುಜನ್ನ ನಮ್ಮ ಸುತ್ತ ಕಟ್ಟಿಕೊಳ್ಳುತ್ತ ಹೋದಂತೆ ಒಳಗೆ ಸಂಬಂದಗಳ ಹರಿವು ಕಡಿಮೆಯಾಗ ತೊಡಗಿತು.ಚಲನಶೀಲ , ಭಾವನಾತ್ಮಕವಾಗಿದ್ದ ಸಮುದಾಯ ನಿಧಾನವಾಗಿ ನಿರ್ಜೀವವಾಗತೊಡಗಿತು.
ಒಂದು ಸರಳ ಉದಾಹರಣೆ ಕೊಡುತ್ತೇನೆ ನೋಡಿ , ಮೊದಲೆಲ್ಲ ಮದುವೆ ಅಂದರೆ ಅದೊಂದು ಊರಿನ ಹಬ್ಬವಾಗಿತ್ತು. ತಳಿರು , ತೋರಣ ಕಟ್ಟುವದು , ಮಂಟಪ ಕಟ್ಟುವದು ಅಥವಾ ಅಡುಗೆ ಮಾಡಿ ಬಡಿಸುವದು , ಬಂದವರಿಗೆ ಉಪಚಾರ ಮಾಡುವದು ಹೀಗೆ ಎಲ್ಲ ಕೆಲಸವನ್ನ ಊರವರೆಲ್ಲ ಸೇರಿ ಮಾಡುತಿದ್ದರು.  ಆದರೆ ಇವತ್ತು ಈ ಕೆಲಸಗಳನ್ನ ಮಾಡಲಿಕ್ಕೆ ಜನರೇ ಇಲ್ಲ. ಹಾಗಾಗಿ ಮದುವೆಗಳನ್ನ ಗುತ್ತಿಗೆ ಕೊಡಲಿಕ್ಕೆ ಶುರು ಮಾಡಿದ್ವಿ.  ತಳಿರು , ತೋರಣ ಕಟ್ಟುವದು , ಮಂಟಪ ಕಟ್ಟುವದು , ಉಪಚಾರ ಎಲ್ಲವನ್ನು ಇನ್ನೊಬ್ಬರಿಗೆ ಮಾರಿದ್ವಿ. ಮನೆಗಳ ಮುಂದಿನ ಮದುವೆ ಚಪ್ಪರ ಕಲ್ಯಾಣ ಮಂಟಪಗಳಿಗೆ ಸ್ಥಳಾಂತರವಾಯಿತು. ಗುತ್ತಿಗೆಯನ್ನು ತಗೊಂಡವರು ಮದುವೆ ನಡೆಸಿಕೊಟ್ಟರೇನೋ ಸರಿ ಆದರೆ ಅಲ್ಲಿ ಆತ್ಮೀಯತೆಯ ಕೊರತೆ ಕೊರತೆಯಾಗಿಯೆ ಉಳಿಯಿತು.
ಇವತ್ತು ನಮ್ಮ ಹಳ್ಳಿಗಳನ್ನು ಕಾಡುತ್ತಿರುವ ಇನ್ನೊಂದು ಭಯವೆಂದರೆ ಕಳಚುತ್ತಿರುವ ತಲೆಮಾರುಗಳ ಸರಪಳಿ.  ಹಳ್ಳಿಗಳು ಇವತ್ತು ವೃದ್ದಾಶ್ರಮ ಆಗುವ ಭೀತಿಯಲ್ಲಿವೆ. ಹಳ್ಳಿಗಳಲ್ಲಿ ವೇದವನ್ನ ಕಲಿತವರು ಶಹರಗಳಲ್ಲಿ ಆಧುನಿಕ ಪುಜಾರಿಗಳಾದರು , ಇನ್ನೂ ಹಲವರು ನಮ್ಮ ನಿಮ್ಮ ಹಾಗೆ ಶಹರದ ನೌಕರಿಗೆ ಜೋತು ಬಿದ್ದರು. ಹೀಗಾಗಿ ಇವತ್ತು ನೀವು ಹಳ್ಳಿಗಳಲ್ಲಿ ಹುಡುಕಿದರೆ ಕಾಣಸಿಗುವದು ಬೆರಳೆಣಿಕೆಯಷ್ಟು ನವಯುವಕರನ್ನು. ಪಲ್ಲಟಗಳ ಸ್ವರೂಪ ಎಷ್ಟು ಕ್ರೂರವೆಂದು ಹೇಳಲಿಕ್ಕೆ ಇನ್ನೂ ಒಂದು ಉದಾಹರಣೆ ಕೊಡುತ್ತೇನೆ ನೋಡಿ. ಇವತ್ತು ಮಲೆನಾಡಿನ ಹಲವೆಡೆ ತೀವ್ರವಾದ ಹೆಣ್ಣಿನ ಅಭಾವವಿದೆ. ಮದುವೆ ಆಗಬೇಕಾದರೆ ಗಂಡಿಗಿರುವ ಮುಖ್ಯ ಅರ್ಹತೆಗಳು ೩. ಬೆಂಗಳೂರಿನಲ್ಲಿ ಇರಬೇಕು. ಅಪ್ಪ ಅಮ್ಮಂದಿರ ಜೊತೆಗೆ ಇರಬಾರದು. ಹಾಗೂ ಊರಿನಲ್ಲಿ ಜಮೀನು ಇರಬೇಕು.!!
ಬೆಂಗಳೂರಿನಲ್ಲಿ ಇರಬೇಕು ಅನ್ನುವದು ಪಟ್ಟಣದ ಮೋಹ. ಅಪ್ಪ ಅಮ್ಮರ ಜೊತೆಗೆ ಇರಬಾರದು ಎನ್ನುವದು ನಮ್ಮ ಭಾವನಾತ್ಮಕತೆಯ ಕೊರತೆ, ಹಾಗಾದರೆ ಮೂರನೆಯದು ಯಾಕೆ?  ಯಾಕೆಂದರೆ ಎಲ್ಲೋ ಒಂದು ಕಡೆ ನಾವು ಶಹರದ ಜೀವನಕ್ಕೆ ಮುಖ ಮಾಡಿದರೂ ನಮ್ಮಲ್ಲಿ ಭೂಮಿಯೆಡೆಗಿನ ತುಡಿತ , ಮೋಹ ಹಾಗೆ ಇದೆ!! ಅದು ಇಲ್ಲದ ಇದನ್ನು ಒಪ್ಪಿಕೊಳ್ಳಲಾರದ ಸ್ಥಿತಿ..!
ಚರಿತ್ರೆಯ ಪುಟಗಳನ್ನ ಅವಲೋಕಿಸಿದರೆ ಇಂತಹ ಪಲ್ಲಟಗಳು ಕಾಲಘಟ್ಟಗಳಲ್ಲಿ ಸಾಮಾನ್ಯವೆ. ಆದರೆ ಕಾಲ ಪಲ್ಲಟಕ್ಕಾಗಿ ನಮ್ಮ ಕಾಲಘಟ್ಟವನ್ನು ಆಯ್ಕೆ ಮಾಡಿಕೊಂಡಿದೆ ಎಂದಾಗ ಅದು ಕ್ರೂರ ಆಯ್ಕೆಯಾಗಿ ತೋರುತ್ತದೆ.
ಹೀಗೆ ಇಂತಹ ಪಲ್ಲಟಗಳ ಕುರಿತು ವಿಷಾದವಾಗಿ ಮಾತನಾಡುವದರ ಹೊರತಾಗಿ ಬೇರೆನಾದರು ಮಾಡಲು ಸಾಧ್ಯವೇ ಎಂದು ತಮ್ಮ ಮುಂದೆ ಕಳವಳವನ್ನ ಪ್ರಶ್ನೆಯೊಂದಿಗೆ ದಾಟಿಸುತ್ತಾ ಮಾತನ್ನ ಮುಗಿಸುತಿದ್ದೇನೆ

No comments:

Post a Comment