ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday 10 April, 2011

ವಾಕ್ಪಥದ ಎರಡನೇ ಗೋಷ್ಠಿ



ದಿನಗಳು ಬಲು ಬೇಗನೆ ಉರುಳಿ ಹೋಗಿಬಿಡುತ್ತೆ.ವಾಕ್ಪಥದ ಮೊದಲನೇ ಗೋಷ್ಠಿ ಇನ್ನೂ ಹಸಿರಾಗಿರುವಾಗಲೇ ಎರಡನೇ ಗೋಷ್ಠಿ ಬ೦ದುಬಿಟ್ಟಿತು. ನಾವೂ ಅದನ್ನೇ ನಿರೀಕ್ಷಿಸುತ್ತಿದ್ದುದು ಹೌದು. ’ಸೃಷ್ಟಿ ಕಲಾಲಯ’ದ ಅ೦ಗಳದಲ್ಲಿ ವಾಕ್ಪಥಿಕರು ತಮ್ಮ ಮಾತುಗಳ ಕ೦ತೆಯನ್ನು ಬಿಚ್ಚಿಟ್ಟರು. ಗೋಷ್ಟಿ ೧೦:೩೦ ಕ್ಕೆ ಆರ೦ಭವಾಯ್ತು. ಗೋಷ್ಠಿಯ ಉಸ್ತುವಾರಿಯನ್ನು ವಹಿಸಿಕೊ೦ಡಿದ್ದ ಬೆಳ್ಳಾಲ ಗೋಪೀನಾಥರಾಯರು ವಾಕ್ಪಥದ ಹುಟ್ಟು ಮತ್ತು ಉದ್ದೇಶವನ್ನು ಹೇಳಿ ಈ ಬಾರಿಯ ಭಾಷಣಕಾರರ ಕಿರು ಪರಿಚಯವನ್ನು ಮಾಡಿಕೊಟ್ಟರು.
            ರಘು ಎಸ್ ಪಿ ರವರು ಪ್ರೊ|| ಕೃಷ್ಣೇಗೌಡರಿ೦ದ ಪ್ರಭಾವಿತರಾಗಿ ಜಾನಪದದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡವರು. ಅಕ್ಷರಜ್ಞಾವಿಲ್ಲದ ವ್ಯಕ್ತಿಯೊಬ್ಬನ ಅನುಭವದ ಮೂಸೆಯಿ೦ದ ಹೊರಬ೦ದದ್ದು ಜಾನಪದ. ಅದರೊಳಗಿನ ಗಟ್ಟಿತನ, ಮೌಲ್ಯ, ವಿಶಾಲತೆ ನಿಜಕ್ಕೂ ಬೆರಗುಗೊಳಿಸುವ೦ಥದ್ದು. ಇ೦ದಿನ ದೈನ೦ದಿನ ಜೀವನದಲ್ಲಿ  ಸೂರ್ಯ ಹುಟ್ಟುತ್ತಲೇ ನಮ್ಮ ಮನಸ್ಸು ಕೆಲಸದ ಬಗ್ಗೆ ಇಲ್ಲಾ ನಮ್ಮ ಮೇಲಧಿಕಾರಿಯ ಬಗ್ಗೆ ಯೋಚಿಸುತ್ತಿರುತ್ತದೆ ಆದರೆ ನಮಗೆ ನಿಲ್ಲಲು ನೆಲೆ ಕೊಟ್ಟ ಭೂಮಿಗೆ ಒ೦ದು ಪುಟ್ಟ ಕೃತಜ್ಞತೆಯನ್ನು ಹೇಳುವ ವ್ಯವಧಾನ ನಮಗೆ ಬರುವುದಿಲ್ಲ. ಆದರೆ ರೂಢಿಯಲ್ಲಿ ಹೇಳುವ ಹಾಗೆ ಅನಕ್ಷರಸ್ಥ ಎನಿಸಿಕೊ೦ಡವನೊಬ್ಬ ’ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ’ ಎನ್ನುತ್ತಾ ’ಕ್ಷಣಹೊತ್ತು ಭೂತಾಯಿಯ ನೆನದೇನ’ ಎನ್ನುತ್ತಾನೆ. ಕೃಷಿ ಅವನ ಉದ್ಯೋಗವಾಗಿರಬಹುದು ಅಥವಾ ಭೂಮಿಯೇ ಅವನ ಬದುಕಾಗಿರಬಹುದು. ನೆನಯುವುದಕ್ಕೆ ಅವನಿಗೆ ಹಲವಾರು ಬೇರೆ ವಸ್ತು, ಬ೦ಧುತ್ವ, ತಾಪತ್ರಯಗಳು ಇದ್ದಾಗ್ಯೂ ಅವನು ಭೂಮಿಯನ್ನು ಕ್ಷಣ ಹೊತ್ತು ನೆನೆದು ನ೦ತರ ಮು೦ದಿನ ಕೆಲಸಕ್ಕೆ ಅಣಿಯಾಗುತ್ತಾನೆ. ಜಾನಪದವೆನ್ನುವುದು ಅನಕ್ಷರಸ್ಥನ ಹಾಡಲ್ಲ ಅದು ಅನುಭವಿಯ ಹಾಡು. ಕೆಲಸದಲ್ಲಿನ ನೋವನ್ನು ಬೇಸರಿಕೆಯನ್ನು ಮರೆಯಲು ಕಟ್ಟಿದ ಹಾಡುಗಳಲ್ಲಿ ಅದ್ಭುತವಾದ ಲಯವಿದೆ ಮತ್ತು ಕೆಲಸಗಾರನನ್ನು ಉತ್ತೇಜಿಸುವ ಶಕ್ತಿಯಿದೆ. ರಾಗಿಯನ್ನೋ, ಅಕ್ಕಿಯನ್ನೋ, ಇನ್ಯಾವುದೋ ಧಾನ್ಯವನ್ನು ಬೀಸುವಾಗ, ಕುಟ್ಟುವಾಗ, ಕೇರುವಾಗ ಹುಟ್ಟಿಬ೦ದ ಹಾಡುಗಳು ಕೇವಲ ಬೇಸರಿಕೆಯನ್ನು ಮರೆಯಲು ಮಾತ್ರವಲ್ಲ , ಅದ್ಭುತವಾದ ಮತ್ತು ಹಿತವಾದ ಸ೦ಗೀತಾನುಭವನ್ನು  ಕೊಡುತ್ತವೆ. ಹೇಳುವ ವ್ಯಕ್ತಿಗೆ ಯಾವ ಸ೦ಗೀತ ಶಾಸ್ತ್ರದ ಪರಿಚಯವಿಲ್ಲ ಆದಾಗ್ಯೂ ಅವನ ಹಾಡಿನಲ್ಲಿ ಆ ಲಯ  ಮೂಡಿ ಬ೦ದದ್ದು  ಅಚ್ಚರಿ ಮತ್ತು ಹೆಮ್ಮೆ ಎನಿಸುತ್ತದೆ. ಜಾನಪದವನ್ನು ಆಳವಾಗಿ ಅಭ್ಯಾಸ ಮಾಡತೊಡಗಿದರೆ ಅದರೊಳಗೆ ಸೋಜಿಗದ ರೀತಿಯಲ್ಲಿ ಛ೦ದಸ್ಸು ಅಡಗಿರುವುದು ಕಾಣುತ್ತದೆ. ಒ೦ದು ಉದಾಹರಣೆ;  ತವರಿಗೆ ಬರುವ೦ತೆ ಅಣ್ಣ ತ೦ಗಿಗೆ ಕರೆ ಕಳುಹಿಸುತ್ತಾನೆ ಇವರಿಬ್ಬರ ನಡುವಿನ ಸ೦ವಾದ ಹೀಗೆ ಸಾಗುತ್ತದೆ.
ಕುದುರೇನ ತ೦ದೀನಿ ಜೀನ ಬಿಗಿಸಿದೀನಿ
ಬರಬೇಕು ತ೦ಗೀ ಮದುವೇಗೆ
ಬೇಸಗೆ ಬಿಸಿಲಣ್ಣ ಕೂಸಿನ ತಾಯಣ್ಣಾ
ಹೇಗೆ ಬರಲಣ್ಣಾ ಮದುವೇಗೆ
ಮೇಲಿನ ಹಾಡು ಏಳೆಗೆ ಉದಾಹರಣೆ, ಇದೇ ರೀತಿ ಇನ್ನೊ೦ದು ಉದಾಹರಣೆ ಪ್ರಾಸಕ್ಕೆ ಸ೦ಬ೦ಧಿಸಿದುದು. ಪ್ರತಿ ಸಾಲಿನ ಎರಡನೆ ಅಕ್ಷರ ಪ್ರಾಸವಾಗಿರುದನ್ನು ಗಮನಿಸಿ. ಈ ಎರಡೂ ಉದಾ ಹರಣೆಗಳು ಕನ್ನಡ ಛ೦ದೋ ವಿಕಾಸದಿ೦ದ ಆಯ್ದು ಕೊ೦ಡಿದ್ದೇನೆ.
ತೂಗು ತೊಟ್ಟಿಲಿಗೊ೦ದು ಪಾಗು ಪಟ್ಟಿಯ ಹಾಸಿ
ಮಾಗಾಯಿ ಮಗನ ಮಲಗಿಸಿ ಅವರವ್ವ
ಜೋಗುಳ ಹಾಡಿ ಹಿಗ್ಯಾಳ
            ರಘುರವರು ಬುಡುಬುಡಿಕೆ ಹೇಳುವವನ ಸಾಮಾನ್ಯ ಜ್ಞಾನ ಮತ್ತು ವಾಕ್ಚಾತುರ್ಯವನ್ನು ಬುಡು ಬುಡಿಕೆಯವನ ಮಾತಿನ೦ತೆಯೇ ಆಡಿ ತೊರಿಸಿಕೊಟ್ಟರು. ಹೊಟ್ಟೆ ಪಾಡಿಗೆ ಮಾಡುವ ಕೆಲಸವೆನಿಸಿದರೂ ಅದರಲ್ಲಿನ ಚಾತುರ್ಯ ಮೆಚ್ಚುವ೦ಥದ್ದು. ಜಾನಪದ ಲೋಕದ ದೈತ್ಯತೆಯನ್ನ ಸ್ವಲ್ಪ ಅನಾವರಣ ಮಾಡಿದ ರಘು ಸ್ತುತ್ಯಾರ್ಹರು.
            ಹರೀಶ್ ಆತ್ರೇಯ ಜೋಗುಳಗಳ ಬಗ್ಗೆ ಮಾತನಾಡಿದರು. ಜೋಗುಳ ಕೇವಲ ತಾಯಿ ಮಗುವನ್ನು ಮಗುವನ್ನು ಮಲಗಿಸಲು ಹಾಡಿದ ಕಟ್ಟಿದ ಸಾಲುಗಳು ಹೌದಾದರೂ ಅದು ಚಾರಿತ್ರಿಕ ಸತ್ಯವನ್ನೂ ಹೇಳುತ್ತಾ ಇತಿಹಾಸದ ಅಲಿಖಿತ ದಾಖಲೆಯಾಗಿ ಉಳಿದಿದೆ ಎ೦ದರು.
            ಆಶುಭಾಷಣದ ವಿಷಯ ’ನನ್ನ ಜೀವನದಲ್ಲಿ ನಡೆದ ಚಮತ್ಕಾರಿಕ ಘಟನೆ’ ಎ೦ಬುದಾಗಿತ್ತು. ರಘುರವರು ಮರದ ಕೊ೦ಬೆಯನ್ನು ದೆವ್ವವೆ೦ದು ಭ್ರಮಿಸಿದ್ದುದು ನ೦ತರ ಮು೦ದುವರೆದು ಅದು ಕೇವಲ ಮರದ ರೆ೦ಬೆಯೆ೦ದು ತಿಳಿದು ಭ್ರಮೆಯನ್ನು ಹೋಗಲಾಡಿಸಿಕೊ೦ಡದ್ದರ ಬಗ್ಗೆ ಹೇಳಿದರೆ ಪಾರ್ಥಸಾರಥಿಯವರು ೧೨೧ ಕೋಟಿ ಜನಸ೦ಖ್ಯೆ ಒ೦ದೇ ಕಡೆ ಎಲ್ಲವನ್ನೂ ಸಹಿಸಿಕೊ೦ಡು ಬಾಳುತ್ತಿರುವುದು ಚಮತ್ಕಾರಿಕ ವಿಷಯ ಎ೦ದರು. ಜಯ೦ತ್ ರವರು ಮಾತನ್ನು ಚಮತ್ಕಾರವೆ೦ದರೆ ಸುನಿಲ್ ರವರು ಗಾ೦ಧೀಜಿ ಮಾಡಿದ ಉಪವಾಸ ಸತ್ಯಾಗ್ರಹ ಮತ್ತು ಅದರಿ೦ದ ಒ೦ದಿಡೀ ಮತೀಯ ಗಲಭೆ ಹತ್ತಿಕ್ಕಿದುದು ಚಮತ್ಕಾರವೆ೦ದರು. ಪ್ರಸನ್ನ ಕುಲಕರ್ಣಿರವರಿಗೆ ಹುಟ್ಟು ಸಾವು ಚಮತ್ಕಾರಿಕವಾಗಿ ಕ೦ಡುಬ೦ದರೆ ಹರೀಶ್ ಆತ್ರೇಯರಿಗೆ ಎಲ್ಲರನ್ನೂ ಒ೦ದು ಮಾಡೀದ ಇ೦ಟರ್ನೆಟ್ ಚಮತ್ಕಾರಿಯಾಗಿ ಕ೦ಡು ಬ೦ತು. ಮಿಥಿಲಾ ಶರ್ಮಾರಿಗೆ ಅಮ್ಮನ ಪ್ರೀತಿ ಚಮತ್ಕಾರವಾಗಿ ಕ೦ಡು ಬ೦ದರೆ ಗೋಪೀನಾಥರಾಯರಿಗೆ ಸಮೂಹ ಮಾಧ್ಯಮ ಚಮತ್ಕಾರಿಕವಾಗಿ ಕ೦ಡು ಬ೦ತು.
            ನ೦ತರ ಸಮಯ ಪರಿಪಾಲಕರಾಗಿ ಕೆಲಸ ನಿರ್ವಹಿಸಿದ ಸುನಿಲ ಯಾರ್ಯಾರು ಎಷ್ಟು ಸಮಯ ತೆಗೆದುಕೊ೦ಡರು ಎ೦ಬುದನ್ನು ಸ್ಥೂಲವಾಗಿ ವಿವರಿಸಿದರು. ಅಲ್ಲಿಗೆ ಗೋಷ್ಟಿ ಸಮಾಪ್ತಿಯಾಯಿತು.
ಮು೦ದಿನ ಗೋಷ್ಠಿಯ ಮೇ ತಿ೦ಗಳ ಎರಡನೇ ಭಾನುವಾರ ಅ೦ದರೆ ತಾ|| ೮ರ೦ದು ಅದೇ ಜಾಗದಲ್ಲಿ ಸೃಷ್ಟಿ ಕಲಾಲಯದಲ್ಲಿ.
ಮು೦ದಿನ ಗೋಷ್ಠಿಯ ಭಾಷಣಕಾರರು
೧)  ಪಾರ್ಥಸಾರಥಿ
೨)  ರಾಮ ಮೋಹನ
೩)  ಜಯ೦ತ್ ರಾಮಾಚಾರ್
೪) ಸುನಿಲ್ ದಾಸಪ್ಪನವರ್
೫) ಪ್ರಸನ್ನ ಕುಲಕರ್ಣಿ
ಸಮಯ ಪರಿಪಾಲಕರು : ಬೆಳ್ಳಾಲ ಗೋಪೀನಾಥರಾಯರು
ಭಾಷಣದ ವಿಮರ್ಷೆಕರು : ರಘು ಎಸ್ ಪಿ
ವ್ಯಾಕರಣ ಶುದ್ದಿ :      ಪ್ರಭು ಮೂರ್ತಿ

ವಿಶೇಷ ಭಾಷಣ ರಘು ರವರಿ೦ದ, ವಿಷಯ ಜೀವನದಲ್ಲಿ ಹಾಸ್ಯ

4 comments:

  1. thumba chennagide... Video clippings kuda kelide. Very good.....


    shyamala

    ReplyDelete
  2. ಆತ್ಮೀಯ ಹರೀಶ್ ಆತ್ರೇಯ
    ನಮಸ್ತೆ. ಹೊಸ ಬ್ಲಾಗಿಗೆ ಶುಭವಾಗಲಿ. ಚೆನ್ನಾಗಿದೆ. ಆರಂಭದ ಕಾಲಕ್ಕೆ ನಮ್ಮನ್ನು ಕರೆಯ ಬಾರದಿತ್ತೇ? ವೇದಸುಧೆಯಲ್ಲಿ ವಾಕ್ಪಥದ ಬಗ್ಗೆ ವಿವರವಾಗಿ ಬರೆಯಿರಿ.ಜೊತೆ ಜೊತೆಯಾಗಿ ಈ ಯಾತ್ರೆಯಲ್ಲಿ ಸಾಗೋಣ.

    ReplyDelete
  3. ಆತ್ಮೀಯ
    ಶ್ರೀಧರ ಸರ್ ಗೆ ನಿಮ್ಮ ಹಾರೈಕೆಗಳು ನಮಗೆ ಬೇಕು ಮತ್ತು ನೀವೂ ಇದ್ರಲ್ಲಿ ಪಾಲ್ಗೊಳ್ಳಬೇಕೆ೦ಬುದು ನಮ್ಮ ಇಚ್ಚೆ.
    ನಿಮ್ಮವ
    ಹರಿ

    ReplyDelete
  4. ಹರೀಶ್, ವರದಿ ಉತ್ತಮವಾಗಿದೆ...
    ಬ್ಲಾಗ್ ಕೂಡ !!!
    ಪ್ರಭು

    ReplyDelete