ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ
ಹೌದು ಎಂದಿನಂತೆ ವಾಕ್ಪಥಿಕರ ಏಳನೆಯ ಸುಂದರ ಗೋಷ್ಟಿ ಸೃಷ್ಟಿ ವೆಂಚರ್ಸ್ ನಲ್ಲಿ ಸಪ್ಟೆಂಬರ್ ನ ೨೫ ನೆಯ ತಾರೀಖು ತನ್ನ ನಿಶ್ಚಿತಾವಧಿಯಲ್ಲಿ ಗುಂಪಿನಲ್ಲಿ ವಿಶೇಷವಾಗಿ ನೆರೆದು ರಂಜಿಸಿತು.
ಅದರ ವೈವಿಧ್ಯಮಯ ವಿಷೇಷತೆಯನ್ನು ನೀವೂ ( ಇದನ್ನು ಓದುತ್ತಿರುವ, ಹಾಗೂ ಸವಿಯುತ್ತಿರುವ ನೀವೆಲ್ಲ ಪ್ರೇಕ್ಷಕರೂ ಅಲ್ಲಗಳೆಯಲಾರಿರಿ) ಅದಕ್ಕಾಗಿಯೇ ನನ್ನ ವಿಟೋ ಪವರ್ ಉಪಯೋಗಿಸಿ ಪ್ರಭು ಅವರಿಂದ ಇಂದಿನ ವಿಷಯ ವರದಿಯನ್ನು ಬರೆಯಲು ಅನುಮತಿ ಪಡೆದಿದ್ದೆ.
ಇಂದಿನ ಈ ಏಳನೆಯ ಹೆಜ್ಜೆಯ ವಿಶೇಷತೆಯನ್ನು ಬಣ್ಣಿಸಲು ಪದಗಳಿಲ್ಲ.ಕಳೆದ ವರ್ಷದ ಮಾರ್ಚಿ ಎಪ್ರಿಲ್ ನಲ್ಲಿ ಶೈಶವಾವಸ್ಥೆಯಲ್ಲಿ ಜನ್ಮ ತಾಳಿದ ಈ ನಮ್ಮ ನಿಮ್ಮೆಲ್ಲರ ವಾಕ್ಪಥದ ಕೂಸು ತನ್ನದೇ ವೈವಿಧ್ಯತೆಗಳಿಂದ ಇಷ್ಟು ಬಲಗೊಳ್ಳಬಹುದು ಎಂಬ ಊಹೆ ನನಗಂತೂ ಖಂಡಿತಾ ಇರಲಿಲ್ಲ.ಯಾವುದೇ ಕೂಟ ಅಥವಾ ಗುಂಪು ಜನ್ಮ ತಾಳಲು ನಿರ್ಧಿಷ್ಟ ಅವಧಿ ಅಥವಾ ಹೂಟಗಳಿಲ್ಲ. ಆದರೆ ಅದು ತನ್ನ ಹೆಜ್ಜೆಯನ್ನು ಗುರಿಯತ್ತ ಕೇಂದ್ರೀಕರಿಸಿ ಅದೇ ದಾರಿಯಲ್ಲಿ ಕ್ರಮಿಸಿ ನೆರೆಯಲು ಅಥವಾ ಬೆಳೆಯಲು ಮಾನಸಿಕ ದೄಢತೆ ಮತ್ತು ಹುಮ್ಮಸ್ಸು ಮತ್ತು ಅದೇ ದಾರಿಯಲ್ಲಿ ನಡೆಸಲು ಹೊಂದಾಣಿತ ಯೋಜಿತ ಮನಸ್ಸೂ , ಪ್ರೇರಣೆ ಕೊಡುವ, ವ್ಯವಸ್ಥಿತ ಸಂಚಾಲನೆ ಮಾಡುವ ವ್ಯಕ್ತಿ ಅಥವಾ ಗುಂಪಿನ ಇವೆಲ್ಲಕ್ಕಿಂತ ಹೆಚ್ಚು ಈ ಅಂದದ ವಾಕ್ಪಥವನ್ನು ಅಚ್ಚುಕಟ್ಟಾಗಿ ನಿಯಮಿತವಾಗಿ ನಡೆಸಲು ಜಾಗವೂ ಬೇಕು, ಪ್ರೋತ್ಸಾಹವೂ ಬೇಕು. ಇವೆಲ್ಲವನ್ನೂ ನಿಯಮಿತವಾಗಿ ಕಲ್ಪಿಸಿ ನಡೆಸಿ ಮುನ್ನುಗ್ಗುತ್ತಿರುವ ವಾಕ್ಪಥ ದ ತಂಡಕ್ಕೆ ಸೃಷ್ಟಿ ವೆಂಚರ್ಸ್ ಮತ್ತು ಸಂಪದಿಗರೆಲ್ಲರ ಸಹಕಾರ ಬಣ್ಣನೆಗೂ ಮೀರಿದ್ದು.
ಇರಲಿ ಇವತ್ತಿನ ವಿಶೇಷವೆಂದಿರಾ?
ಅದಕ್ಕೇ ಬರುತ್ತಿದ್ದೇನೆ , ಒಂದೆರಡಲ್ಲ ಮರಾಯರೇ, ಮೊದಲನೆಯದು ಸಂಪದಿಗ ಮಿತ್ರರಾದ ಶ್ರೀಯುತ ಸತ್ಯ ಚರಣ ಮತ್ತು ಹರ್ಷ ಸಾಲಿಮಠ್ ರವರು ಸಕ್ರಿಯವಾಗಿ ಭಾಗವಹಿಸಿದ್ದು. ಎರಡನೆಯ ವಿಶೇಷ ಶಾಸ್ತ್ರೀಯವಾಗಿ ಬರುತ್ತಿರುವ ಆಶು ಭಾಷಣ ಬಿಟ್ಟು ಕೊಟ್ಟು ವಾಕ್ಪಥಿಕರೆಲ್ಲರ ಪಾತ್ರದ ಹಾಗೂ ಮುಂದಿನ ವಾಕ್ಪಥದ ಪಥವನ್ನು ಯೋಜಿಸುವ ಗುರುತರ ಯೋಚನೆಯನ್ನು ಮಂಡಿಸಲು ಕಲ್ಪಿಸಿದ್ದು. ನೆರೆದವರು ಸ್ವಲ್ಪವಾದರೂ ಎಲ್ಲರ ಆಶಯ ಯೋಜನೆಯ ಯೋಚನೆ ಯನ್ನು ಬಣ್ಣಿಸುವ ಕಾರ್ಯದಲ್ಲಿನ ತಲ್ಲೀನತೆ ಹಾಗೂ ಉತ್ಸಾಹ ನಿಜವಾಗಿಯೂ ಮುಂದಿನ ದಿನಗಳಲ್ಲಿನ ವಾಕ್ಪಥದ ನಾವೀನ್ಯ ಹಾಗೂ ರೂಪು ರೇಷೆಗೆ ಸ್ಪಷ್ಟ ಆಕಾರವನ್ನೇ ನೀಡಿತ್ತು.ಎಲ್ಲದಕ್ಕೂ ಕುಂದಣವಿಟ್ಟಂತೆ ನಮ್ಮೆಲ್ಲಾ ಆಸೆ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸುತ್ತಿರುವ ನಾಗರಾಜ ನಾವುಂದರು ಈಸಾರಿ ತಮ್ಮ ಮಹತ್ತರ ಯೋಜನೆಯೊಂದರಲ್ಲಿ ವಾಕ್ಪಥವನ್ನು ಸಕ್ರಿಯವಾಗಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿ ಉಜ್ವಲ ಭವಿಷ್ಯವನ್ನೂ ಗುರುತರ ಜವಾಬ್ದಾರಿಯನ್ನೂ ಹೊರಿಸಿದರು. ಇದೇ ಅಕ್ಟೋಬರ್ ಮೂವತ್ತರಂದು ಸೃಷ್ಟಿ ವೆಂಚರ್ಸ್ ನಡೆಸುತ್ತಿರುವ ಪುಸ್ತಕ ಪರಿಷೆಯಲ್ಲಿ ವಾಕ್ಪಥದ ಬ್ಯಾನರಿನಡಿಯಲ್ಲಿ ಇಡೀ "ಪುಸ್ತಕ ಪರಿಷೆ" ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ, ಅದೂ ಇದಕ್ಕೆಂದೇ ವಿಷೇಷವಾಗಿ ಆಯೋಜಿಸಲ್ಪಟ್ಟ ಮಂಚದಲ್ಲಿ ಅದೂ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನ ." ಇವೆಂಟ್ ಮೆನೇಜ್ಮೆಂಟ್!!!" ಇದಲ್ಲವೇ ವಾಕ್ಪಥದ ಮೇಲಿನ ಭರವಸೆ ಮತ್ತು ಪ್ರೀತಿ. .
ಇವತ್ತಿನ ಭಾಷಣಗಳಲ್ಲಿ ಮೊದಲಿಗರಾದ ಸಂಪದದ ಹಾಸ್ಯ ಲೇಖಕರಾದ "ಗೋಪಾಲ್ಜೀಯವರು" ಇಂದಿನ ಮದುವೆ ಮತ್ತು ಅಂದಿನ ಮದುವೆಯ ಬಗ್ಗೆ ತಮ್ಮದೇ ಹಾಸ್ಯ ಶೈಲಿಯಲ್ಲಿ ನಿರರ್ಗಳವಾಗಿ ಮೂದಲಿಸಿದರು. ಅವರ ಮಾತು ನಾತಿ ಚರಾಮಿಯಿಂದ ಹೊರಟು ಇಂದಿನ ಕೂಡಿಬಾಳಿದರೆ....( ಲಿವಿಂಗ್ ಟುಗೆದರ್) ಎಂಬಲ್ಲಿಗೂ ಬಂದು.... ಅವರೇ ತಮ್ಮ ಮಾತಿನಲ್ಲೇ ಈಗಿನವರಿಗೆ "ಲಿವಿಂಗ್ ಟುಗೆದರ್" ಎಂಬ ಶಬ್ದದ ಅರ್ಥ ವೂ ಗೊತ್ತಿಲ್ಲದೇ ಲಿವಿಂಗ್ ಟುಗೆದರ್ ಮಾಡುತ್ತಿದ್ದಾರೆ ಎನ್ನುವಾಗ ನನಗೇ ಸಂಶಯ ಬಂತು. ಅಂದರೆ ಈ ವಿಷಯ ಇವರಿಗಂತೂ ಸರಿಯಾಗಿಯೇ ತಿಳಿದಿರಬಹುದು ಅಂತ.
ಎರಡನೆಯ ಭಾಷಣ ಹರೀಶ್ ಅತ್ರೇಯ ರಿಂದ ಇಂದಿನ ಯುಗದಲ್ಲಿ ಭಗತ್ ಸಿಂಗ್ ನ ನಿಲುಮೆಯನ್ನು ಪ್ರತಿ ಪಾದಿಸುತ್ತಾ, ಆದರ್ಶ ವಾದಿಯಾಗಲು ಅಂದಿನ ಅಂಗ್ರೇಜೀ ಸರಕಾರದ ಅಧಿಕಾರಸ್ಥರ ಅತೀ ಕ್ರೂರ ನಿಲುವು ದಾರುಣವಾದ ಸಾಮಾನ್ಯರ ಬದುಕು ಕಾರಣವಾಗಿತ್ತು ಮತ್ತು ಈಗಿನ ನಮ್ಮ ಕಂಟಕಕಾರಿ ನಿರ್ಲಿಪ್ತ ನಿಲುವು ಬದಲಾಗ ಬೇಕಿರುವ ಔಚಿತ್ಯವನ್ನೂ ತನ್ನದೇ ಆದ ಆಪ್ತ ವೈಚಾರಿಕತೆಯುಕ್ತ ಮಾತುಗಳಲ್ಲಿ ವಿವರಿಸಿದರು.
ಮೂರನೆಯ ಭಾಷಣ ನಮ್ಮ ನಿಮ್ಮೆಲ್ಲರ ಸಂಪದಿಗ ಸ್ನೇಹೀ ತರುಣ ಸುಂದರ ಉತ್ಸಾಹೀ ಹರ್ಷ ಸಾಲಿಮಠರವರದ್ದು . ಇವರು ತೆಗೆದು ಕೊಂಡ ವಿಷಯ ಇಂದಿನ ಭಾರತದಲ್ಲಿ ಗಾಂಧೀಜಿಯ ತತ್ವ. ಅವರ ಭಾಷಣ ನಿಜವಾಗಿಯೂ ಆಕರ್ಷಕವಾಗಿತ್ತು. ಕೃಷ್ಣ, ಚಾಣಕ್ಯ, ಬಸವಣ್ಣನವರ ದೃಷ್ಟಿ ಕೋನಗಳನ್ನು ಇಂದಿನ ಭಾರತದ ವಿದ್ಯಮಾನಗಳಿಗೆ ನಮ್ಮ ನಡೆನುಡಿಯನ್ನು ಸರಳೀಕರಿಸಿ ಕೊಂಡು ಅಳವಡಿಸಿಕೊಂಡಾಗ ಸರಳತೆಯತ್ತ ಪ್ರತಿಯೋರ್ವರೂ ಹೆಜ್ಜೆ ಹಾಕಬಹುದೆಂಬುದನ್ನು ವಿವರಿಸುತ್ತಾ ತನ್ನದೇ ದೃಷ್ಟಿಯಲ್ಲಿ ಪ್ರತಿಪಾದಿಸಿದರು.
ನಂತರದಲ್ಲಿ ಶ್ರೀಯುತ ನಾಗರಾಜ ನಾವುಂದದವರು ಮಾತನಾಡುತ್ತಾ ತಮ್ಮದೇ ಆದ ಪುಸ್ತಕ ಪರಿಷೆಯ ನಾಲ್ಕನೆಯ ಸಡಗರದಲ್ಲಿ ವಾಕ್ಪಥ ಹೇಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಸಂಭ್ರಮಿಸ ಬಹುದೆಂಬುದನ್ನು ವಿವರಿಸಿ ವಾಕ್ಪಥದ ಮೇಲಿನ ಅವರ ನಂಬಿಕೆಯನ್ನು ಧೃಢೀಕರಿಸಿದರು.
ಇವತ್ತಿನ ಹೆಜ್ಜೆಯಲ್ಲಿ ಅತ್ಯಂತ ಖುಷಿ ಕೊಟ್ಟಿದ್ದು ವಾಕ್ಪಥಿಕರೆಲ್ಲರ ಮನಸಾ ವಾಚಾ ಭಾಗವಹಿಸುವಿಕೆ ಮತ್ತು ಪ್ರತಿಯೊಬ್ಬರ ಮನದಲ್ಲಿ ವಾಕ್ಪಥದ ಬಗೆಗೆ ತನ್ನದೇ ದೃಷ್ಟಿ ಕೋನ ಹಾಗೂ ವಾಕ್ಪಥದ ಮುಂದಿನ ಹೆಜ್ಜೆಗಳ ಬೆಳವಣಿಗೆಯ ಬಗೆಗೆ ಹೊಂದಿರುವ ಮಮಕಾರ, ಕಾಳಜಿ ಅತ್ಮೀಯತಾ ಭಾವನೆಗಳ ಮುಕ್ತ ಧೋರಣೆ ಹೊಂದಿರುವುದೂ. ಈ ಬಗೆಗೆ ಮೊದಲಿನಿಂದಲೂ ಸಕ್ರಿಯವಾಗಿ ಭಾಗವಹಿಸುತ್ತಿರುವ ವಾಕ್ಪಥಿಕರಾಗಲೀ ಇಂದೇ ಸೇರಿ ಭಾಗವಹಿಸಿ ಈ ಗುಂಪಿನೊಂದಿಗೆ ಮೇಳವಿಸಿಕೊಂಡ ಸತ್ಯ ಚರಣರ ಆಪ್ತ ಗೆಳೆಯ ದಿಲೀಪ್ ಎಸ್ ಎಮ್ ಆಗಲೀ , ಮೊದಲನೆಯದಾಗಿ ಭಾಗವಹಿಸಿ ತನ್ನ ದಿಟ್ಟ ನೇರ ಆಕರ್ಷಣಕಾರೀ ಭಾಶಣದಿಂದ ಎಲ್ಲರನ್ನೂ ಆಕರ್ಷಿಸಿದ ಸಂಪದಿಗ ಸ್ನೇಹಿ ಹರ್ಷ ಸಾಲಿಮಠ್ ಆಗಲೀ ತನ್ನೆಲ್ಲಾ ಸ್ವಂತ ಕೆಲಸವನ್ನು ಬದಿಗೊತ್ತಿ ಇವತ್ತಿನ ಗೋಷ್ಟಿಯಲ್ಲಿ ಭಾಗವಹಿಸಿ ತನ್ನ ಅಮೂಲ್ಯ ಸಲಹೆ ಸಹಕಾರವನ್ನಿತ್ತ ಶ್ರೀಯುತ ಸತ್ಯ ಚರಣರಾಗಲೀ, ಭಗತ್ ಸಿಂಗ್ ರ ಜೀವನದ ಹೃದಯ ಸ್ಪರ್ಷೀ ಘಟನೆಗಳನ್ನು ತನ್ನದೇ ವಿಶಿಷ್ಟ ಸುಂದರ ಆಕರ್ಷಕ ಶೈಲಿಯಲ್ಲಿ ವಿವರಿಸುತ್ತಾ ಅದ್ಭುತ ಲೋಕದಲ್ಲಿ ಕೊಂಡೊಯ್ದ ನಮ್ಮ ನಿಮ್ಮೆಲ್ಲರ ಕಣ್ಮಣಿ ಆತ್ರೇಯರಾಗಲೀ , ಮೂಲಾಧಾರವಾಗಿದ್ದು ಪ್ರತಿ ಸಲ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಆಕರ್ಷಕ ಬ್ಯಾನರ್ ಸೃಷ್ಟಿಸಿದ ರಘು ಅವರಾಗಲೀ , ಇವತ್ತಿನ ಈ ವಿಶೇಷ ಗೋಷ್ಟಿಯನ್ನು ಉನ್ನತ ಸ್ಥಾನದಲ್ಲಿಡಲು ಶ್ರಮಿಸಿದ ಜಯಂತ್ ಆಗಲೀ , ಇವತ್ತಿನ ಗೋಷ್ಟಿಯ ಮುಕ್ತ ಯೋಚನೆಗಳಿಗೆ ಯೋಜಿಸಿದ ವಾಕ್ಪಥದ ಸೃಷ್ಟಿ ಕರ್ತ ಶ್ರೀಯುತ ಪ್ರಭು ಆಗಲೀ, ತನ್ನ ವಿಶಿಷ್ಟ ಸಮ್ಮೋಹನಾ ಕಂಠದಿಂದ ಸಭಿಕರನ್ನು ಆಕರ್ಷಿಸೋ ವಾಕ್ಪತದ ಅವಿಭಾಜ್ಯ ಅಂಗವಾದ ಹೊಳೆನರಸೀಪುರದ ಮಂಜುವಾಗಲೀ, ತನ್ನದೇ ವಿಶಿಷ್ಟ ಛಾಪು ಹೊಂದಿರುವ ಶ್ರೀಯುತ ರಾಮ ಮೋಹನ್ ರಾಗಲೀ, ಹಿರಿಯ ಸಹೃದಯಿ ಎಮ್ ಎನ್ ಎಸ್ ರಾವ್ ಅವರಾಗಲೀ ಎಲ್ಲರ ಉತ್ಸಾಹ ವರ್ಣನಾತೀತ. ಈ ಉತ್ಸಾಹ ಪ್ರೋತ್ಸಾಹ ಸಲಹೆ ಸಹಕಾರಗಳಿಂದ ಖಂಡಿತವಾಗಿಯೂ ವಾಕ್ಪಥದ ಮುಂದಿನ ಹೆಜ್ಜೆಗಳು ಗಮ್ಯದತ್ತ ದಾಪುಗಾಲು ಹಾಕುವುದರಲ್ಲಿ ಸಂಶಯವೇ ಇಲ್ಲ.
ಇದಕ್ಕೆಂದೇ ಮುಂದಿನ ಭಾನುವಾರ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ತಂಡವು ವಿಷೇಷ ಗೋಷ್ಟಿಯೊಂದನ್ನು ಹೊಮ್ಮಿಕೊಂಡಿದೆ. ವಾಕ್ಪಥ ದ ಹೊಣೆಗಾರಿಕೆಯನ್ನು ಶ್ರೀಯುತ ನಾಗರಾಜರ ನಂಬಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಯೋಜನೆಯನ್ನು ರೂಪಿಸಲು.
ಬರುತ್ತೀರಲ್ಲವೇ..?
ನಿಮ್ಮೆಲ್ಲರ ಅನಿಸಿಕೆಗಳಿಗೆ ಸಲಹೆಗಳಿಗೆ ಮುಕ್ತ ಸ್ವಾಗತ.
ಬರೆಯುತ್ತಿರಿ.
ಮುಂಬರುವ ದಿನಗಳಲ್ಲಿ ವಾಕ್ಪಥವು ಸರ್ವಾಂಗ ಸುಂದರವಾಗಿ ಇನ್ನೂ ಹೆಚ್ಚು ಗುರುತರ ಜವಾಬ್ದಾರಿಯನ್ನು ಹೊರಲು ಶಕ್ತವಾಗಲು ಸಂಪದಿಗರೆಲ್ಲರ ಸಲಹೆ ಸಹಕಾರ ಹಾಗೂ ಪ್ರೋತ್ಸಾಹವೂ ಅತ್ಯಗತ್ಯ.
ನೀಡುವಿರಲ್ಲವೇ....?
ಇಂತೀ ನಿಮ್ಮೆಲ್ಲರ ನೆಚ್ಚಿನ ವಾಕ್ಪಥ ತಂಡ
ದೃಶ್ಯಾವಳಿಗೆ ಇಲ್ಲಿ ಕುಟುಕಿ
೧. ಜಯಂತರ ಆರಂಭಿಕ ವಿವರ http://youtu.be/Ks2D...
೨. ಗೋಪಾಲ್ಜೀ ಯವರ ಮದುವೆಯ ಮಾತುಕಥೆ http://youtu.be/17Ve...
೩. ಹರೀಶ ಆತ್ರೇಯರ ಭಗತ್ ಸಿಂಘ್ http://youtu.be/9Fp4...
೪. ಹರ್ಷ ಸಾಲಿಮಠ್ ಅವರ ಆಕರ್ಷಕ ಶೈಲಿ http://youtu.be/jB99...
೫. ರಘು ಅವರ ಮೊನಚು ವ್ಯಾಕರಣ ವಿಮರ್ಶೆ http://youtu.be/cFue...
೫. ಭಾಷಣಗಳ ವಿಮರ್ಶೆ: http://youtu.be/cFue...
೬. ಅನಿಸಿಕೆಗಳು: http://youtu.be/iDNZ... http://youtu.be/6yc9...
೬. ಅನಿಸಿಕೆಗಳು: http://youtu.be/iDNZ... http://youtu.be/6yc9...
No comments:
Post a Comment